ಪಂಚಾಯ್ತಿ ಕಟ್ಟೆ

“ಥತ್ ತೇರೀಕೆ… ಇದ್ಯಾವ ಪುಟಗೋಸಿ ನ್ಯಾಯ”; ಪಂಚಾಯ್ತಿಕಟ್ಟೆ ಅಂಕಣದಲ್ಲಿ ಹರಟೆಗಾರ

ವರದಿಗಾರ (ನ.29): ‘ಜನ ಈ ಕಡಿ ಯಾರೂ ಯಾಕ್ ಕಾಣಿಸ್ತಿಲ್ಲಪ್ಪಾ…’ ಭರಮ ಕಟ್ಟೆ ಮೇಲೆ ಕೂತ್ಕೊಂಡು ಬೀಡಿ ದಮ್ ಒಂದೇ ಸವನೇ ಎಳಯುತ್ತಾ ಹೊಗೆ ಬಿಡುತ್ತಾ ಗೊಣಗುತ್ತಿದ್ದ. ಅಷ್ಟೊತ್ತಿನಲ್ಲಿ ಪೊಲೀಸ್ ಜೀಪ್ ‘ಗೋಂಯ್ ಗೋಂಯ್’ ಅಂತೇ ಒಂದೇ ಸವನೆ ಶಬ್ದ ಮಾಡುತ್ತಾ ನಿಧಾನವಾಗಿ ಹಾದು ಹೋಯಿತು. ಭರಮನಿಗೆ ಇವತ್ತೇನೋ ವಿಶೇಷ ಇದೆ ಅನ್ನಿಸ್ತು. ದಾರಿಯಲ್ಲಿದ್ದ ಖಾಲಿ ಪ್ಲಾಸ್ಟಿಕ್ ಬಾಟಲಿಯೊಂದಕ್ಕೆ ಜೋರಾಗಿ ಫುಟ್ಬಾಲ್ ಕಿಕ್ ಕೊಟ್ಟ ದಾದಾಪೀರ್ ತನ್ನ ಮನಸ್ಸಿನಲ್ಲಿದ್ದ ಕೋಪ, ಹಾತಾಶೆ, ಅವಮಾನ ಎಲ್ಲವನ್ನು ಪ್ಲಾಸ್ಟಿಕ್ ಬಾಟಲಿಗೆ ಒದ್ದು ತೀರಿಸಿದಂತಿತ್ತು. ಆತನು ಒದ್ದ ರಭಸಕ್ಕೆ ವಿರ್ಲಿಪ್ತನಾಗಿ ಕುಳಿತ ಭರಮನ ಕಾಲಬುಡಕ್ಕೆ ‘ಟಪ್ ಟಪ್’ ಶಬ್ದದೊಂದಿಗೆ ಬಿದ್ದಾಗ ಬೆಚ್ಚಿಬಿದ್ದ ಭರಮ “ಥತ್  ತೇರೀಕೆ…” ಅಂತ ಬದಿಗೆ ಹಾರಿ ನಿಂತ. ಇಬ್ಬರ ಮುಖದಲ್ಲೂ ಏನೇನೋ ಪ್ರಶ್ನೆಗಳು. ಉತ್ತರವಿಲ್ಲದ ಖೈದಿಗಳ ಪ್ರಶ್ನೆಯಂತಿತ್ತು.

‘ಏ.. ದಾದಾಪೀರ್ ವಸಿ ನೋಡ್ಕಂಬಾರ್ದಾ?’ ಭರಮನ ಮುಗ್ದ ಪ್ರಶ್ನೆ. ದಾದಾಪೀರ್ಗೆ ಏನೋ ಒಂಥರಾ ತಮಾಷೆ ಅಂತ ಕಂಡಿತು.

‘ಲೇ ಭರಮಾ… ನೋಡೋದು ಕೇಳೋದು ಎಲ್ಲಾ ಮುಗೀತು. ಇನ್ನು ಓಡೋದು.. ಇಲ್ಲಾ ಹೊಡಿಯೋದು…’ ದಾದಾಪೀರ್ ನ ಕಣ್ಣುಗಳಲ್ಲಿ ಕಿಡಿ ಸಿಡಿಯುತ್ತಿದೆಯೋ ಅಂತ ಭರಮನಿಗೆ ಅನ್ನಿಸ್ತು. “ಇವತ್ತೇನೋ ಸರಿಯಿಲ್ಲ”  ಅಂತ ಭರಮನಿಗೆ ತೋರಿತು.

ಶಿವಲಿಂಗು ದೂರದಿಂದಲೇ “ಏ..ದಾದಾಪೀರ್” ಅಂತ ಎಂದಿನಂತೆ ದೂರದಿಂದಲೇ ಕೂಗಿದ. ಶಂಕ್ರ ತನ್ನ ಎತ್ತುಗಳನ್ನು ಅಲ್ಲೇ ಮರಕ್ಕೆ ಕಟ್ಟಿ ಕಟ್ಟೆಯನ್ನು ಕೂಡಿಕೊಂಡ.

“ಶಿವ್ಲಿಂಗು… ನೋಡ್ಲಾ ಇಲ್ಲಿ ದಾದಾಪೀರ್ ಏನೋ ಸಿಟ್ಟೈತೆ” ಅಂದ ಭರಮ.

“ಛೆ..ಸಿಟ್ಟು ಬಾರದೇ ಇರತ್ತಾ ಭರಮ…. ಬಾಬರಿ ಮಸೀದಿ ಜಾಗವನ್ನೇ ರಾಮನಿಗೆ ಕೊಟ್ಟು ಬುಟ್ರಲ್ಲಾ…” ಅಂದ ಶಿವಲಿಂಗ.

ಈಗ ಭರಮನಿಗೆ ವಿಷಯ ಏನಂತಾ ಅರ್ಥವಾಯಿತು. “ಜಿ ಅದಾ..” ಭರಮ ಗಾಬರಿಯಿಂದ ಬಾಯ್ತೆರೆದ.

ಶಂಕ್ರ… “ಶಿವ್ಲಿಂಗು… ಅದೇನೋ ಅಂತ ಸ್ವಲ್ಪ ಹೇಳಬಾರ್ದಯ್ಯಾ”.

“ಸುಪ್ರೀಮ್ ಕೋರ್ಟ್ ಐತಲ್ಲಾ… ಇತ್ತೀಚೆಗೆ ಅಯೋಧ್ಯೆ ವಿಚಾರಕ್ಕೆ ತೀರ್ಪು ಕೊಡ್ತು. ಎಲ್ಲಾ ಎಡವಟ್ಟು. ಅಲ್ಲಿದ್ದದ್ದು ಬಾಬರಿ ಮಸೀದಿ ಹೌದಂತೆ, ಮೂರ್ತಿಗಳನ್ನು ಕಳ್ತನದಿಂದ ಇಟ್ಟಿದ್ದು ಹೌದಂತೆ”.

“ಆಮೇಲೆ…” ಮಧ್ಯದಲ್ಲೇ ಬಾಯ್ ಹಾಕಿದಾ ಶಂಕ್ರ.

“ರಾಮಮಂದಿರ ಅಲ್ಲಿದ್ದಿದ್ದಕ್ಕೆ ಪುರಾವೆಯೂ ಇಲ್ಲವಂತೆ.. ಆದ್ರೆ ಮಸೀದಿ ಜಾಗ ಮಾತ್ರ ರಾಮನಿಗೆ ಕೊಡ್ಲೇ ಬೇಕಂತೆ… ಸುಪ್ರೀಮ್ ಕೋರ್ಟು ತೀರ್ಪು”. ಶಿವಲಿಂಗ ಒಂದೇ ಉಸುರಿಗೆ ಹೇಳ್ಬಿಟ್ಟ.

“ಥತ್ ತೇರೀಕೆ..” ಭರಮ ಕ್ಯಾಕರಿಸಿ ಪಕ್ಕಕ್ಕೆ ಉಗಿದ.

“ಇದ್ಯಾವ ಪುಟ್ಗೊಸಿ ನ್ಯಾಯ” ಶಂಕ್ರ ಬಡಬಡಿಸಿದ

“ದಾದಾಪೀರ್ …ಏ.. ಮಾತಾಡೋ..” ತನ್ನ ಸ್ನೇಹಿತ ಮೌನವಾಗಿದ್ದನ್ನು ಸಹಿಸದ ಶಿವಲಿಂಗು.

“ಹ್ಞುಂ… ಎಲ್ಲಾ ಸಿರ್ಫ್ ದೋಖಾ… ಇನ್ಸಾಫ್ ಇಲ್ಲಾ” ಅಂದ ದಾದಾಪೀರ್ ನ ಧ್ವನಿಯಲ್ಲಿ ಆಕ್ರೋಶವನ್ನು ಕಂಡು ಶಿವಲಿಂಗುಗೆ ಚುರುಕ್ ಅನ್ನಿಸ್ತು.

“ಅಲ್ಲಯ್ಯಾ ಮಸ್ಜಿದ್ ಕಟ್ಟಲು 5 ಎಕ್ರೆ ಜಾಗ ಬೇರೆ ಕಡೆ ಫ್ರೀ ಕೊಡ್ತಾರಂತೆ. ಕ್ಯಾ ಹಮ್ ಉನ್ಕಾ ಗುಲಾಮ್ ಹೈ ಕ್ಯಾ.. ಭೀಖ್ ಮಾಂಗ್ನೇ..? ಅಂದ ದಾದಾಪೀರ್.

ಎಲ್ಲರೂ ಹೌದೆಂಬಂತೆ ಪರಸ್ಪರ ಮುಖ ಮುಖ ನೋಡ್ಕೊಂಡರು. ಅಲ್ಲೆಲ್ಲಾ ಒಂದು ಕ್ಷಣ ಮೌನ.

ಭರಮ ತಲೆ ಕೆರೆಯುತ್ತಾ “ಈಗೇನು ಮಾಡೋದು” ಉಸುರಿದ.

“ಬೇಲಿಯೇ ಹೊಲ ಮೆಯ್ದರೆ ಏನ್ ಮಾಡಕಾಯ್ತದೆ… ಕೋರ್ಟಿನಲ್ಲೇ ನ್ಯಾಯ ಇಲ್ಲಾಂದೇ ಕಲ್ಲು ಹೊಡೆಯೊಕ್ಕಾಗ್ತಾದಾ…?” ದಾದಾಪೀರ್ ನ ಪ್ರಶ್ನೆಗೆ ಯಾರದೂ ಉತ್ತರವಿಲ್ಲ. ನಿಧಾನಕ್ಕೆ ಮಾತನಾಡಿದ ಶಂಕ್ರ, “ದಾದಾಪೀರ್ ಸಮಾಧಾನ ಮಾಡ್ಕೋ…” ಎಂದಾಗ “ಹ್ಞುಂ” ನಿಟ್ಟಿಸಿರು.

ಅಷ್ಟರಲ್ಲೇ ಮಲ್ಲಣ್ಣ ಬೀಡಾ ಜಗಿಯುತ್ತಾ ಬಂದವನೇ ಪಕ್ಕದಲ್ಲೇ ಪಚಕ್ ಅಂತ ಉಗುಳಿ, “ಯಡ್ಯೂರಪ್ಪ ಟಿವಿಯಲ್ಲಿ ಅಳ್ತವ್ನೆ” ಅಂತಾ ಮಾರ್ಕೆಟಿನಲ್ಲಿ ಯಾರೋ ಒಬ್ರು ತೋರಿಸಿದ ಮೊಬೈಲ್ ವೀಡಿಯೋವನ್ನು ನೋಡಿದ್ದನ್ನು ಹೇಳಿದ.

ಶಂಕ್ರ, ಶಿವಲಿಂಗುಗೆ ನಗು ತಡೆಯಲಾಗಲಿಲ್ಲ. “ಶೋಭಕ್ಕನ್ನ ನೋಡ್ಲಿಲ್ವಾ ಅದರಲ್ಲಿ?” ಛೇಡಿಸಿದ ಶಂಕ್ರ. “ಎಲಾ ಇವನಾ… ನಿನಗೇನ್ಲಾ ಶೋಭಕ್ಕನ್ನ ಗೇಳ್..” ಅಂದ ಮಲ್ಲಣ್ಣ.

ಎಲ್ರೂ ಮತ್ತೊಮ್ಮೆ ನಕ್ಕರು. ದಾದಾಪೀರ್ ಗೂ ಮೀಸೆಯ ಕುಡಿಯಲ್ಲಿ ನಗು ಉಕ್ಕಿತು.

ಏನೂ ನಡೆಯದವನಂತೆ ಮಲ್ಲಣ್ಣ “ಇನ್ನು ಮುಂದಕ್ಕೆ ರಾಮ ಮಂದಿರ ಎಂದು ಬಿಜೆಪಿಗರು ಹಾರಾಡೋದು ನಿಂತಿತು” ಅಂದಾಗ ಶಿವಲಿಂಗುಗೆ ಈತನೇನೂ ಮುಗ್ಧನಲ್ಲ ಅನ್ನಿಸ್ತು.

ಅದಕ್ಕೆ ದಾದಾಪೀರ್ “ಏ ಮಲ್ಲಣ್ಣ… ಇಲ್ಲಿಂದಲೇ ಸ್ಟಾರ್ಟು.. ಇನ್ನುಂದೆ ಬೇರೆ ಮಂದಿರ ಪಾಲಿಟಿಕ್ಸ್ ಮಾಡ್ರಿರವ್ರೆ. ನಾವಂತೂ ಬಾಬರಿ ಮಸ್ಜಿದ್ ನ್ಯಾಯವನ್ನೇ ಪಡೆದೇ ತೀರ್ತೀವಿ. ಅದೇನ್ ಮಾಡ್ಬೇಕೋ ಮಾಡ್ತೀವಿ” ಅಂದ.

“ಚಡ್ಡಿಗಳ ಚರ್ಬಿ ಇಳಿಸ್ಕಂಬೇಕು. ನೀವೆಲ್ಲಾ ನಮಗೆ ಸಾಥ್ ನೀಡಬೇಕು” ಅಂದಾಗ ಎಲ್ಲರೂ ತಲೆಯಲ್ಲಾಡಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group