ರಾಜ್ಯ ಸುದ್ದಿ

ಗೌರಿಯನ್ನು ಹತ್ಯೆಗೈದವರ ಸಿದ್ಧಾಂತವನ್ನು ನಾಶ ಮಾಡಿದರೆ ಮಾತ್ರ ಗೌರಿಗೆ ನ್ಯಾಯ ಸಿಗಲು ಸಾಧ್ಯ: ಕನ್ನಯ್ಯ ಕುಮಾರ್

‘ಇಂದು ಕಾಂಗ್ರೆಸ್-ಬಿಜೆಪಿ ನಡುವಿನ ಹೋರಾಟವಲ್ಲ. ನ್ಯಾಯ-ಅನ್ಯಾಯದ ವಿರುದ್ಧದ ಚಳವಳಿಯಾಗಿದೆ’

ಗೌರಿ ಲಂಕೇಶ್ ಲಿಂಗ, ಜಾತಿ, ಧರ್ಮ, ಪ್ರದೇಶದ ಗಡಿಗಳನ್ನು ಮೀರಿ ಎಲ್ಲರ ಮನೆಯ ಮಗಳಾಗಿ ಬೆಳಗಿದಳು: ಸಾಹಿತಿ ಕೆ.ಶರೀಫಾ

ಗೌರಿ ಹತ್ಯೆ ಪ್ರಕರಣದ ಬಗ್ಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಸಹೋದರಿ ಕವಿತಾ ಲಂಕೇಶ್ ಒತ್ತಾಯ

ವರದಿಗಾರ (ಸೆ.05): ಗೌರಿಯನ್ನು ಹತ್ಯೆಗೈದವರ ಸಿದ್ಧಾಂತವನ್ನು ನಾಶ ಮಾಡಿದರೆ ಮಾತ್ರ ಗೌರಿಗೆ ನ್ಯಾಯ ಸಿಗಲು ಸಾಧ್ಯವೆಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಡಾ.ಕನ್ನಯ್ಯ ಕುಮಾರ್ ಹೇಳಿದ್ದಾರೆ.

ಅವರು ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಖ್ಯಾತ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ 2 ವರ್ಷವಾದ ಹಿನ್ನಲೆಯಲ್ಲಿ ಗೌರಿ ಮೆಮೋರಿಯಲ್ ಟ್ರಸ್ಟ್ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಆಯೋಜಿಸಿದ್ದ ಗೌರಿ ನೆನಪು ಹಾಗೂ ಎ.ಕೆ.ಸುಬ್ಬಯ್ಯ ಅವರಿಗೆ ಶ್ರದ್ಧಾಂಜಲಿ ಮತ್ತು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

‘ಗಾಂಧಿಯನ್ನು ಹತ್ಯೆಗೈದ ದ್ರೋಹಿ ಗೋಡ್ಸೆಯನ್ನು ಜೈಲಿಗೆ ಕಳುಹಿಸಿದರು. ಇದೀಗ ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ. ಇದರಿಂದ ಬದಲಾವಣೆಗಳೇನೂ ಇಲ್ಲ. ಆದರೆ, ಹತ್ಯೆಗೈದವರ ಸಿದ್ಧಾಂತಗಳನ್ನು ನಾಶ ಮಾಡಿದರೆ ಮಾತ್ರ ಈ ಇಬ್ಬರ ಸಾವಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಿದೆ’ ಎಂದು ಹತ್ಯಾ ಆರೋಪಿಗಳ ಸಿದ್ಧಾಂತವನ್ನು ನಾಶ ಮಾಡುವಂತೆ ಕರೆ ನೀಡಿದ್ದಾರೆ.

‘ದೇಶದಲ್ಲಿಂದು ಕಾಂಗ್ರೆಸ್-ಬಿಜೆಪಿ ನಡುವಿನ ಹೋರಾಟವಲ್ಲ. ನ್ಯಾಯ-ಅನ್ಯಾಯದ ವಿರುದ್ಧ ಚಳವಳಿಯಾಗಿದೆ. ಅದೇ ವೇಳೆ ಮಾನವೀಯತೆ-ಕ್ರೌರ್ಯದ ನಡುವಿನ ಸಂಘರ್ಷವಾಗಿದೆ. ಗೌರಿ ಲಂಕೇಶ್, ಕಲಬುರ್ಗಿ, ಪನ್ಸಾರೆ ಅವರನ್ನು ಯಾರೂ ಗುರುತಿಸಲಿಲ್ಲ. ಆದರೆ, ಕೊಲೆಯಾದ ಬಳಿಕ ದೇಶವೇ ಅವರನ್ನು ಸ್ಮರಿಸಿತು. ನಮ್ಮ ಸಂಖ್ಯೆ ಚಿಕ್ಕದಾಗಿರಬಹುದು. ಆದರೆ, ನಮ್ಮ ಗುರಿ ದೊಡ್ಡದು’ ಎಂದು ಹೇಳಿದ್ದಾರೆ.

‘ಗಾಂಧಿಯನ್ನು ಹತ್ಯೆಗೈದವರ ಸಮರ್ಥಿಸುವವರು ಇಂದು ಆಡಳಿತದಲ್ಲಿದ್ದಾರೆ. ಗೋಡ್ಸೆಯ ಭಾವಚಿತ್ರವನ್ನು ಸಂಸತ್ತಿನಲ್ಲಿಡುತ್ತಾರೆ. ಸೇತುವೆಗಳಿಗೆ ಹೆಸರು ನಾಮಕರಣ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿದ್ದೇವೆ ಅಂದರೆ ಯಾರಿಗೆ ನ್ಯಾಯ ಸಿಗುತ್ತಿದೆ?’ ಎಂದು ಕನ್ನಯ್ಯ ಪ್ರಶ್ನಿಸಿದ್ದಾರೆ.

ಗೌರಿ ಲಂಕೇಶ್ ಕುರಿತ ಪುಸ್ತಕದ ಬಗ್ಗೆ ಸಾಹಿತಿ ಕೆ.ಶರೀಫಾ ಮಾತನಾಡಿ, ಸಮತೂಕದ ಚಿಂತನೆಗಳು, ಗಂಭೀರವಾದ ವಿಷಯಗಳು ಕೃತಿಯಲ್ಲಿ ಅಡಕವಾಗಿವೆ. ಗೌರಿ ಲಂಕೇಶ್ ನಂಬಿಕೊಂಡು ಬಂದ ತತ್ವ-ಆದರ್ಶಗಳಾದ ಸಮಾನತೆ, ಸೌಹಾರ್ದತೆಯ ಅಂಶಗಳನ್ನು ಇಲ್ಲಿ ದಾಖಲಿಸಲಾಗಿದೆ. ಕೃತಿಯಲ್ಲಿ ಮಹಿಳೆಯರ ಸ್ವಾತಂತ್ರ್ಯ ಹಾಗೂ ಅವರ ಮೇಲಿನ ದೌರ್ಜನ್ಯ, ದಬ್ಬಾಳಿಕೆಗಳ ವಿರುದ್ಧ ನಡೆಸಬೇಕಾದ ಹೋರಾಟದ ಕುರಿತು ಬರೆದಿದ್ದಾರೆ. ಸಮ ಸಮಾಜದ ಕನಸಿನ ಆಶಯಗಳನ್ನು ಕೃತಿಯಲ್ಲಿ ವ್ಯಕ್ತವಾಗಿದೆ ಎಂದ ಅವರು, ಗೌರಿ ಲಂಕೇಶ್ ಸಾವಿನ ಬಳಿಕ ಲಿಂಗ, ಜಾತಿ, ಧರ್ಮ, ಪ್ರದೇಶದ ಗಡಿಗಳನ್ನು ಮೀರಿ ಎಲ್ಲರ ಮನೆಯ ಮಗಳಾಗಿ ಬೆಳಗಿದಳು ಎಂದು ಗೌರಿ ಲಂಕೇಶ್ ಬಿತ್ತಿ ಹೋದ ಬೀಜಗಳು ಮೊಳಕೆಯೊಡೆದಿರುವ ಬಗ್ಗೆ ಹೇಳಿದರು.

ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಮಾತನಾಡಿ, ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗಾಗಲೇ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣ ತೀವ್ರಗತಿಯಲ್ಲಿ ಮುನ್ನಡೆಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವಂತೆ ಸರಕಾರವನ್ನು ಅವರು ಒತ್ತಾಯಿಸಿದರು.

ಎ.ಕೆ.ಸುಬ್ಬಯ್ಯರ ಪುತ್ರ ಎ.ಎಸ್.ಪೊನ್ನಣ್ಣ ಮಾತನಾಡಿ. ಎ.ಕೆ.ಸುಬ್ಬಯ್ಯ ಅವರು ಅನ್ಯಾಯವನ್ನು ಕಂಡಾಗ ಅದನ್ನು ಸಹಿಸುತ್ತಿರಲಿಲ್ಲ. ಗೌರಿ ಲಂಕೇಶ್‌ರ ಹತ್ಯೆಯಾದ ಸಂದರ್ಭದಲ್ಲಿ ಅವರು ತೀವ್ರವಾಗಿ ವಿಚಲಿತರಾಗಿದ್ದರು. ಅದೇ ಅವರ ಆರೋಗ್ಯದ ಸಮಸ್ಯೆ ಬಿಗಡಾಯಿಸಲು ಒಂದು ರೀತಿಯಲ್ಲಿ ಕಾರಣವೂ ಆಯಿತು. ಅವರ ವಿಚಾರಗಳನ್ನು ಎಂದಿಗೂ ಸಾಯಲು ಬಿಡಲ್ಲ. ಅವರು ನಂಬಿದ ಸಿದ್ಧಾಂತಗಳನ್ನು ಮುಂದುವರಿಸಲು ನಾನು ಹಾಗೂ ನಮ್ಮ ಕುಟುಂಬ ಎಲ್ಲ ರೀತಿಯಲ್ಲಿಯೂ ಸಹಕರಿಸುತ್ತದೆ ಎಂದು ಈ ಸಂದರ್ಭ ಭರವಸೆ ನೀಡಿದ್ದಾರೆ.

ಗೌರಿ ಟ್ರಸ್ಟ್ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ಎ.ಕೆ.ಸುಬ್ಬಯ್ಯ ಅವರ ಬದುಕಿನುದ್ದಕ್ಕೂ ನಡೆಸಿದ ಹೋರಾಟದಲ್ಲಿ ಬುದ್ಧನ ತಾತ್ವಿಕತೆ ಬೆಸೆದುಕೊಂಡಿತ್ತು. ಅವರಲ್ಲಿ ಬುದ್ಧನ ಬೆಳಕು ಕಾಣುತ್ತಿತ್ತು. ಸುಬ್ಬಯ್ಯ ಅವರು ಕಾಯಿಲೆಯಿಂದ ಬಳಲುತ್ತಿದ್ದರೂ ಎಂದೂ ಹೋರಾಟ, ಚಳವಳಿಯಿಂದ ಹಿಂದಕ್ಕೆ ಹೆಜ್ಜೆಯಿಡಲಿಲ್ಲ ಎಂದರು. ಸುಬ್ಬಯ್ಯ ಅವರು ಬರಹಗಾರ, ಹೋರಾಟಗಾರ, ರಾಜಕಾರಣಿ ಹೀಗೆ ಭಿನ್ನವಾದ ನೆಲೆಯಲ್ಲಿ ಹಿಡಿತ ಸಾಧಿಸಿದ್ದರು. ಅಲ್ಲದೆ, ಪರಿಸರವಾದದಲ್ಲಿಯೂ ಪ್ರಖರತೆಯನ್ನು ಬೆಳೆಸಿಕೊಂಡಿದ್ದರು. ಅವರು ಕೊನೆ ಕ್ಷಣದಲ್ಲಿಯೂ ಸ್ವಾಭಿಮಾನ, ಘನತೆ ಮೆರೆದರು. ಅವರ ವಿಚಾರಧಾರೆಗಳು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಪುತ್ರಿ ಈಶಾ, ಪ್ರಾಧ್ಯಾಪಕ ಹುಲಿಕುಂಟೆ ಮೂರ್ತಿ ಸಂದರ್ಭೋಚಿತವಾಗಿ ಮಾತನಾಡಿದರು.

 

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group