
ಪಾಪ್ಯುಲರ್ ಫ್ರಂಟ್ ನಿಂದ ಪ್ರಕೃತಿ ವಿಕೋಪ ತುರ್ತು ಪರಿಹಾರ ಕಾರ್ಯಾಚರಣೆ
ಸಂತ್ರಸ್ತರ ನೆರವಿಗೆ ಸ್ಪಂದಿಸಲು ಸನ್ನದ್ಧರಾಗಿರುವಂತೆ ಕಾರ್ಯಕರ್ತರಿಗೆ ಸೂಚನೆ
ವರದಿಗಾರ (ಆ. 8): ರಾಜ್ಯದಲ್ಲಿ ಭಾರೀ ಗಾಳಿಮಳೆಗೆ ಅಪಾರ ಹಾನಿ ಸಂಭವಿಸಿದ್ದು ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದ್ದು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿಪತ್ತು ಪರಿಹಾರ ಕಾರ್ಯಾಚರಣೆ ತಂಡವು ಸಮರೋಪಾದಿಯಲ್ಲಿ ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿದೆ. ಗೋಕಾಕ್ ನ ಒಂಟಿಗಲ್ಲಿ, ಮುಜ್ಗರ್ ಗಲ್ಲಿ, ಮೂಗಿನ ಗಲ್ಲಿ, ಅಡಪಾಗಲ್ಲಿ, ಲಖಡ್ ಗಲ್ಲಿ ಮುಂತಾದ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಕಾರ್ಯೋನ್ಮುಖರಾಗಿದ್ದಾರೆ. ಅದೇ ರೀತಿ ಬೆಳಗಾವಿಯ ಗಾಂಧಿನಗರ, ನ್ಯೂಗಾಂಧಿನಗರ, ಅಸದ್ ಖಾನ್ ಸೊಸೈಟಿ ಮುಂತಾದ ನಗರ ಪ್ರದೇಶಗಳಲ್ಲಿ ಇದೇ ಪರಿಸ್ಥಿತಿ ಇದ್ದು ಪಾಪ್ಯುಲರ್ ಫ್ರಂಟ್ ನ ವಿಪತ್ತು ಪರಿಹಾರ ನಿರ್ವಹಣಾ ತಂಡವು ಸಂತ್ರಸ್ತರ ನೆರವಿಗೆ ಧಾವಿಸಿದೆ. ಇಂತಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ತುರ್ತಾಗಿ ಸರಕಾರವು ಸ್ಪಂದಿಸಬೇಕಾಗಿದ್ದು, ಯಾವುದೇ ಸರಕಾರಿ ಸಿದ್ಧತೆಗಳು ಈ ಪ್ರದೇಶಗಳಲ್ಲಿ ಇದುವರೆಗೆ ಕಂಡು ಬಂದಿಲ್ಲ. ರಾಜ್ಯ ಸರಕಾರವು ತನ್ನ ತುರ್ತು ಪರಿಹಾರ ಕಾರ್ಯಾಚರಣೆ ಪಡೆಯನ್ನು ಚುರುಕುಗೊಳಿಸುವಂತೆ ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಭಾರೀ ಗಾಳಿ ಮಳೆಗೆ ಭಾಗಶಃ ಹಾನಿಯುಂಟಾಗಿದ್ದು, ತಹಶೀಲ್ದಾರ್ ಮಟ್ಟದಲ್ಲಿ ಸ್ಪಂದನ ದೊರೆತಿದೆ. ಪರಿಣಿತ ತುರ್ತು ವಿಪತ್ತು ನಿರ್ವಹಣಾ ತಂಡವು ಕ್ಷೇತ್ರದಲ್ಲಿ ಸನ್ನದ್ಧತೆಯಲ್ಲಿ ಇರಬೇಕಾಗಿದೆ.ಪಾಪ್ಯುಲರ್ ಫ್ರಂಟ್ ನ ವಿಪತ್ತು ನಿರ್ವಹಣಾ ತಂಡವು ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಗಿಳಿದಿದ್ದು, ಸರಕಾರಿ ವ್ಯವಸ್ಥೆಯು ತುರ್ತು ಕಾರ್ಯಾಚರಣೆಗೆ ಇಳಿಯುವುದರಿಂದ ಹೆಚ್ಚಿನ ಅನಾಹುತವನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟಿದೆ. ಸರಕಾರದ ತುರ್ತುಪರಿಹಾರ ಕಾರ್ಯಪಡೆ ಮತ್ತು ಆಡಳಿತಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರವಿಗೆ ಧಾವಿಸುವಂತೆ ಪಾಪ್ಯುಲರ್ ಫ್ರಂಟ್ ವಿನಂತಿಸಿದೆ. ಸರಕಾರದ ವತಿಯಿಂದ ಅಪಾರ ಪರಿಹಾರದ ನಿರೀಕ್ಷೆಯಲ್ಲಿರುವ ಜನತೆಗೆ ಸೂಕ್ತ ಸಮಯದಲ್ಲಿ ಸ್ಪಂದಿಸುವಂತೆ ಪಾಪ್ಯುಲರ್ ಫ್ರಂಟ್ ರಾಜ್ಯ ಸರಕಾರವನ್ನು ಕೇಳಿಕೊಂಡಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಜನರಿಗೆ ನೆರವಿಗೆ ಸ್ಪಂದಿಸಲು ಸನ್ನದ್ಧರಾಗಿರುವಂತೆ ಪಾಪ್ಯುಲರ್ ಫ್ರಂಟ್ ತನ್ನ ಕಾರ್ಯಕರ್ತರಿಗೆ ಈಗಾಗಲೇ ಸೂಚಿಸಿದ್ದು, ಅದರಂತೆ ಪ್ರಕೃತಿ ವಿಕೋಪ ಸಂಭವಿಸಿದ ಕಡೆಗಳಲ್ಲಿ ಕಾರ್ಯಕರ್ತರು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
