
ಕ್ಷಮೆಯಾಚಿಸಿ, ವರದಿ ಹಿಂಪಡೆಯದಿದ್ದಲ್ಲಿ ಕಾನೂನಾತ್ಮಕ ಹೋರಾಟದ ಎಚ್ಚರಿಕೆ
ವರದಿಗಾರ (ನ 18): ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಝೀರ್ ಮತ್ತು ಅವರ ಕುಟುಂಬ ಸದಸ್ಯರ ಜೀವಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಬೆದರಿಕೆ ಇದೆ ಎಂಬ ಕಾಲ್ಪನಿಕ ಹಾಗೂ ಮಾನಹಾನಿಕರ ಸುದ್ದಿಯನ್ನು ಎಎನ್ಐ ಸುದ್ದಿ ಸಂಸ್ಥೆ ನಿನ್ನೆ ಸಂಜೆ ಪ್ರಸಾರ ಮಾಡಿದ್ದು, ಇದು ಆಧಾರ ರಹಿತವೆಂದು ಪಾಪ್ಯುಲರ್ ಫ್ರಂಟ್ ಪ್ರಕಟಣೆಯಲ್ಲಿ ಹೇಳಿದೆ.
ಈ ಆರೋಪವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ ಬಲವಾಗಿ ನಿರಾಕರಿಸಿದ್ದು, ಇದು ಸಂಘಟನೆಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನವಾಗಿದ್ದು, ಇಂತಹ ಅಪಪ್ರಚಾರ ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂತಹ ಗಂಭೀರ ಆರೋಪದ ಸುದ್ದಿ ಪ್ರಕಟಿಸುವ ಮೊದಲು, ಸಂಘಟನೆಯ ನಿಲುವನ್ನು ತಿಳಿದುಕೊಳ್ಳಲು ಎಎನ್ಐ ವರದಿಗಾರರು ಅಥವಾ ಸಂಪಾದಕೀಯ ಸಿಬ್ಬಂದಿ, ನಮ್ಮ ಸಂಘಟನೆಯ ಪ್ರತಿನಿಧಿಗಳನ್ನು ಸಂಪರ್ಕಿಸದಿರುವುದು ದುರದೃಷ್ಟಕರ. ನಾವು ತಕ್ಷಣ ಸುದ್ದಿ ಸಂಸ್ಥೆಯನ್ನು ಸಂಪರ್ಕಿಸಿದ್ದರೂ ಅದು ಸುದ್ದಿಯನ್ನು ಸರಿಪಡಿಸುವ ಅಥವಾ ಹಿಂಪಡೆಯುವ ಕೆಲಸ ಮಾಡಿಲ್ಲ. ಮತ್ತೊಂದೆಡೆ, ಇತರ ಕೆಲವು ಅಂತರ್ಜಾಲ ಸುದ್ದಿ ಮಾಧ್ಯಮಗಳು ಮತ್ತು ಪತ್ರಿಕೆಗಳು ಇದೇ ಸುದ್ದಿಯನ್ನು ನಮ್ಮ ಯಾವುದೇ ಅಭಿಪ್ರಾಯವನ್ನೂ ಕೇಳದೆಯೇ ಪ್ರಕಟಿಸಿವೆ ಎಂದು ಅವರು ಆರೋಪಿಸಿದ್ದಾರೆ.
ಭದ್ರತಾ ಪಡೆಗಳು ಮತ್ತು ಸ್ಥಳೀಯ ಪೊಲೀಸರು, ಕರ್ನಾಟಕ ಮತ್ತು ಇತರ ಭಾಗಗಳಲ್ಲಿನ ನ್ಯಾಯಮೂರ್ತಿ ನಜೀರ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಪಿಎಫ್ಐ ಮತ್ತು ಇತರ ಕಡೆಗಳಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ತಕ್ಷಣ ಝಡ್ ‘ಕೆಟಗರಿಯ’ ಭದ್ರತೆಯನ್ನು ಒದಗಿಸಲಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ, ಭದ್ರತಾ ಸಂಸ್ಥೆಗಳ ವರದಿಯನ್ನು ಪ್ರಸ್ತಾಪಿಸಿ ಪ್ರಕಟಿಸಿತ್ತು.
ಆದರೆ, ವರದಿಯು ಯಾವುದೇ ನಿರ್ದಿಷ್ಟ ಸರ್ಕಾರಿ ಸಂಸ್ಥೆ ಅಥವಾ ಅಧಿಕಾರಿಯ ಹೇಳಿಕೆಯ “ಅಧಿಕೃತ ಹೇಳಿಕೆಯನ್ನು” ಸುದ್ದಿಯ ಮೂಲವೆಂದು ಹೆಸರಿಸದ ಕಾರಣ, ವರದಿಯ ಹೊಣೆಗಾರಿಕೆಯು ಸಂಪೂರ್ಣವಾಗಿ ಎಎನ್ಐ ಮತ್ತು ಅದರ ಸುದ್ದಿಯನ್ನು ನಕಲು ಮಾಡಿ ಪ್ರಕಟಿಸಿದ ಇತರ ಮಾಧ್ಯಮಗಳ ಮೇಲೂ ಇದೆ ಎಂದು ಅವರು ಹೇಳಿದ್ದಾರೆ.
ಬೇಷರತ್ ಕ್ಷಮೆಯಾಚನೆಯೊಂದಿಗೆ ಆರೋಪವನ್ನು ತಕ್ಷಣ ಹಿಂಪಡೆದುಕೊಳ್ಳಬೇಕೆಂದು ಮುಹಮ್ಮದ್ ಅಲಿ ಜಿನ್ನಾ ಅವರು ಒತ್ತಾಯಿಸಿದ್ದಾರೆ.
ಈ ಗಂಭೀರ ವಿಷಯದಲ್ಲಿ ಸಂಬಂಧಪಟ್ಟ ಮಾಧ್ಯಮಗಳು ಬೇಜವಾಬ್ದಾರಿಯಾಗಿ ಮುಂದುವರಿದರೆ ಸಾರ್ವಜನಿಕ ಹಿತಾಸಕ್ತಿ, ಶಾಂತಿ ಮತ್ತು ಸಾಮರಸ್ಯ ಸ್ಥಾಪನೆ ಉದ್ದೇಶದಿಂದ ಇಂತಹ ಮಾಧ್ಯಮಗಳ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
