ವರದಿಗಾರ-ಚಂಡೀಗಡ: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಗೆ ಹರಿಯಾಣ ಸರಕಾರ ವಿಶೇಷ ಗೌರವಾದರಗಳೊಂದಿಗೆ ಸತ್ಕರಿಸುತ್ತಿದೆ, ಹಾಗೂ ವಿಐಪಿ ಯಂತೆ ನೋಡಿಕೊಳ್ಳುತ್ತಿರುವುದರ ಮೂಲಕ ರಾಜಾತಿಥ್ಯ ನೀಡುತ್ತಿದೆ ಎಂಬ ಬಲವಾದ ಆರೋಪ ಕೇಳಿ ಬರಲು ಪ್ರಾರಂಭಿಸಿದೆ.
ಇನ್ನೂ ರಾಮ್ ರಹೀಮ್ ಸಿಂಗ್ ಅತ್ಯಾಚಾರಿ ಎಂದು ನ್ಯಾಯಾಲಯ ತೀರ್ಪು ನೀಡಿದ ಕೆಲಕ್ಷಣದಲ್ಲೇ ಅವರನ್ನು ಬಂಧಿಸಲಾಗಿತ್ತು. ಹರಿಯಾಣ ಸರಕಾರ ಆರೋಪಿಗೆ ಪೊಲೀಸ್ ಅಧಿಕಾರಿಗಳ ಮೂಲಕ ವಿಶೇಷ ಆತಿಥ್ಯ ನೀಡಿ ಗೌರವಿಸಿರುವುದು ಇಲ್ಲಿ ಗಮನಾರ್ಹ. ಬಂಧಿಸಿದ ಬಳಿಕ ಜೈಲಿಗೆ ಕರೆದೊಯ್ದಿರುವುದು ವಿಶೇಷ ಹೆಲಿಕಾಪ್ಟರ್ ನಲ್ಲಿ. ಸರಕಾರ ಇನ್ನೂ ಆರೋಪಿಯನ್ನು ಸರಕಾರಿ ಅತಿಥಿಯಂತೆ ಕಾಣುತ್ತಿದ್ದು, ರಾಜ ಮರ್ಯಾದೆಯನ್ನು ನೀಡಿ ಸತ್ಕರಿಸಿರುವುದು ವಿಪರ್ಯಾಸವೇ ಸರಿ.
ಸರಕಾರದ ವಿಶೇಷ ಹೆಲಿಕಾಪ್ಟರ್ ನಲ್ಲಿ ಬಾಬಾ ರಾಮ್ ಜೊತೆಗೆ ಹನಿಪ್ರೀತ್ ಎಂಬ ಮಹಿಳೆಗೂ ಅವಕಾಶವನ್ನು ಕಲ್ಪಿಸಲಾಗಿತ್ತು. ಹನಿಪ್ರೀತ್ ಬ್ಯಾಗ್ನೊಂದಿಗೆ ರಾಮ್ ರಹೀಮ್ ಜೊತೆಗೆ ಹೆಲಿಕಾಪ್ಟರ್ನಲ್ಲಿ ತೆರಳಿರುವ ಚಿತ್ರ ಸಾಮಾಜಿಕ ತಾಣದಲ್ಲಿ ಹರಿದಾಡಲು ಪ್ರಾರಂಭಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿ, ಹನಿಪ್ರೀತ್ ತಾನು ರಾಮ್ ರಹೀಮ್ ಮಗಳು ಎಂದು ಹೇಳಿ ಕೊಂಡಿದ್ದಾರಂತೆ. ಆದರೆ ಹನಿಪ್ರೀತ್ ನಿಜವಾದ ಮಗಳಲ್ಲ ಎಂದು ಮೂಲ ವರದಿಗಳು ಹೇಳಿವೆ.
