
ವರದಿಗಾರ, ಡಿ.24: ಕೇಂದ್ರ ಸರಕಾರದ ಸಂವಿಧಾನ ವಿರೋಧಿ CAA ಕಾಯ್ದೆ ಹಾಗೂ NRC ವಿರುದ್ಧ ಮಂಗಳೂರಿನ ನಾಗರಿಕರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಅವರ ಮೇಲೆ ಲಾಠಿ ಬೀಸಿ ಪ್ರಚೋದಿಸಿ ಕೆರಳಿಸಿದ್ದ ಮಂಗಳೂರು ಪೊಲೀಸರು ನಂತರ ಗೋಲೀಬಾರ್ ಕೂಡಾ ನಡೆಸಿ ಎರಡು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದರು. ಮಾನವೀಯ ಕಾಳಜಿಯುಳ್ಳ ಹಲವಾರು ರಾಜಕಾರಣಿಗಳು ಹಾಗೂ ನಾಗರಿಕರು ಮಂಗಳೂರು ಪೊಲೀಸರ ಈ ಕುಕೃತ್ಯಗಳನ್ನು ಏಕ ಧ್ವನಿಯಲ್ಲಿ ಖಂಡಿಸಿದ್ದರು. ಈಗ ತಮ್ಮ ತಪ್ಪುಗಳನ್ನು ಮರೆಮಾಚಲು ಹರ ಸಾಹಸ ಪಡುತ್ತಿರುವ ಕಮಿಷನರ್ ಹರ್ಷ ಹಾಗೂ ತಂಡಕ್ಕೆ ಸಹಾಯ ಮಾಡಲು ಹೋಗಿ ಕನ್ನಡದ ಕೆಲ ಸುದ್ದಿ ಮಾಧ್ಯಮಗಳು ಸಂಪೂರ್ಣ ಬೆತ್ತಲಾಗಿದ್ದು, ಇವುಗಳ ಮಾಧ್ಯಮ ಧರ್ಮದ ಕುರಿತು ಜನರೇ ಸಂಶಯಪಡುವಂತಾಗಿದೆ.
ಮಂಗಳೂರು ಘಟನೆ ಪೂರ್ವನಿಯೋಜಿತ ಎಂದು ನಿರೂಪಿಸಲು ಈ ಮಾಧ್ಯಮಗಳು ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಮೊತ್ತ ಮೊದಲಾಗಿ ಆ ವೀಡಿಯೋದ ಸತ್ಯಾಸತ್ಯತೆಯೇ ಪ್ರಶ್ನಾರ್ಹವಾಗಿದೆ. ಆ ವೀಡಿಯೋ ಮಂಗಳೂರಿನದ್ದೇ ಎನ್ನುವ ಕುರಿತು ಸಂಶಯ ವ್ಯಕ್ತವಾಗಿದೆ. ಮಾತ್ರವಲ್ಲ ಆ ವೀಡಿಯೋದ ಪ್ರಾರಂಭದಲ್ಲಿ ಪ್ರಚೋದಿತ ಪ್ರತಿಭಟನೆಕಾರರು ಓಡಾಡುತ್ತಿರುವಾಗ ಟೆಂಪೋ ಒಂದು ಬಂದು ನಿಲ್ಲುತ್ತದೆ. ಅದರಲ್ಲಿ ಕಲ್ಲುಗಳನ್ನು ತುಂಬಿಸಿಕೊಂಡು ಬಂದು ಪ್ರತಿಭಟನೆಕಾರರು ಗಲಭೆ ಎಬ್ಬಿಸಿದ್ದಾರೆ ಎನ್ನುವುದು ಈ ಮಾಧ್ಯಮಗಳ ಆರೋಪವಾಗಿದೆ. ಆದರೆ 36 ಸೆಕೆಂಡಿನ ಆ ವೀಡೀಯೋದ ಸಿಸಿಟಿವಿ ಸಮಯ 16:43:21 ಸೆಕೆಂಡ್ ಆಗುವಾಗ ವೀಡಿಯೋ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ ನಂತರ 16:45:16 ಸೆಕೆಂಡ್ ಆಗುವಾಗ ಮತ್ತೆ ಪ್ರಾರಂಭಿಸಲಾಗಿದೆ. ಹಾಗಿದ್ದರೆ ಈ 2 ನಿಮಿಷಗಳ ವೀಡಿಯೋವನ್ನು ಕಟ್ ಮಾಡಿ ಎಡಿಟ್ ಮಾಡಿದ್ದು ಯಾರು, ಯಾಕೆ ಮತ್ತವರ ನಿಗೂಢ ಉದ್ದೇಶವೇನು ಎನ್ನುವ ಸಂಶಯವನ್ನು ಮಂಗಳೂರಿನ ನಾಗರಿಕರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಕನ್ನಡ ದೃಶ್ಯ ಮಾಧ್ಯಮಗಳು ದಿವ್ಯ ಮೌನ ವಹಿಸಿದ್ದು, ಯಾರನ್ನೋ ಸಮರ್ಥಿಸಿ ಯಾರಿಗೋ ಸಹಾಯ ಮಾಡಲು ಹೊರಟಿರುವ ಅವರ ನಡೆ ಜನರ ಮುಂದೆ ಬೆತ್ತಲಾಗಿದೆ.
ವಾಸ್ತವದಲ್ಲಿ ಆ ವೀಡೀಯೋದಲ್ಲಿ ಪ್ರತಿಭಟನೆಕಾರರು ಓಡಾಡುತ್ತಿದ್ದರೂ, ಬಹುಶಃ ಆ ಟೆಂಪೋ ಡ್ರೈವರ್ ಅಲ್ಲಿ ಕಲ್ಲು ತೂರಾಟ ಪ್ರಾರಂಭಗೊಂಡಿದ್ದನ್ನು ಕಂಡು ಟೆಂಪೋವನ್ನು ಅಲ್ಲೇ ಬಿಟ್ಟು ಓಡಿ ಹೋಗಿರಲೂಬಹುದು. ಆದರೆ ಈ ದೃಶ್ಯಾವಳಿಗಳನ್ನು ಯಾವುದೋ ಕಾಣದ ಕೈಗಳು ಅಳಿಸಿ ಹಾಕಿದ್ದು, ಸತ್ಯಾಂಶಗಳನ್ನು ಜನರಿಂದ ಮರೆಮಾಚಿ ಗೋಲೀಬಾರ್ ನಡೆಯುವ ವರೆಗೆ ಘಟನೆಯನ್ನು ಪ್ರಚೋದಿಸಿದ ಮಂಗಳೂರು ಪೊಲೀಸರನ್ನು ರಕ್ಷಿಸುವ ಪ್ರಯತ್ನಕ್ಕೆ ಕೈ ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ವೀಡಿಯೋ ವೀಕ್ಷಿಸಿ:
