ರಾಜ್ಯ ಸುದ್ದಿ

ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣ; ತನಿಖೆಯ ದಿಕ್ಕು ತಪ್ಪಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ: ಎಸ್ ಡಿಪಿಐ ರಾಜ್ಯಾಧ್ಯಕ್ಷ ಆರೋಪ

‘ರಾಜ್ಯದಲ್ಲಿ ಎಸ್.ಡಿ.ಪಿ.ಐ ಪರ್ಯಾಯ ರಾಜಕೀಯ ಶಕ್ತಿಯಾಗಿ ಮೂಡಿ ಬರುತ್ತಿರುವುದು ರಾಜಕೀಯ ಪಕ್ಷಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ’

ವರದಿಗಾರ (ನ.23): ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಇಲ್ಯಾಸ್  ಮುಹಮ್ಮದ್ ಆರೋಪಿಸಿದ್ದಾರೆ.

ಅವರು ಇಂದು ಮೈಸೂರಿನ ಪ್ರತಿಕಾ ಭವನದಲ್ಲಿ ಎಸ್ಡಿಪಿಐ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡುತ್ತಾ, ಶಾಸಕ, ಮಾಜಿ ಸಚಿವರಾದ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಇವರಲ್ಲಿ ಐದು ಮಂದಿಯನ್ನು ಈಗಾಗಲೇ ನ್ಯಾಯಾಂಗ ಬಂಧನದಲ್ಲಿರಿಸಲಾಗಿದ್ದು, ಪ್ರಮುಖ ಆರೋಪಿಯನ್ನು ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿದೆ. ಪೊಲೀಸರ ವಿಚಾರಣಾ ವರದಿ ಇನ್ನೂ ಪ್ರಕಟಗೊಂಡಿಲ್ಲವಾದರೂ ಕೆಲ ಮಾಧ್ಯಮಗಳು ಉಹಾಪೋಹಗಳನ್ನು ಹಾಗೂ ಕಟ್ಟುಕತೆಗಳನ್ನು ತೇಲಿಬಿಟ್ಟು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಪಕ್ಷದ ಜತೆಗೆ ತಳುಕು ಹಾಕುವಂತಹ ಪ್ರಯತ್ನಗಳಲ್ಲಿ ತೊಡಗಿಕೊಂಡಿವೆ. ಈವರೆಗಿನ ವಿದ್ಯಮಾನಗಳನ್ನು ಗಮನಿಸಿದಾಗ ತನಿಖಾ ಹಂತದ ಕೆಲವು ನಡೆಗಳು ಹಲವು ಸಂಶಯಗಳನ್ನು ಹುಟ್ಟು ಹಾಕುತ್ತಿದ್ದು, ಕೆಲವು ಹಿತಾಸಕ್ತಿಗಳು ತಮ್ಮ ಕುತ್ಸಿತ ಉದ್ದೇಶಗಳನ್ನು ಈಡೇರಿಸುವ ಹತಾಶ ಪ್ರಯತ್ನಗಳನ್ನು ನಡೆಸುತ್ತಿರುವುದು ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯ ಪ್ರೆಸ್ ನೋಟ್ ನಲ್ಲಿ ಈ ಕೆಳಗಿನಂತೆ ಎಸ್.ಡಿ.ಪಿ.ಐ ಪ್ರಶ್ನಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಹಲವು ರೀತಿಯ ಅನುಮಾನ ಹಾಗೂ ಸಂಶಯಗಳು ವ್ಯಕ್ತವಾಗುತ್ತಿದೆ ಎಂದು ಹೇಳಿದೆ.

ನ್ಯಾಯಾಂಗ ಬಂಧನದಲ್ಲಿರಿಸಲಾದ ಆರೋಪಿಗಳನ್ನು ಭೇಟಿ ಮಾಡಲು ಕುಟುಂಬಿಕರಿಗೆ ಮತ್ತು ವಕೀಲರಿಗೆ ಅವಕಾಶ ನಿರಾಕರಿಸಲಾಗಿದೆ. ಹತ್ತು ದಿನಗಳ ನಂತರವೇ ಭೇಟಿ ಮಾಡತಕ್ಕದ್ದು ಎಂದು ಜೈಲಾಧಿಕಾರಿಗಳು ಹೇಳುತ್ತಿದ್ದಾರೆ. ನೀವು ಮಾಡುತ್ತಿರುವುದು ಕಾನೂನಿನ ಉಲ್ಲಂಘನೆ ಎಂದು ಜೈಲಾಧಿಕಾರಿಗಳಿಗೆ ವಕೀಲರು ತಿಳಿಸಿದಾಗ “ನಮಗೆ ಒತ್ತಡವಿದೆ, ನೀವು ನಮ್ಮನ್ನು ಸ್ಪಲ್ಪ ಅರ್ಥ ಮಾಡಿಕೊಳ್ಳಿ” ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವವರನ್ನು ಭೇಟಿಮಾಡಲು ಬಯಸುವ ಬಯಸುವ ಕುಟುಂಬಿಕರಿಗೆ ಯಾವ ಕಾರಣಕ್ಕಾಗಿ ಅವಕಾಶವನ್ನು ನಿರಾಕರಿಸಲಾಗಿದೆ?. ಪೊಲೀಸರ ಸ್ಥಿತಿಯನ್ನು “ಅರ್ಥ ಮಾಡಿಕೊಳ್ಳಬೇಕಾದ” ಒತ್ತಡದ ಹಿಂದೆ ಯಾವ ಶಕ್ತಿ/ವ್ಯಕ್ತಿಗಳು ಇವೆ?

ಘಟನೆ ನಡೆದು ಆರು ದಿನಗಳು ಕಳೆದಿದ್ದು ವಶಕ್ಕೆ ತೆಗೆದುಕೊಂಡವರ ಪೈಕಿ ಐದು ಮಂದಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವಾಗ ಈವರೆಗೆ ಪೊಲೀಸರಿಂದ ಯಾವುದೇ ವಿವರಗಳ ಅಧಿಕೃತ ಹೇಳಿಕೆ ಬಾರದಿರಲು ಕಾರಣವೇನು? ಪೊಲೀಸರ ಹೇಳಿಕೆಗಳೆಂದು ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರಕಟಿಸಿವೆ. “ಶಾಸಕರು ಕೆಲಸ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಹಲ್ಲೆ”, “ಹೆಸರು ಗಳಿಸಲಿಕ್ಕಾಗಿ ಹಲ್ಲೆ”, “ಭೂಗತ ಪಾತಕಿಯಿಂದ ಸುಪಾರಿ ಬೆದರಿಕೆ” ಮುಂತಾದ ಹಲವು ಕತೆಗಳನ್ನು ನಿರಂತರವಾಗಿಯೂ ಪ್ರಕಟಿಸುತ್ತಾ, ಜನರಲ್ಲಿ ಗೊಂದಲ, ಅಪನಂಬಿಕೆ, ವದಂತಿಗಳಿಗೆ ಗ್ರಾಸ ಮಾಡುತ್ತಿವೆ. ಹಾಗಿದ್ದರೂ ಪೊಲೀಸ್ ಇಲಾಖೆಯ ಗಾಢ ಮೌನ ಯಾಕೆ?

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಸಂದರ್ಭದಲ್ಲಿ ಒಂದು ಪರ್ಯಾಯ ಶಕ್ತಿಯಾಗಿ ಉದಯಿಸುತ್ತಿರುವ ಎಸ್‍ಡಿಪಿಐ ಪಕ್ಷದ ಬಗ್ಗೆ ಅಪಪ್ರಚಾರ ನಡೆಸಲಿಕ್ಕಾಗಿಯೇ ಈ ಘಟನೆಯನ್ನು ಕೆಲಶಕ್ತಿಗಳು ಬಳಸಿಕೊಳ್ಳುತ್ತಿವೆ. ಆ ಶಕ್ತಿಗಳು ಪೊಲೀಸರ ಮೇಲೆ ಅವುಗಳ ಅನುಕೂಲಕ್ಕಾಗಿ ಒತ್ತಡ ಹಾಕುತ್ತಿವೆಯೇ?

ಘಟನೆಗೆ ಸಂಬಂಧವಿಲ್ಲದಿದ್ದರೂ ಅಮಾಯಕರನ್ನು ‘ಫಿಕ್ಸ್’ ಮಾಡುವ ಹುನ್ನಾರ ನಡೆಯುತ್ತಿವೆಯೇ? ಯಾಕೆಂದರೆ ಇಂತಹ ಘೋರ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಗಳನ್ನು ಪೊಲೀಸರು ಎತ್ತಿಕೊಂಡ ಮೇಲೆ ಅವರ ಕುಟುಂಬಿಕರಿಗೆ ಹಾಗೂ ವಕೀಲರ ಭೇಟಿಗೆ ಅವಕಾಶಗಳನ್ನು ನೀಡದೆ ಒಂದೆರಡು ದಿನಗಳ ಒಳಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ಹತ್ತು ದಿನಗಳ ಬಳಿಕ ಬನ್ನಿ ಎಂದಿದ್ದು, ಕತೆಗಳನ್ನು ಹೆಣೆಯುವ ಪ್ರಯತ್ನ ನಡೆಯುತ್ತಿದೆಯೇ?

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ, ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆಯ ಘಟನೆ ಹಾಗೂ ಆನಂತರದ ಕುತ್ಸಿತ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ರೀತಿಯ ಷಡ್ಯಂತ್ರಗಳ ವಿರುದ್ಧ ಕಾನೂನುಬದ್ಧ ಸಂಘಟಿತ ಹೋರಾಟವನ್ನು ನಡೆಸಲಿದೆ. ಹಲ್ಲೆ ಪ್ರಕರಣದಲ್ಲಿ ಒಳಗೊಂಡ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತಹ ಸೂಕ್ತ ಕ್ರಮಗಳನ್ನು ಪೊಲೀಸರು ಕೈಗೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಬಿಜೆಪಿ ಸರಕಾರದ ಒತ್ತಡಕ್ಕೆ ಮಣಿದು ಅಮಾಯಕರನ್ನು ಫಿಕ್ಸ್ ಮಾಡುವುದಾಗಲಿ, ಕಿರುಕುಳಕ್ಕೊಳಪಡಿಸುವುದಾಗಲೀ ಸಲ್ಲದು. ಪೋಲೀಸರು ಯಾವುದೇ ಒತ್ತಡಕ್ಕೊಳಗಾಗದೆ ಸರಿಯಾದ ದಿಕ್ಕಿನಲ್ಲಿ ತನಿಖೆಯನ್ನು ಕೈಗೊಂಡು ವಾಸ್ತವ ಸಂಗತಿಯನ್ನು ಬಹಿರಂಗಗೊಳಿಸಬೇಕು.  ಅಪಪ್ರಚಾರಗಳನ್ನು ನಡೆಸುವ ಕೆಲ ಮಾಧ್ಯಮ ಹಾಗೂ ರಾಜಕಾರಣಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಈ ಪತ್ರಿಕಾಗೋಷ್ಠಿಯ ಮೂಲಕ ಆಗ್ರಹಿಸುತ್ತದೆ ಎಂದು ಹೇಳಿದೆ.

ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಎಸ್‍ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕುಮಾರಸ್ವಾಮಿ, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿತರಿದ್ದರು.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group