
ಮರುಭೂಮಿಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕವನ
ಅಲ್ಲೂ ಇಣುಕಿದೆ ಇಲ್ಲೂ ಹುಡುಕಿದೆ
ಕರುನಾಡ ಮನೆಯೊಳಗೆ
ಕನ್ನಡದ ತಲೆಯೊಳಗೆ
ಇದೇನಿದು ಬಿಳಿಭಾಷೆಯ ಫಸಲು?!
ನೀರಿನ ಹೊಳೆಯಿದೆ, ಹಸಿವಿಗೆ ತೆನೆಯಿದೆ
ಪ್ರಕೃತಿಯ ಸೊಬಗೊಳಗೆ
ವಿಕೃತಿಯ ನೇಯಲು
ಇದೇನಿದು ಕಾರ್ಖಾನೆಗಳ ತೆವಲು?!
ಎನ್ನಡ’ವು ಸುತ್ತಿದೆ
ಎಕ್ಕಡ’ವೂ ಮುತ್ತಿದೆ
ಎಂದಡ’ವೋ; ಇಲ್ಲವೆಲ್ಲಿ ಹೇಳಿ?
ಎತ್ತಣದ ಮರಾಠವೂ ಇಲ್ಲಿ!
ಬಲೇ ಚಾ ಪರ್ಕ; ಬರು ಚಾ ಕುಡಿಕ
ಬ್ಯಾರಿ ತುಳುಗಳ ಸೌಹಾರ್ದಕೆ
ಇದೇನಿದು ತೊಪ್ಪಿ ನಾಮದ ಅಳಲು?!
ಬಳಿ ಬಂದವರಿಗೆ ನಿಂದಿಸದೆ
ತಿಳಿ ಹೃದಯದೊಳು ವಂದಿಸಿದ
ಮಾನವೀಯತೆಯ ಕರುನಾಡು,
ಮಮತೆಗಳೇ ಮೇಳೈಸುವೆಡೆ
ಸಂಬಂಧಗಳ ಪೋಣಿಸುವೆಡೆ
ಇದೇನಿದು ವೃದ್ದಾಶ್ರಮದ ಅಮಲು?!
ಅಲ್ಲಷ್ಟು ಕೊರತೆ; ಇಲ್ಲಿಷ್ಟು ಒರತೆ
ಬಹು ಭಾಷೆ ಮಿಂದು ಸಲ್ಲುವಲಿ
ಹೆಮ್ಮೆಯ ಕರುನಾಡ ಕೈ ಮೇಲು,
ಅಬಲೆ ಕರುಣಾಮಯಿ ಸರಿ;
ನಾರಿ ನಡೆವ ದಾರಿಯಲಿ
ಇದೇನಿದು ದೂರು ದುಮ್ಮಾನಗಳ ಗೋಳು?
ನಾ ಹುಟ್ಟಿ ಮೆಟ್ಟಿದ ಕರುನಾಡು
ತಿದ್ದಿ ಸರಿಪಡಿಸುವುದಷ್ಟೇ ನನ್ನೊಳ ಸವಾಲು,
-ಅನ್ಸಾರ್ ಕಾಟಿಪಳ್ಳ
