ರಾಜ್ಯ ಸುದ್ದಿ

‘ಸುಳ್ಳಿನ ಕತ್ತಲನ್ನು ಸತ್ಯದ ಬೆಳಕು ಅಳಿಸಿ ಹಾಕುತ್ತೆ’; ಬಿಜೆಪಿಗೆ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಸಂದೇಶ ನೀಡಿದ ಸಿದ್ದರಾಮಯ್ಯ

‘ಬಿಜೆಪಿ ಕಾರ್ಯಕ್ರಮದಲ್ಲಿ ಗಾಂಧಿ, ಅಂಬೇಡ್ಕರ್, ಬಸವಣ್ಣ, ಕುವೆಂಪು ವಿಚಾರಧಾರೆಗಳೆಷ್ಟು ಇವೆ ಎನ್ನುವುದನ್ನು ಬಹಿರಂಗ ಪಡಿಸಲಿ’; ಬಹಿರಂಗ ಸವಾಲು

ವರದಿಗಾರ (ಅ.28): ಸುಳ್ಳಿನ ಕತ್ತಲನ್ನು ಸತ್ಯದ ಬೆಳಕು ಅಳಿಸಿ ಹಾಕುತ್ತೆ ಎಂದು ಕರ್ನಾಟಕದ ಬಿಜೆಪಿ ನಾಯಕರಿಗೆ ವಿಶಿಷ್ಟ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪಾವಳಿ ಸಂದೇಶ ನೀಡಿದ್ದಾರೆ.

ಸಿದ್ದರಾಮಯ್ಯರ ವೈಯಕ್ತಿಕ ವಿಷಯಗಳ ಬಗ್ಗೆ ಕೆದಕಿರುವ ಬಿಜೆಪಿಗರಿಗೆ ಸಲಹೆಗಳೊಂದಿಗೆ ಕೆಲವೊಂದು ಬುದ್ದಿ ಮಾತನ್ನು ಅವರು ನೀಡಿದ್ದಾರೆ. ಈ ಬಗ್ಗೆ ಅವರು ತನ್ನ ಫೇಸ್ಬುಕ್ ಪುಟದಲ್ಲಿ ಬಿಜೆಪಿಗೆ ಸಂದೇಶ ನೀಡಿದ್ದಾರೆ.

‘ನನ್ನ ಮನೆಯಲ್ಲಿ ನಡೆದ ಖಾಸಗಿ ಮಾತುಕತೆಯ ವಿಡಿಯೋದ ತಪ್ಪು ವ್ಯಾಖ್ಯಾನವನ್ನು ಕರ್ನಾಟಕ ಬಿಜೆಪಿ ನಾಯಕರು ಪ್ರಚಾರ ಮಾಡುತ್ತಾ, ವಿಕೃತಾನಂದ ಪಡುತ್ತಿದ್ದಾರೆ. ಇದು ನನಗೆ ಹೊಸತಲ್ಲ. ಈ ಸುಳ್ಳಿನ ಕತ್ತಲನ್ನು ಸತ್ಯದ ಬೆಳಕು ಅಳಿಸಿ ಹಾಕುತ್ತೆ. ನನ್ನ ರಾಜಕೀಯ ವಿರೋಧಿಗಳಿಗೆ ಇದೇ ನನ್ನ ದೀಪಾವಳಿ ಸಂದೇಶ’ ಎಂದು ಹೇಳಿದ್ದಾರೆ.

‘ನಾನು ಜಾತಿವಾದಿ ಅಲ್ಲ, ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವ ನಾನು ಅಂಬೇಡ್ಕರ್, ಗಾಂಧೀಜಿ, ಬಸವಣ್ಣ ಮತ್ತು ಕುವೆಂಪು ಅವರ ಚಿಂತನೆಯಿಂದ ಪ್ರೇರಿತನಾದ ಜಾತ್ಯತೀತ. ಅವರ ಚಿಂತನೆಗಳ ಫಲವೇ ನನ್ನ ಸರ್ಕಾರದ ಯೋಜನೆಗಳಾಗಿದ್ದವು. ಇದು ನನ್ನ ಜಾತಿವಿನಾಶದ ಹಾದಿ. ನಿಮ್ಮದು ಯಾವ ಹಾದಿ? ನಾನು ಜಾತಿ ರಾಜಕೀಯ ಮಾಡುತ್ತಿದ್ದೇನೆ ಎಂದು ಆರೋಪಿಸುವವರು ಅವರ ಪಕ್ಷಗಳ ನೀತಿ ಮತ್ತು ಕಾರ್ಯಕ್ರಮಗಳಲ್ಲಿ ಗಾಂಧಿ, ಅಂಬೇಡ್ಕರ್, ಬಸವಣ್ಣ ಮತ್ತು ಕುವೆಂಪು ವಿಚಾರಧಾರೆಗಳೆಷ್ಟು ಇವೆ ಎನ್ನುವುದನ್ನು ಬಹಿರಂಗ ಪಡಿಸಲಿ. ಇದರ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ದ. ಇದು ನನ್ನ ಸವಾಲು ಕೂಡಾ ಹೌದು’ ಎಂದು ಸಿದ್ದರಾಮಯ್ಯ ಬಿಜೆಪಿಗೆ ಬಹಿರಂಗ ಸವಾಲು ಹಾಕಿದ್ದಾರೆ.

‘ರಾಜ್ಯದ ಮತದಾರರು ಜಾತಿ ಬಿಟ್ಟು ಯೋಚನೆ ಮಾಡುತ್ತಿದ್ದಾರೆ, ಲಿಂಗಾಯತರು ಯಡಿಯೂರಪ್ಪನವರಿಂದ, ಒಕ್ಕಲಿಗರು ಜೆಡಿಎಸ್ ಪಕ್ಷದಿಂದ ದೂರವಾಗುತ್ತಿದ್ದಾರೆ ಎಂಬ ಗೆಳೆಯರ ಮಾತಿಗೆ ನಾನು ಸಹಮತ ಸೂಚಿಸಿದ್ದು ನಿಜ. ಜನ ಜಾತ್ಯತೀತರಾಗುತ್ತಿದ್ದಾರೆ ಎಂದು ಹೇಳಿದ್ದರಲ್ಲಿ ಏನು ತಪ್ಪಿದೆ? ರಾಜಕೀಯ ಪಕ್ಷಗಳು ನೈತಿಕವಾಗಿ ದಿವಾಳಿಯಾದಾಗ ಇಂತಹ ಅಪಸವ್ಯಗಳು ಹುಟ್ಟಿಕೊಳ್ಳುತ್ತವೆ. ವೈಯುಕ್ತಿಕ ದಾಳಿಗಳು ನನ್ನ ಸಾಮಾಜಿಕ ಬದ್ದತೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಮತ್ತು ಜನರಿಗಾಗಿ ಹೋರಾಡುವ ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತದೆ. ಇದಕ್ಕಾಗಿ ನನ್ನ ರಾಜಕೀಯ ವಿರೋಧಿಗಳಿಗೆ ಧನ್ಯವಾದಗಳು’ ಎಂದೂ ಹೇಳಿಕೊಂಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group