
‘ಇದು ಪ್ರಾಚೀನ ಕಾಲದ ವಿಜ್ಞಾನ ಹಾಗೂ ನಾವು ಈ ತಂತ್ರಗಾರಿಕೆಯನ್ನು ಆಧುನಿಕ ಕಾಲದಲ್ಲಿ ಪರಿಚಯಿಸಲಿದ್ದೇವೆ’
ವರದಿಗಾರ (ಆ.28): ಹೊಸ ಹೊಸ ಸಂಶೋಧನೆಯನ್ನು ಕಂಡು ಹಿಡಿಯುತ್ತಿರುವ ಬಿಜೆಪಿ ಪಕ್ಷದ ಚುನಾಯಿತ ಜನಪ್ರತಿನಿಧಿಗಳು ಮತ್ತೊಂದು ಸಂಶೋಧನೆಯನ್ನು ಕಂಡು ಹಿಡಿದಿರುವ ಬಗ್ಗೆ ವರದಿಯಾಗಿದೆ. ಈ ಬಾರಿ ನೂತನ ಸಂಶೋಧನೆಯನ್ನು ಕಂಡು ಹಿಡಿದವರು ಅಸ್ಸಾಂನ ಬಿಜೆಪಿ ನಾಯಕ ಹಾಗೂ ಸಿಲ್ಚಾರ್ ಕ್ಷೇತ್ರದ ಶಾಸಕ ದಿಲೀಪ್ ಕುಮಾರ್ ಪೌಲ್.
ಶಾಸಕ ದಿಲೀಪ್ ಕುಮಾರ್ ಪೌಲ್ ಹೇಳುವಂತೆ, “ಶ್ರೀ ಕೃಷ್ಣ ಮಾಡಿದಂತೆ ಕೊಳಲನ್ನು ವಿಶಿಷ್ಟ ರಾಗದಲ್ಲಿ ಊದಲು ನಮಗೆ ಸಾಧ್ಯವಾದರೆ ದನ ನೀಡುವ ಹಾಲು ಹಲವು ಪಟ್ಟು ಹೆಚ್ಚಾಗುವುದು ಎಂದು ಆಧುನಿಕ ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ” ಎಂದು ಹೇಳಿ ತನ್ನ ಸಂಶೋಧನೆಯನ್ನು ಬಹಿರಂಗಪಡಿಸಿದ್ದಾರೆ.
ಅವರು ತಮ್ಮ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಜಾನಪದ ಉತ್ಸವದ ಕಾರ್ಯಕ್ರಮದಲ್ಲಿ ಮೇಲಿನಂತೆ ಹೇಳಿದ್ದಾರೆ. “ಇದು ಪ್ರಾಚೀನ ಕಾಲದ ವಿಜ್ಞಾನ ಹಾಗೂ ನಾವು ಈ ತಂತ್ರಗಾರಿಕೆಯನ್ನು ಆಧುನಿಕ ಕಾಲದಲ್ಲಿ ಪರಿಚಯಿಸಲಿದ್ದೇವೆ” ಎಂದೂ ಅವರು ಹೇಳಿಕೊಂಡಿದ್ದಾರೆ.
“ನಾನು ವಿಜ್ಞಾನಿಯಲ್ಲ, ಆದರೆ ಭಾರತದ ಸಾಂಪ್ರದಾಯಿಕತೆಯ ಬಗ್ಗೆ ನನಗೆ ಸಾಕಷ್ಟು ಜ್ಞಾನವಿದೆ ಹಾಗೂ ಈ ಮಾತುಗಳು ನಿಜ ಹಾಗೂ ಇಂತಹ ವಿಚಾರಗಳನ್ನು ವಿಜ್ಞಾನಿಗಳು ಇತ್ತೀಚೆಗೆ ನಂಬಲು ಆರಂಭಿಸಿದ್ದಾರೆ” ಎಂದು ತನ್ನ ಹೇಳಿಕೆಯನ್ನು ತಾನೇ ಸಮರ್ಥಿಸಿಕೊಂಡಿದ್ದಾರೆ.
