
‘ರಾಜಕೀಯ ದಿವಾಳಿತನ- ವಿದ್ಯಾರ್ಥಿ ಯುವ ಚಳುವಳಿಯ ಮೇಲಿರುವ ಸವಾಲುಗಳು’ ವಿಷಯದಲ್ಲಿ ಕ್ಯಾಂಪಸ್ ಫ್ರಂಟ್ ವಿಚಾರಗೋಷ್ಠಿ
ವರದಿಗಾರ (ಅ.28): ಭಯಭೀತಿಗೊಳಿಸುತ್ತಿರುವಾಗ ದೇಶದಲ್ಲಿ ಈ ಜನ ವಿರೋಧಿ ಸರ್ಕಾರವನ್ನು ಸಂಘಟಿತವಾಗಿ ಎದುರಿಸುವ ವಿರೋಧ ಪಕ್ಷಗಳು ಇಲ್ಲದಿರುವುದು ವಿಪರ್ಯಾಸ ಇದು ರಾಜಕೀಯ ದಿವಾಳಿತನಕ್ಕೆ ಉದಾಹರಣೆಯಾಗಿದೆ ಎಂದು ವಿದ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಸದಸ್ಯ ಎಮ್.ಬಿ. ಶೆಫಿನ್ ಖೇಧ ವ್ಯಕ್ತಪಡಿಸಿದ್ದಾರೆ.
ಅವರು ಹತ್ತನೇ ವರ್ಷಾಚರಣೆಯಲ್ಲಿರುವ ಕ್ಯಾಂಪಸ್ ಫ್ರಂಟ್ ‘ಡಿಕೇಡ್ ಆಫ್ ಡಿಗ್ನಿಟಿ’ಎಂಬ ಘೋಷಣೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಭಾಗವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ‘ರಾಜಕೀಯ ದಿವಾಳಿತನ- ವಿದ್ಯಾರ್ಥಿ ಯುವ ಚಳುವಳಿಯ ಮೇಲಿರುವ ಸವಾಲುಗಳು’ ಎಂಬ ವಿಷಯದ ಮೇಲೆ ಬೆಂಗಳೂರಿನ ಎಸ್.ಸಿ.ಎಮ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
‘ಮೋದಿ ಸರ್ಕಾರವು ತನ್ನ ಎರಡನೇ ಅವಧಿಯ ಅಧಿಕಾರ ವಹಿಸಿದ ನಂತರ ಪ್ರಜಾಪ್ರಭುತ್ವಕ್ಕೆ ಮಾರಕವಾಗುವಂತಹ ಹಲವು ಕಾಯ್ದೆಗಳನ್ನು ಜಾರಿಗೊಳಿಸಿ, ಜನರನ್ನು ಭಯಭೀತಿಗೊಳಿಸುತ್ತಿರುವಾಗ, ದೇಶದಲ್ಲಿ ಜನ ವಿರೋಧಿ ಸರ್ಕಾರವನ್ನು ಸಂಘಟಿತವಾಗಿ ಎದುರಿಸುವ ವಿರೋಧ ಪಕ್ಷಗಳು ಇಲ್ಲದಿರುವುದು ವಿಪರ್ಯಾಸ ಇದು ರಾಜಕೀಯ ದಿವಾಳಿತನಕ್ಕೆ ಉದಾಹರಣೆಯಾಗಿದೆ. ಈ ಸಂದರ್ಭದಲ್ಲಿ ಫ್ಯಾಶಿಸಂ ವಿರುದ್ಧ ನಾವು ಮೌನಕ್ಕೆ ಶರಣಾಗದೆ ನಮ್ಮ ಧ್ವನಿಯು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಹೇಳಿದರು.
ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ಮಾತನಾಡಿ, ‘ದೇಶವು ರಾಜಕೀಯ, ಆರ್ಥಿಕ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ದಿವಾಳಿಯಾಗಿದ್ದು, ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ದೇಶವನ್ನು ರಕ್ಷಿಸುಲು ಹಾಗೂ ದೇಶವನ್ನು ಮುನ್ನಡೆಸಲು ವಿದ್ಯಾರ್ಥಿಗಳು ಮಹತ್ತರವಾದ ಪಾತ್ರ ವಹಿಸಬೇಕು, ವಿದ್ಯಾರ್ಥಿಗಳು ಬೀದಿಗೆ ಬಂದರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಸರ್ಕಾರದ ವೈಫಲ್ಯವನ್ನು ಬಯಲು ಮಾಡಲು ಕ್ಯಾಂಪಸ್ ಫ್ರಂಟ್ ತಯಾರಾಗಬೇಕು’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ, ‘ಸಮಾಜ ಘಾತುಕ ಶಕ್ತಿಗಳು ಯಾವುದೆಲ್ಲ ರೂಪದಲ್ಲಿ ನಮ್ಮನ್ನು ಎದುರಿಸುತ್ತಾರೋ, ಅದೇ ರೀತಿಯಲ್ಲಿ ನಾವು ಅವರಿಗೆ ಪ್ರತಿಕ್ರಿಯಿಸುವ ಅನಿವಾರ್ಯತೆ ಇದೆ. ದೇಶವು ರಾಜಕೀಯ ಅರಾಜಕತೆಯನ್ನು ಎದುರಿಸುವಾಗ ಯುವ ಜನಾಂಗವು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಸೀಮಿತವಾಗದೆ ಜನರನ್ನು ಸಂಘಟಿಸಿ ಹೋರಾಟದ ಮನೋಭಾವ ಬೆಳೆಸಿ ನೈಜ ಹೋರಾಟಗಾರರಾಗಬೇಕೆಂದು ಸಂದರ್ಭ ಅವರು ಕರೆ ನೀಡಿದರು.
ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ರಿಯಾಝ್ ವಿಚಾರಗೋಷ್ಠಿಯ ವಿಷಯ ಪರಿಚಯ ಮಾಡಿದರು. ವೇದಿಕೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವದಕತ್ ಶಾ ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಮುಹಮ್ಮದ್ ಝುಬೇರ್ ಸ್ವಾಗತಿಸಿ, ಮುಹಮ್ಮದ್ ಆಕಿಬ್ ವಂದಿಸಿದರು. ಶೈಮಾ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.
