About Us

‘ವರದಿಗಾರ’ – ಸ್ವಾಭಿಮಾನದ ಎರಡು ವರ್ಷ; ವೃತ್ತಿಪರರ ಪೈಪೋಟಿಯ ನಡುವೆ ಹವ್ಯಾಸಿಗರ ಸಾಹಸ!

‘ತೆರೆಮರೆಯ ಸತ್ಯ’ವನ್ನು ನಿಮ್ಮ ಮುಂದಿಡುವ ಭರವಸೆಯೊಂದಿಗೆ ಪ್ರಾರಂಭವಾದ ‘ವರದಿಗಾರ’ ಅಂತರ್ಜಾಲ ಮಾಧ್ಯಮ ಇದೀಗ ಎರಡು ವರ್ಷಗಳನ್ನು ಪೂರೈಸುತ್ತಿದೆ. ಈ ಕಳೆದ ಎರಡು ವರ್ಷಗಳು ಅದಷ್ಟು ಸುಲಭವಾಗಿರಲಿಲ್ಲ! ವೃತ್ತಿಪರ ಪತ್ರಕರ್ತರ ಪೈಪೋಟಿಯ ನಡುವೆ ಸತ್ಯವನ್ನು ಕನ್ನಡಿಗರ ಮುಂದಿಡುವ ಪಣ ತೊಟ್ಟ ಮೂವರು ಹವ್ಯಾಸಿಗಳಿಗೆ ಇದೊಂದು ಸಾಹಸವೇ ಆಗಿತ್ತು.

ಇದೀಗ ಸುದ್ದಿ ಮಾಧ್ಯಮವೆಂದರೆ ಎಲ್ಲರಿಗೂ “ನಮ್ಮಲ್ಲೇ ಮೊದಲು” ಅಥವಾ “ಎಕ್ಸ್’ಕ್ಲೂಸಿವ್ ಸ್ಟೋರಿ” ಎಂಬ ತಲೆ ಬರಹದೊಂದಿಗೆ ಪ್ರಕಟಿಸುವ ಪೈಪೋಟಿ! ತಲೆ ಬರಹಗಳು ಆಕರ್ಷಕವಾಗಿರಬೇಕು, ಅದು ರಾಜಕೀಯ ಕುದುರೆ ವ್ಯಾಪಾರವೋ, ಬಾಲಿವುಡ್ ತಾರೆಯ ವಿವಾಹ ಅಥವಾ ಇನ್ಯಾರದ್ದೋ ಸಾವು..ಅದೇನಾಗಿದ್ದರೂ ಪರವಾಗಿಲ್ಲ! ಒಂಥರಾ, ತಲೆಗೆಟ್ಟ ಬರಹಗಳು!

‘ನಾ-ಮುಂದು, ತಾ -ಮುಂದು’ ಎಂಬ ಪೈಪೋಟಿಯಲ್ಲಿ ಅರ್ಧ ಸತ್ಯವನ್ನು ಅಥವಾ ಸಂಪೂರ್ಣ ಸುಳ್ಳನ್ನು ಪ್ರಸರಿಸುತ್ತಿರುವ ಮಾಧ್ಯಮಗಳು, ಸರಕಾರದಿಂದ ದೊರಕುವ ಜಾಹೀರಾತಿನ ಮೊತ್ತಕ್ಕಾಗಿ ತಮ್ಮ ಬೆನ್ನೆಲುಬನ್ನು ಅಡವಿಟ್ಟ/ಮಾರಿಕೊಂಡ ಮಾಧ್ಯಮಗಳು, ಸುಳ್ಳು ಸುದ್ದಿಗಳನ್ನೇ ಪ್ರಸರಿಸಲು ಹಾಗೂ ಸರಕಾರದ ಕೊರತೆಗಳಿಂದ ಜನರ ಗಮನ ತಪ್ಪಿಸಲು ‘ಸೆನ್ಸೇಶನಲ್ ನ್ಯೂಸ್’ ಮೂಲಕ ವಿವಾದಗಳನ್ನು ಸೃಷ್ಟಿಸಿಲಿಕ್ಕಾಗಿಯೇ ಹುಟ್ಟಿಕೊಂಡ ಟಿವಿ ಚಾನೆಲ್’ಗಳು, ಪತ್ರಕರ್ತರ ಹಾಗೂ ರಾಜಕಾರಣಿಗಳ ಅನೈತಿಕ ಸಂಬಂಧದಿಂದ ಹುಟ್ಟಿಕೊಂಡ ಮಾಧ್ಯಮ ಸಂಸ್ಥೆಗಳು… ಈ ಎಲ್ಲಾ ಸಮಸ್ಯೆಗಳ ನಡುವೆ ಕನ್ನಡಿಗರಿಗೆ ಸತ್ಯ ಸುದ್ದಿಯನ್ನು ತಲುಪಿಸಬೇಕೆಂಬ ಏಕೈಕ ಉದ್ದೇಶದಿಂದ ‘ವರದಿಗಾರ’ ನಿಮ್ಮ ಮುಂದೆ ಪ್ರತ್ಯಕ್ಷವಾಗಿತ್ತು.

ಮೂವರು ಸಮಾನ ಮನಸ್ಕ ಸ್ನೇಹಿತರ ‘ಸಮಾಜಕ್ಕಾಗಿ ಏನಾದರೂ ಮಾಡಬೇಕು’ ಎಂಬ ತುಡಿತವೇ ‘ವರದಿಗಾರ’ ನ ಹುಟ್ಟಿಗೆ ಕಾರಣವಾಯಿತು. ಈ ಹಿಂದೆ ಒಮ್ಮೆಯೂ ಭೇಟಿಯಾಗದೆ, ತಮ್ಮ – ತಮ್ಮ ಹೊಟ್ಟೆಪಾಡಿಗಾಗಿ ಮೂರು ಬೇರೆ-ಬೇರೆ ನಗರಗಳಲ್ಲಿ ಉದ್ಯೋಗದಲ್ಲಿರುವ ಈ ಮೂವರು , ಕೇವಲ ಸಾಮಾಜಿಕ ಜಾಲತಾಣದಲ್ಲಿರುವ ಪರಿಚಯವನ್ನೇ ಮೂಲವಾಗಿರಿಸಿ ಹೊಸದೊಂದು ಸಾಹಸಕ್ಕೆ ಕೈ ಹಾಕಲು ತೀರ್ಮಾನಿಸಿದರು.

2017ರ ಜುಲೈ ತಿಂಗಳ ಕೊನೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ, ನಾವು ಸಾಮಾಜಿಕ-ರಾಜಕೀಯ ಸುದ್ದಿಗಳನ್ನು ಕನ್ನಡಿಗರ ಮುಂದಿಡಲು ಹಾಗೂ ಸುದ್ದಿಯ ವಿಶ್ಲೇಷಣೆಯನ್ನು ಅಂತರ್ಜಾಲ ಸುದ್ದಿ ಮಾಧ್ಯಮ ಮೂಲಕ ಜನರ ಮುಂದಿಡುವ ಸಾಹಸಕ್ಕೆ ಕೈ ಹಾಕಲು ತೀರ್ಮಾನಿಸಿದೆವು.

ಸ್ವಾತಂತ್ರ್ಯೋತ್ಸವದಂದೇ ಪ್ರಾರಂಭಿಸಬೇಕೆಂದು ಯೋಚಿಸಿದ್ದ ಕಾರಣ, ಇನ್ನುಳಿದಿದ್ದ 10-15 ದಿನಗಳಲ್ಲೇ ನಮ್ಮ ಪ್ರಯತ್ನದ ನಾಮಕರಣ, ಲೋಗೋ ಡಿಸೈನ್, ಪ್ರಚಾರ ಹೀಗೆ ಹತ್ತು ಹಲವು ಕಾರ್ಯಗಳನ್ನು ಮುಗಿಸಬೇಕಾಗಿತ್ತು.

ಕೊನೆಗೂ 2017ರ ಆಗಸ್ಟ್ 15ರಂದು ‘ವರದಿಗಾರ’ ನನ್ನು ಪ್ರಾರಂಬಿಸಿದೆವು.
ಆರಂಭದಲ್ಲೇ ದೊರಕಿದ ಅದ್ಭುತ ಬೆಂಬಲ ನಮ್ಮ ಉತ್ಸಾಹ ಮುಗಿಲೇರಲು ಕಾರಣವಾಯಿತು. ಅಲ್ಲಿಂದ ಮುನ್ನುಗ್ಗಿದ ನಾವು ಹೆಜ್ಜೆ ಹಿಂದಿಡುವ ಬಗ್ಗೆ ಯಾವತ್ತೂ ಯೋಚಿಸಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಓದುಗರ ‘ಲೈಕ್, ಕಮೆಂಟ್ ಹಾಗೂ ರಿವ್ಯೂ ನಮ್ಮ ಬೆನ್ನು ತಟ್ಟಿದ ಅನುಭವ ನೀಡಿದವು.

ನಮ್ಮ ವಿರುದ್ಧ ನೀಡಿದ ಪೊಲೀಸ್ ದೂರು, ಸಾಮಾಜಿಕ ಜಾಲತಾಣಗಳ ಬೆದರಿಕೆ, ಅಸಭ್ಯ ಕಮೆಂಟ್ಸ್ ಹೀಗೆ ವಿರೋಧಿಗಳೂ ತಮ್ಮ ತಮ್ಮ ಮಟ್ಟಿಗೆ ತಕ್ಕಂತೆ ನಮಗೆ ಸಹಾಯ ಮಾಡಿದರು.

ನಾವ್ಯಾರೂ ವೃತ್ತಿಪರ ಪತ್ರಕರ್ತರಲ್ಲ. ‘ವರದಿಗಾರ’ ನಮ್ಮ ಬಿಡುವಿನ ವೇಳೆಯ ಸಮಾಜ ಸೇವೆ! ಇಲ್ಲಿ ನಮಗೆ ಆದಾಯವಿಲ್ಲ, ಅದೇನಿದ್ದರೂ ಖರ್ಚು ಮಾತ್ರ!

ಇದುವರೆಗೂ ನಾವು ನಮ್ಮ ಪರಿಚಯವನ್ನು ಬಹಿರಂಗಗೊಳಿಸಿಲ್ಲ. ನಮ್ಮ ಆತ್ಮೀಯ ಸ್ನೇಹಿತರು ಅಥವಾ ಸಂಬಂಧಿಕರಿಗೆ ನಮ್ಮ ಈ ಸಾಹಸದ ಮಾಹಿತಿಯಿದೆಯೇ ಹೊರತು ಇನ್ನೆಲ್ಲೂ ನಮ್ಮ ಪರಿಚಯವನ್ನು ನಾವು ಬಹಿರಂಗಗೊಳಿಸಿಲ್ಲ. ಮುಂದೊಂದು ದಿನ ನಿಮ್ಮ ಮುಂದೆ ನಮ್ಮ ಪರಿಚಯದೊಂದಿಗೆ ಹೆಮ್ಮೆಯಿಂದ ಪ್ರತ್ಯಕ್ಷವಾಗುವ ಬಯಕೆಯೂ ಇಲ್ಲದಿಲ್ಲ. ಅಲ್ಲಿಯವರೆಗೂ ‘ಹೆಸರು ಬೇಡ, ಊರು ಬೇಡ’.

ಮಾಧ್ಯಮಗಳು ಸತ್ಯಾಸತ್ಯತೆ ಗಮನಿಸದೇ, ಅದ್ಯಾರದ್ದೋ ಭಯದಿಂದ ಸುದ್ದಿ ಪ್ರಕಟಿಸುತ್ತಿವೆ. ಕೆಲವರಿಗೆ ಫೇಸ್ಬುಕ್ ಜ್ಞಾನ ಭಂಡಾರವಾದರೆ, ಇನ್ನು ಕೆಲವರಿಗೆ ವಾಟ್ಸ್ಯಾಪ್ ಗ್ರೂಪ್’ಗಳೇ ವಿಶ್ವವಿದ್ಯಾಲಯ!

ಜಾತಿ-ಮತಗಳ ಆಧಾರದಲ್ಲಿ ಧ್ರುವೀಕರಣಗೊಂಡಿರುವ ಭಾರತದಲ್ಲಿ ಗುಂಪು ಹತ್ಯೆ ಹಾಗೂ ಗಲಭೆಗಳಿಗೆ ಸಾಮಾಜಿಕ ಜಾಲತಾಣಗಳು ಹಾಗೂ ಸ್ವಯಂಘೋಷಿತ ಮಾಧ್ಯಮಗಳ ಕೊಡುಗೆ ಅಪಾರ.

ಇಂತಹಾ ಪರಿಸ್ಥಿತಿಯಲ್ಲಿ ನಮ್ಮ ಜವಾಬ್ದಾರಿ ನಮಗೆ ಚೆನ್ನಾಗಿ ತಿಳಿದಿದೆ. ಕೆಲವೊಮ್ಮೆ ಓದುಗರ ನಿರೀಕ್ಷೆಯಂತೆ ಸುದ್ದಿ ನೀಡಲಾಗದಿದ್ದಕ್ಕೆ ವಿಷಾದಿಸುತ್ತೇವೆ.

ನಾವು ಯಾವತ್ತೂ,
ಅಧಿಕಾರದಲ್ಲಿರುವವರ ಪ್ರಚಾರಕರಾಗುವುದಿಲ್ಲ,
ಜಾಹೀರಾತುಗಳಿಗಾಗಿ ಅಥವಾ ಬೆದರಿಕೆಯಿಂದ ಸುದ್ದಿಯನ್ನು ತಿರುಚುವುದಿಲ್ಲ.
ನಮ್ಮ ವೈಯಕ್ತಿಕ ಅಭಿಪ್ರಾಯ, ರಾಜಕೀಯ ಸಿದ್ಧಾಂತಗಳು ನಮ್ಮ ವರದಿಗಾರಿಕೆಯಲ್ಲಿ ತುರುಕುವುದಿಲ್ಲ ಎಂಬ ಭರವಸೆಯೊಂದಿಗೆ

ನಿಮ್ಮದೇ,
ವರದಿಗಾರ

‘ವರದಿಗಾರ’ ನಿಮಗೆ ಆಪ್ತವಾಗಿದ್ದಲ್ಲಿ, ನಮ್ಮನ್ನು ಸಹಕರಿಸುವ ಮೂಲಕ ನಮ್ಮ ಬೆಳವಣಿಗೆಯಲ್ಲಿ ಭಾಗಿಯಾಗಿ :- https://www.instamojo.com/@varadigara/le7ca2761404a4b01a1e82c2748d8a181/

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group