
ಪರಿಹಾರ ಹಿಂಪಡೆದ ರಾಜ್ಯ ಸರಕಾರಕ್ಕೆ ಮುಖಭಂಗ!
‘ಬೆಂಕಿಯೊಂದಿಗೆ ಆಟವಾಡುವುದನ್ನು ನಿಲ್ಲಿಸಿ’: ಬಿಜೆಪಿಗೆ ಮಮತಾ ಎಚ್ಚರಿಕೆ
ವರದಿಗಾರ (ಡಿ.26,2019): ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದಕ್ಷಿಣ ಜಿಲ್ಲೆಯ ಮಂಗಳೂರಿನಲ್ಲಿ ಯುವಕರು ಪ್ರತಿಭಟಸಿಲು ಮುಂದಾದ ಸಂದರ್ಭ ಪೊಲೀಸ್ ಗೋಲಿಬಾರ್ ನಿಂದ ಹತ್ಯೆಯಾದ ಇಬ್ಬರು ಅಮಾಯಕ ಜೀವಗಳಿಗೆ ಹೊರರಾಜ್ಯವು ಹೃದಯ ಮಿಡಿದಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸುವ ಮೂಲಕ ಕರ್ನಾಟಕ ರಾಜ್ಯ ಸರಕಾರಕ್ಕೆ ಸಂದೇಶ ನೀಡಿದ್ದಾರೆ.
ಕುಟುಂಬಗಳಿಗೆ ಕರ್ನಾಟಕ ಸರಕಾರ ಈ ಹಿಂದೆ ಘೋಷಿಸಿದ್ದ ತಲಾ ರೂ. 10 ಲಕ್ಷ ಪರಿಹಾರವನ್ನು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಡೆ ಹಿಡಿದ ಬೆನ್ನಿಗೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೃತ ಜಲೀಲ್ ಹಾಗೂ ನೌಶೀನ್ ಅವರ ಕುಟುಂಬಗಳಿಗೆ ತಲಾ ರೂ. 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಕೊಲ್ಕತ್ತಾದಲ್ಲಿ ಇಂದು ನಡೆದ ಸಿಎಎ-ಎನ್ಆರ್ ಸಿ ವಿರೋಧಿ ಸಮಾವೇಶದಲ್ಲಿ ಮಮತಾ ಘೋಷಿಸಿದ್ದಾರೆ.
“ಮಂಗಳೂರಿನಲ್ಲಿ ಪ್ರತಿಭಟನೆಗಳ ವೇಳೆ ಮೃತಪಟ್ಟವರ ಕುಟುಂಬಗಳಿಗೆ ತಲಾ ರೂ. 5 ಲಕ್ಷಗಳ ಚೆಕ್ ನಾವು ನೀಡುತ್ತೇವೆ,” ಎಂದು ಸಮಾವೇಶದಲ್ಲಿ ಅವರು ಹೇಳಿಕೊಂಡಿದ್ದಾರೆ.
‘ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ನೀವು ಪ್ರತಿಭಟನೆಯನ್ನು ಮುಂದುವರಿಸಿ. ನಿಮ್ಮ ಪರವಾಗಿ ನಾನೆಂದೂ ನಿಮ್ಮ ಜೊತೆಗಿರುತ್ತೇನೆ. ನೀವು ಯಾರಿಗೂ ಭಯಪಡಬೇಡಿ. ಬೆಂಕಿಯೊಂದಿಗೆ ಆಟವಾಡದಂತೆ ನಾನು ಬಿಜೆಪಿಯನ್ನು ಎಚ್ಚರಿಸುತ್ತೇನೆ’ ಎಂದು ಹೇಳಿದ್ದಾರೆ.
ಸರಕಾರ ಸಿಎಎ ಹಾಗೂ ಎನ್ಆರ್ ಸಿ ವಾಪಸ್ ಪಡೆಯುವ ತನಕ ಪ್ರತಿಭಟನೆ ಮುಂದುವರಿಯುವುದು ಎಂದೂ ಹೇಳಿದ್ದಾರೆ.
ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜಾಮಿಯಾ ಮಿಲಿಯಾ, ಐಐಟಿ-ಕಾನ್ಪುರ ಮತ್ತು ಇತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ ಎಂದು ಅವರು ಹೇಳಿದರು.
