ರಾಜ್ಯ ಸುದ್ದಿ

ಅಮಾಯಕನನ್ನು ಉಗ್ರನೆಂದ ‘ಭಯ+ಉತ್ಪಾದಕ’ ಪತ್ರಕರ್ತರ ಬಂಧನ ಯಾವಾಗ?

► ‘ಪ್ರಭು’ಗಳನ್ನು ಮೆಚ್ಚಿಸಲು, ಜನರ ಗಮನ ಬೇರೆಡೆ ಸೆಳೆಯುವ ತಂತ್ರವೇ?

►ಮಾಧ್ಯಮ ಭಯೋತ್ಪಾದನೆಗೆ ಜಿಲ್ಲೆಯಾದ್ಯಂತ ಆಕ್ರೋಶ

ವರದಿಗಾರ (ಆ.20): ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಮಾಡಿರುವ ಬೆಳ್ತಂಗಡಿಯ ರವೂಫ್ ಎಂಬವರನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ ಎಂಬ ಕಪೋಲಕಲ್ಪಿತ ಸುಳ್ಳು ಸುದ್ದಿಯನ್ನು ನಿನ್ನೆ ರಾಜ್ಯದ ಕೆಲ ದೃಶ್ಯ ಮಾಧ್ಯಮಗಳು ಹಾಗೂ ದಿನ ಪತ್ರಿಕೆಗಳು ಪ್ರಕಟಿಸಿ, ಅಮಾಯಕ ವ್ಯಕ್ತಿಯೊಬ್ಬರ ನೆಮ್ಮದಿಯ ಜೀವನದ ಜೊತೆಗೆ ಚೆಲ್ಲಾಟವಾಡಿರುವ ಘಟನೆಯ ಕುರಿತಂತೆ ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸುಳ್ಳು ಸುದ್ದಿಗಳನ್ನು ಹರಡುವುದರ ಮೂಲಕ ಜನರ ಮನಸ್ಸಿನಲ್ಲಿ ಕೃತಕ ಭಯವನ್ನು ಉತ್ಪಾದಿಸುವ ಈ ವಿಘ್ನ ಸಂತೋಷಿ ಪತ್ರಕರ್ತರನ್ನು ಬಂಧಿಸಿ, ಸುಳ್ಳು ಸುದ್ದಿಯ ಮೂಲಗಳನ್ನು ಪತ್ತೆ ಹಚ್ಚಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.

”ಪಾಕಿಸ್ತಾನಕ್ಕೆ ಸ್ಯಾಟಲೈಟ್ ಫೋನ್ ಮೂಲಕ ದಕ್ಷಿಣ ಕನ್ನಡದ ಬೆಳ್ತಂಗಡಿಯಿಂದ ಕರೆ ಮಾಡಲಾಗಿದೆ, ಈ ಕುರಿತು ರಾಷ್ಟ್ರೀಯ ತನಿಖಾ ದಳ (ಏನ್ ಐ ಎ) ದಕ್ಷಿಣ ಕನ್ನಡದ ಮೌಲ್ವಿಯೊಬ್ಬರನ್ನು ಬಂಧಿಸಿದ್ದಾರೆ, ಅವರ ಹೆಸರು ರವೂಫ್” ಎಂಬ ಯಾವುದೇ ಆಧಾರವಿಲ್ಲದ ಸುದ್ದಿಗಳನ್ನು ಕರ್ನಾಟಕದ ಕೆಲವೊಂದು ಸುದ್ದಿ ವಾಹಿನಿಗಳು ನಿನ್ನೆ ಪ್ರಸಾರಪಡಿಸಿದ್ದವು. ಇವುಗಳ ಜೊತೆಗೆ ತಾನೂ ಏನೂ ಕಮ್ಮಿಯಿಲ್ಲವೆಂಬಂತೆ ಕರಾವಳಿಯಿಂದ ಪ್ರಕಟವಾಗುವ ಪತ್ರಿಕೆಯೊಂದು ಸಹ ಇದರ ಸುದ್ದಿಯನ್ನು ಪ್ರಕಟಿಸಿ ಆತ್ಮತೃಪ್ತಿ ಪಟ್ಟುಕೊಂಡಿತ್ತು. ಸುಳ್ಳು ಸುದ್ದಿಯೊಂದನ್ನು ಯಾವುದೇ ಪೊಲೀಸ್ ಮೂಲಗಳನ್ನು ಉಲ್ಲೇಖಿಸದೆ ತೇಲಿ ಬಿಟ್ಟದ್ದು ಮಾತ್ರವಲ್ಲದೆ, ಅದರ ಜೊತೆಗೆ ವ್ಯಕ್ತಿಯೊಬ್ಬರ ಹೆಸರನ್ನೂ ಸೇರಿಸಿಬಿಡುವಷ್ಟರ ಮಟ್ಟಿಗಿನ ಬೇಜವಾಬ್ದಾರಿತನದ ಪತ್ರಿಕೋದ್ಯಮವನ್ನು ಈ ಎಲ್ಲಾ ಮಾಧ್ಯಮಗಳ ಮಂದಿ ಮಾಡಿ, ವ್ಯಕ್ತಿಯೊಬ್ಬರ ಜೀವನದ ಜೊತೆ ಆಟವಾಡಿದ್ದವು.

ಯುಟಿ ಖಾದರ್ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ರವೂಫ್

ಘಟನೆಯ ನಂತರ ತೀವ್ರ ತರದಲ್ಲಿ ಮಾನಸಿಕವಾಗಿ ನೊಂದುಕೊಂಡಿರುವ, ಮಂಜನಾಡಿಯ ಧಾರ್ಮಿಕ ಕೇಂದ್ರವೊಂದರಲ್ಲಿ ಹಿರಿಯ ಗುರುವೊಬ್ಬರ ಸಹಾಯಕನಾಗಿ ಕೆಲಸ ಮಾಡುತ್ತಿರುವ ರವೂಫ್ ಇಂದು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಯುಟಿ ಖಾದರ್ ಅವರ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಹಾಜರಾಗಿ ತನಗಾದ ವೇದನೆಗಳನ್ನು ಹಂಚಿಕೊಂಡರು. ತನ್ನ ವಿರುದ್ಧ ಷಡ್ಯಂತ್ರ ರೂಪಿಸಿದ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.

ಕಮಿಷನರ್, ಎಸ್ಪಿಗೆ ತಿಳಿಯದಿರುವ ಈ ಸುದ್ದಿಯ ಮೂಲ ಯಾರು : ಖಾದರ್ ಪ್ರಶ್ನೆ

ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯು ಟಿ ಖಾದರ್, ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಹಾಗೂ ಕಮಿಷನರ್ ಅವರಿಗೆ ತಿಳಿಯದೇ ಇರುವ ಈ ಒಂದು ಸುದ್ದಿಯನ್ನು ಸೃಷ್ಟಿ ಮಾಡಿರುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಈ ಸುದ್ದಿಯ ಮೂಲಗಳನ್ನು ಪತ್ತೆ ಹಚ್ಚಿ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

‘ಪ್ರಭು’ ಗಳನ್ನು ಮೆಚ್ಚಿಸಲು ಹಾಗೂ ಜನರ ಗಮನ ಬೇರೆಡೆ ಸೆಳೆಯುವ ಷಡ್ಯಂತ್ರವೇ?

ಒಂದೆಡೆ ಭೀಕರ ಪ್ರವಾಹಕ್ಕೊಳಗಾಗಿರುವ ರಾಜ್ಯದ ಕಡೆ ಕಣ್ಣೆತ್ತಿಯೂ ನೋಡದ ಹಾಗೂ ಇದುವರೆಗೂ ಬಿಡಿಗಾಸೂ ಪರಿಹಾರ ನೀಡದ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ರಾಜ್ಯದ ಜನರ ಸಹನೆಯ ಕಟ್ಟೆಯೊಡೆಯುತ್ತಿರುವಾಗ ಹಾಗೂ ಮೈತ್ರಿ ಸರಕಾರವನ್ನು ಉರುಳಿಸಿದ್ದ ರಾಜ್ಯ ಬಿಜೆಪಿ, ತದ ನಂತರ ಯಡಿಯೂರಪ್ಪನವರ ಏಕ ವ್ಯಕ್ತಿಯ ಸರಕಾರ ಆಡಳಿತಕ್ಕೆ ಬಂದು ತಿಂಗಳು ಸಮೀಪಿಸಿದರೂ ಕ್ಯಾಬಿನೆಟ್ ವಿಸ್ತರಣೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿಸದಿರುವ ಕುರಿತು ಜನರ ಗಮನವನ್ನು ಬೇರೆಡೆ ಸೆಳೆಯಲು ಈ ಮಾಧ್ಯಮಗಳು ಷಡ್ಯಂತ್ರ ರೂಪಿಸಿದೆವೆಯೇ ಎಂಬ ಗುಮಾನಿಯನ್ನು ದಕ್ಷಿಣ ಕನ್ನಡದ ಜಿಲ್ಲೆಯ ಜನರು ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಜವಾಬ್ದಾರಿ ಮರೆತ ಕೆಲವೊಂದು ಪತ್ರಕರ್ತರ ತೆವಲಿಗೆ ಅಮಾಯಕ ರವೂಫ್ ಮಾತ್ರ ತನ್ನ ನೆಮ್ಮದಿಯನ್ನು ಕಳಕೊಂಡು, ಊರಿನಲ್ಲಿ ಜನರು ಅವರನ್ನು ಅನುಮಾನದ ದೃಷ್ಟಿಕೋನದಿಂದ ನೋಡುವಂತೆ ಆಗಿದ್ದು ಮಾತ್ರ ಸುಳ್ಳಲ್ಲ. ಯಾವುದೇ ಪೊಲೀಸ್ ಇಲಾಖೆಯ ಮೂಲಗಳು ಖಚಿತಪಡಿಸದಿದ್ದರೂ ಇಂತಹಾ ಸುಳ್ಳು ಸುದ್ದಿಗಳಿಗೆ ಕಾರಣವಾಗಿರುವ ಪತ್ರಕರ್ತರನ್ನು ಬಂಧಿಸಿ, ಅವರನ್ನು ವಿಚಾರಣೆಗೆ ಗುರಿಪಡಿಸಿದರೆ ಮಾತ್ರ ಮಾಧ್ಯಮಗಳ ಕಡೆಗೆ ಜನರು ವಿಶ್ವಾಸದ ದೃಷ್ಟಿ ಬೀರಬಹುದಾಗಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group