
‘ಎದೆ ಸೀಳಿದರೆ ನಾಲ್ಕು ಅಕ್ಷರವಿಲ್ಲ, ಪಂಚರ್ ಅಂಗಡಿ ಇಟ್ಟುಕೊಂಡವರೆಲ್ಲಾ ಪ್ರತಿಭಟನೆ ಮಾಡುತ್ತಿದ್ದಾರೆ’ ಹೇಳಿಕೆಗೆ ಯುವಕನಿಂದ ಮಾನವೀಯತೆಯ ಪ್ರತಿಕ್ರಿಯೆ!
ವರದಿಗಾರ (ಡಿ.25, 2019): ‘ಎದೆ ಸೀಳಿದರೆ ನಾಲ್ಕು ಅಕ್ಷರವಿಲ್ಲ, ಪಂಚರ್ ಅಂಗಡಿ ಇಟ್ಟುಕೊಂಡವರೆಲ್ಲಾ ಪ್ರತಿಭಟನೆ ಮಾಡುತ್ತಿದ್ದಾರೆ’ ಎಂಬ ಸಂಸದ ತೇಜಸ್ವಿ ಸೂರ್ಯ ರ ಕುತ್ಸಿತ ಹೇಳಿಕೆಯ ವಿರುದ್ಧ ರಾಜ್ಯಾವ್ಯಾಪಿ ವಿರೋಧಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಅದರ ಭಾಗವಾಗಿ ಯುವಕನೊಬ್ಬ ತೇಜಸ್ವಿ ಸೂರ್ಯಗೆ ಹಿಂದುತ್ವದ ಬಗ್ಗೆ ಪಾಠ ಮಾಡಿ ಜಾಡಿಸಿದ್ದಾರೆ.
ತೇಜಸ್ವಿ ಸೂರ್ಯರವರ ಹೇಳಿಕೆಗೆ ಪ್ರತಿಕ್ರಿಸಿ ಅಟ್ಯಾಕ್ ಅರ್ಜುನ್ ಎಂಬ ಯುವಕ ವೀಡಿಯೋ ಮೂಲಕ ಪ್ರೀತಿಯ ಬಗ್ಗೆ ಪಾಠ ಮಾಡಿದ್ದು, ಹಿಂದೂ ಧರ್ಮದ ಸಂಸ್ಕೃತಿಯನ್ನು ತಿಳಿಸಲು ಪ್ರಯತ್ನಿಸಿದ್ದಾರೆ.
ಅರ್ಜುನ್ ತನ್ನ ಮಾತು ಪ್ರಾರಂಭಿಸುತ್ತಾ, ‘ನಾನು ನಿಮಗೆ ಇದೀಗ ತಿಳಿಸುತ್ತಿರುವ ವ್ಯಕ್ತಿ ವಿಶ್ವದಲ್ಲೇ ಬಹಳ ಜ್ಞಾನಿ. ದೇಶ ವಿದೇಶಗಳಲ್ಲಿರುವಂತಹ ಗ್ರಂಥಗಳನ್ನೆಲ್ಲಾ ತನ್ನ ತಲೆಯಲ್ಲಿಟ್ಟುಕೊಂಡು ಓಡಾಡುತ್ತಿರುವ, ಗ್ಲೋಬಲ್ ವಾರ್ಮಿಂಗ್ ಆಯ್ತೆಂದು ಪ್ಲಾಸ್ಟಿಕ್ ಗ್ಲೋಬಿಗೆ ಪೂಜೆ ಮಾಡಿರುವ ಸಂಸದ ತೇಜಸ್ವಿ ಸೂರ್ಯರ ಬಗ್ಗೆ’ ಎಂದು ಮಾತು ಪ್ರಾರಂಭಿಸುತ್ತಾರೆ.
ಮಾನವೀಯತೆಯ ಪಾಠ ಮಾಡಿದ ಯುವಕನ ವೀಡಿಯೋ ವೀಕ್ಷಿಸಿ:
‘ನಮ್ಮ ರಾಜ್ಯದ ಜನತೆ ಈ ವ್ಯಕ್ತಿಯ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವರೆಲ್ಲ ಒಂಥರಾ ಕ್ರಿಮಿ ಲೇಯರ್ ಜನ. ತೇಜಸ್ವಿಗೆ ಶೂದ್ರರು ದಲಿತರು, ಆರ್ಥಿಕವಾಗಿ ಹಿಂದಿರುವಂತಹ ಕುಟುಂಬಗಳು, ಕಡಿಮೆ ಕೆಲಸ ಮಾಡುವ ಜನತೆಯನ್ನ ನೋಡಿದ್ರೆ ಯಾವ ಮರ್ಯಾದೆ ಅವರ ಮನಸ್ಸಿನಲ್ಲಿದೆ ಎಂಬುವುದು ಅವರ ಹೇಳಿಕೆಯಿಂದಲೇ ತಿಳಿಯಬಹುದು’ ಎಂದು ಅರ್ಜುನ್ ಹೇಳಿದ್ದಾರೆ.
‘ನಮ್ಮ ಹಿಂದೂ ಧರ್ಮ ಹೇಳುತ್ತೆ, ಎಲ್ಲರನ್ನೂ ಪ್ರೀತಿಸು ಎಂದು. ನೋಡು ನನ್ನ ಗೋಡೆ ಕೇಸರಿ. ನಾನು ಹಾಕಿರುವ ಈ ಶಾಲು ಕೇಸರಿ. ಆದರೆ ನಿಮ್ಮಂತೆ ನಕಲಿಯಲ್ಲ. ನಿಮ್ಮದೆಲ್ಲಾ ರಾಜಕೀಯ ಪ್ರೇರಿತವಾದ ಹಿಂದುತ್ವ. ನಮ್ಮದೇನಿದ್ದರೂ ಸರ್ವ ಧರ್ಮವನ್ನು ಪ್ರೀತಿಸುವ ಹೃದಯ’ ಎಂದು ಹಿಂದೂ ಧರ್ಮದ ಮೂಲ ಆಶಯ ಆದರ್ಶಗಳನ್ನು ಹೇಳಿಕೊಡಲು ಅರ್ಜುನ್ ಪ್ರಯತ್ನಿಸಿದ್ದಾರೆ.
‘ತೇಜಸ್ವಿ ಸೂರ್ಯರವರೇ, ಯಾರೋ ಕಟ್ಟಿದ ಕೋಟೆಯಲ್ಲಿ ರಾಜನಾಗಿ ಮೆರೆಯುತ್ತಿರುವ ನೀವು ಅನಂತ್ ಕುಮಾರ್ ರ ಮೌಲ್ಯವನ್ನು ಕಾಪಾಡಬೇಕು. ಅವರ ಧರ್ಮ ಪತ್ನಿಗೆ ಹೋಗಬೇಕಿದ್ದ ಪದವಿ ನಿನಗೆ ಬಂದಿದೆ. ಇಂತಹ ಕೆಲಸಕ್ಕೆ ಬಾರದಿರುವ ಹೇಳಿಕೆಗಳನ್ನು ನೀಡಿ ಜನರಿಂದ ಉಗಿಸಿಕೊಳ್ಳಬೇಡ. ಜನಸಾಮಾನ್ಯರೆಲ್ಲಾ ಉಗಿಯುತ್ತಿದ್ದಾರೆ. ನೀವೊಬ್ಬ ವಿದ್ಯಾವಂತನೆಂದು ನಂಬಿದ್ದೇನೆ ಹಾಗಾಗಿ ವಿದ್ಯಾವಂತನಂತೆ ವರ್ತಿಸಿಕೊಳ್ಳಿ’ ಎಂದು ತನ್ನ ವೀಡಿಯೋದಲ್ಲಿ ಅರ್ಜುನ್ ಕಿವಿ ಮಾತು ನೀಡಿದ್ದು, ಸಮಾಜವನ್ನು ಒಡೆಯುವ, ಧರ್ಮ ಧರ್ಮಗಳ ಮಧ್ಯೆ ಕಚ್ಚಾಡಿಸುವ ಬಾಲಿಶ ಹೇಳಿಯನ್ನು ನೀಡದಂತೆ ಅವರು ವಿನಂತಿಸಿಕೊಂಡಿದ್ದಾರೆ.
