ವರದಿಗಾರ-ಚಂಡೀಗಡ : ನರೇಂದ್ರ ಮೋದಿ ಭಾರತದ ಪ್ರಧಾನ ಮಂತ್ರಿ, ಕೇವಲ ಬಿಜೆಪಿ ಪಕ್ಷಕ್ಕಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.
ಇನ್ನು ಹರಿಯಾಣ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ನೀವು ರಾಜಕೀಯ ಲಾಭಕ್ಕಾಗಿ ಪಂಚಕುಲಾವನ್ನು ಹೊತ್ತಿ ಉರಿಯಲು ಬಿಟ್ಟಿದ್ದೀರಿ. ಹಿಂಸಾಚಾರ ಸಂಭವಿಸಲು ಸರಕಾರವೇ ನೇರವಾಗಿ ಹೊಣೆಯೆಂದು ಹೇಳಿದೆ. ಹರಿಯಾಣವು ಭಾರತದ ಭಾಗವಲ್ಲವೇ? ಮತ್ಯಾಕೆ ಪಂಜಾಬ್ ಮತ್ತು ಹರಿಯಾಣವನ್ನು ಮಲಮಕ್ಕಳಂತೆ ನೋಡ್ತೀರಾ? ಎಂದು ಹೈಕೋರ್ಟ್ ಖಾರವಾಗಿ ಪ್ರಶ್ನಿಸಿದೆ.
ನ್ಯಾಯವಾದಿ ಬಲದೇವ್ ರಾಜ್ ಮಹಾಜನ್ ಹಾಗೂ ಮುಖ್ಯಮಂತ್ರಿ ಖಟ್ಟರ್ ರವರಿಗೆ ಛೀಮಾರಿ ಹಾಕಿದ ಹೈಕೋರ್ಟ್,ಖಟ್ಟರ್ರವರು ಸಚ್ಚಾ ಸೌದಾದ ರಕ್ಷಣೆಯಲ್ಲಿ ತೊಡಗಿದ್ದಾರೆ’ ಎಂದಿದೆ.
ಹರಿಯಾಣ ರಾಜ್ಯದಲ್ಲಿ ರಾಜಕೀಯ ನಿರ್ಧಾರಗಳು ಮತ್ತು ಆಡಳಿತ ಯಂತ್ರದ ನಡುವೆ ಅಂತರವಿದೆ. ಹಿಂಸಾಚಾರಕ್ಕೆ ಸಂಬಂಧಿಸಿ ಒಬ್ಬನೇ ಒಬ್ಬ DCP ಯನ್ನು ಅಮಾನತುಗೊಳಿಸಲಾಗಿರುವುದರ ಬಗ್ಗೆ ಮಾತನಾಡಿದ ಹೈಕೋರ್ಟ್, ಘಟನೆಗೆ ಸಂಬಂಧಿಸಿ ಅವರೊಬ್ಬರೇ ಕಾರಣವೇ? ಎಂದು ಪ್ರಶ್ನಿಸಿದೆ.ಸರಕಾರ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಸುತ್ತಿದೆ ಎಂದೂ ಹೇಳಿದೆ. ಇನ್ನು ಇದನ್ನೇ ನಮಗೆ ಹೇಳಲು ಪ್ರಯತ್ನಿಸುತ್ತಿದ್ದೀರಾ ಎಂದು ನ್ಯಾಯವಾದಿ ಬಲದೇವ್ ರಾಜ್ ಮಹಾಜನ್ ಅವರನ್ನು ಪ್ರಶ್ನಿಸಿದೆ.
ಹಿಂಸಾಚಾರ ನಡೆಯುವ ಮಾಹಿತಿ ಇದ್ದರೂ ಸುಮಾರು 7 ದಿನಗಳಿಂದ ಬಾಬಾ ಬೆಂಬಲಿಗರು ಪಂಚಕುಲಾಕ್ಕೆ ಆಗಮಿಸಲು ಬಿಟ್ಟಿರುವುದ್ಯಾಕೆ ಎಂದು ಹೈಕೋರ್ಟ್ ಪ್ರಶ್ನಿಸಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
