
‘ಇಂದು ಮುಸ್ಲಿಮರನ್ನು ಗುರಿಯಾಗಿಸಲಾಗಿದೆ, ನಾಳೆ ಕ್ರೈಸ್ತರನ್ನು, ಇತರ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಲಿದ್ದಾರೆ’
ವರದಿಗಾರ (ಅ.05,19): ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ)ಯನ್ನು ಯಾವುದೇ ಮುಲಾಜಿಲ್ಲದೆ ತಿರಸ್ಕರಿಸುವುದೇ ಈ ದೇಶದ ಜನತೆಯ ಮುಂದಿರುವ ದಾರಿ. ಇದು ಜನರ ಗಮನವನ್ನು ಬೇರೆಡೆಗೆ ವರ್ಗಾಯಿಸುವ ಬಿಜೆಪಿಯ ಹಿಡನ್ ಅಜೆಂಡವಾಗಿದೆ. ಎನ್.ಆರ್.ಸಿಯನ್ನು ತಿರಸ್ಕರಿಸುವುದು ದೇಶದ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿದಂತೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫಾನ್ಸೋ ಫ್ರಾಂಕೋ ಪ್ರತಿಕ್ರಿಯಿಸಿದ್ದಾರೆ.
ಗ್ರಹ ಸಚಿವ ಅಮಿತ್ ಶಾರವರ ಎನ್.ಆರ್.ಸಿ ಬಗೆಗಿನ ಹೇಳಿಕೆಯು, ದೇಶದ ಜನರನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸುವ ಕೋಮುವಾದಿ ಅಜೆಂಡಾವಾಗಿದೆ ಎಂಬುವುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ. ನಾವು ಈ ದೇಶದ ಮೂಲನಿವಾಸಿಗಳು. ಈ ದೇಶದಲ್ಲಿ ನಮಗೆ ಮತ್ತೊಮ್ಮೆ ನಮ್ಮ ಪೌರತ್ವವನ್ನು ಸಾಬೀತುಪಡಿಸಿಕೊಳ್ಳಬೇಕಾಗಿಲ್ಲ. ಎನ್.ಆರ್.ಸಿ ಎಂಬ ಅಸ್ತ್ರವನ್ನು ಉಪಯೋಗಿಸಿಕೊಂಡು ಮುಸ್ಲಿಮ್ ಹಾಗೂ ಅಲ್ಪಸಂಖ್ಯಾತ ಸಮುದಾಯವನ್ನು ದಮನಿಸಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ಕೋಮುವಾದಿ ಹಾಗೂ ಜನಾಂಗೀಯವಾದಿ ನೀತಿಗೆ ಮೊರೆ ಹೋಗಿವೆ. ಎನ್.ಆರ್.ಸಿ ಯು ಕೇವಲ ಮುಸ್ಲಿಂ ಸಮುದಾಯವನ್ನು ಗುರಿಪಡಿಸಿರುವುದಲ್ಲ ಬದಲಾಗಿ ಈ ದೇಶದ ಮೂಲನಿವಾಸಿಗಳನ್ನು ಗುರಿಯಾಗಿಸಲಾಗಿದೆ. ಇಂದು ಮುಸ್ಲಿಮರನ್ನು ಗುರಿಯಾಗಿಸಿರುವ ಇವರು ನಾಳೆ ಕ್ರೈಸ್ತ ಹಾಗೂ ಇನ್ನಿತರ ಸಮುದಾಯವನ್ನು ಗುರಿಯಾಗಿಸಲಿದ್ದಾರೆ. ಇಂದು ನಮ್ಮನ್ನು ಗುರಿಯಾಗಿಸಿಲ್ಲವೆಂದು ಎನ್.ಆರ್.ಸಿ ಯನ್ನು ನಾವು ಪುರಸ್ಕರಿಸುವುದಾದರೆ ನಾಳೆ ಅದು ನಮ್ಮನ್ನು ಗುರಿಯಾಗಿಸಲಿದೆ ಎಂಬುವುದು ಸತ್ಯ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು, ಇಂತಹ ಮತಿಗೆಟ್ಟ ಕಾನೂನುಗಳನ್ನು ತಿರಸ್ಕರಿಸಿ ಸೌಹಾರ್ದತೆಯಿಂದ, ಪ್ರೀತಿಯಿಂದ ನಾವೆಲ್ಲರೂ ಜೊತೆಗೂಡಿ ಬಾಳಬೇಕಾಗಿದೆ. ಅದಕ್ಕೆ ದಕ್ಕೆ ತರಲು ಪ್ರಯತ್ನಿಸುವ ಎಲ್ಲಾ ಶಕ್ತಿಗಳನ್ನು ಧೈರ್ಯದಿಂದ ಎದುರಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ನಾನು ಕ್ರೈಸ್ತ ಸಮುದಾಯದೊಂದಿಗೆ ವಿನಂತಿಸಿಕೊಳ್ಳುತ್ತಿದ್ದೇನೆ, ಎನ್.ಆರ್.ಸಿ ಎಂಬ ಕೋಮುವಾದಿ ಅಜೆಂಡಾಗಳಿಗೆ ತಾವುಗಳು ಬಲಿಯಾಗದೆ, ನಮ್ಮ ಪೌರತ್ವ ಸಾಬೀತುಪಡಿಸುವಂತಹ ಯಾವುದೇ ಪ್ರಕ್ರಿಯೆಗಳಿಗೆ ಮುಂದಾಗದೆ, ಅದನ್ನು ತಿರಸ್ಕರಿಸುವುದಾಗಿದೆ ಎಂದಿದ್ದಾರೆ.
ಭಾರತ ದೇಶದ ನಾಗರಿಕರ ಅಭಿವೃದ್ಧಿ, ವಿಕಾಸದ ಬಗ್ಗೆ ಚಿಂತಿಸುವುದರ ಬದಲಾಗಿ ದೇಶದ ಪ್ರಜೆಗಳನ್ನು ಹೊರದಬ್ಬುವುದು ಹೇಗೆ ಎಂಬ ಬಗ್ಗೆ ಯೋಚಿಸುವ ಇಂತಹ ಕುತ್ಸಿತ ಹಾಗೂ ವಿಭಜನಕಾರಿ ಮನಸ್ಸುಗಳು ದೇಶದ ಆಡಳಿತದ ಚುಕ್ಕಾಣಿಯಲ್ಲಿ ವಕ್ಕರಿಸಿರುವುದು ಭಾರತದ ಅತ್ಯಂತ ದುರದೃಷ್ಟವಾಗಿದೆ. ಆರೆಸ್ಸೆಸ್ಸಿನ ಜನಾಂಗೀಯವಾದಿ ಮತ್ತು ವಿಭಜನವಾದಿ ಸಿದ್ಧಾಂತಗಳನ್ನು ಕುತಂತ್ರಗಳ ಮೂಲಕ ಜಾರಿಗೆ ತರುತ್ತಿರುವ ಬಿಜೆಪಿ ಈ ದೇಶದ ಸಮಗ್ರತೆಗೆ, ಏಕತೆಗೆ ಹಾಗೂ ಭಾವೈಕ್ಯತೆಗೆ ಅತ್ಯಂತ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಆಲ್ಫಾನ್ಸೋ ಫ್ರಾಂಕೋ ಹೇಳಿದ್ದಾರೆ.
