ಅಭಿಪ್ರಾಯ

ಕಾಶ್ಮೀರದ ಭೂಮಿ ಕಸಿಯಬಹುದು, ಕಾಶ್ಮೀರಿಗಳ ಮನಸ್ಸು ಗೆಲ್ಲುವಿರಾ?

‘ಪ್ರತಿ ಬಾರಿ ದೇಶದಲ್ಲಿ ಆರ್ಥಿಕ ಕುಸಿತ ಉಂಟಾದಾಗಲೂ ಮೋದಿ ಸರ್ಕಾರಕ್ಕೆ ಕಾಶ್ಮೀರ, ಯುದ್ಧ ನೆನಪಾಗುತ್ತವೆ…’


ವರದಿಗಾರ (ಆ. 8):
ಆಗಸ್ಟ್ 5ರ ಮಧ್ಯಾಹ್ನ ಟಿವಿ ವಾಹಿನಿಯೊಂದರ ಕಚೇರಿಯಿಂದ ನನಗೆ ಕರೆ ಬಂತು. ಅಲ್ಲಿ ಸ್ಟುಡಿಯೋದಲ್ಲಿ ಚರ್ಚೆಯೊಂದರ ನೇರ ಪ್ರಸಾರ ನಡೆದಿತ್ತು. ಅದರಲ್ಲಿ ಸಂವಿಧಾನದ ಕಲಂ 370 ಮತ್ತು 35ಎ ರದ್ದತಿಯಾದ ಬಗ್ಗೆ ಚರ್ಚೆ ಸಾಗಿತ್ತು. ಒಂದೆರಡು ಗಂಟೆಯಾಗಿತ್ತಷ್ಟೇ ಕೇಂದ್ರದ ಗೃಹ ಸಚಿವ ಅಮಿತ್ ಶಾ ಸಂಸತ್ತಿನ ಸದನದಲ್ಲಿ ಈ ರದ್ದತಿಯನ್ನು ಘೋಷಿಸಿದ್ದರು. ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂವಿಧಾನದತ್ತವಾದ ಯಾವುದೇ ವಿಶೇಷ ಸ್ಥಾನಮಾನವಾಗಲೀ ವಿಶೇಷ ಅಧಿಕಾರವಾಗಲೀ ಇಲ್ಲವೆಂದು ಸಂಸತ್ತಿನಲ್ಲಿ ಘೋಷಣೆಯಾಗಿತ್ತು ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಮಸೂದೆಯ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು. ಆದರೆ ಇದಕ್ಕೆ ಕಾಶ್ಮೀರದ ವಿಧಾನಸಭೆಯ ಸಮ್ಮತಿ ಪಡೆದಿರಲಿಲ್ಲ. ಇವುಗಳ ಹಿನ್ನೆಲೆಯಲ್ಲಿ ಟಿವಿ ಸ್ಟುಡಿಯೋದಲ್ಲಿ ಚರ್ಚೆ ಮುಂದುವರಿದಿತ್ತು. ನನಗೆ ಇದ್ದಕ್ಕಿದ್ದಂತೆ ಬಂದ ಕರೆಯಲ್ಲಿ, “ನೇರ ಪ್ರಸಾರದಲ್ಲಿ ಕಾಶ್ಮೀರ ವಿಷಯದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳಿ”ರೆಂದು ಸೂಚಿಸಿ, ನಿರೂಪಕರ ಜೊತೆಗೆ ಸಂಪರ್ಕ ಕಲ್ಪಿಸಲಾಯಿತು.

ನಿರೂಪಕ ಸಂವಿಧಾನದ ವಿಧಿ 370 ಮತ್ತು 35ಎ ರದ್ದತಿಯ ಸಾಧಕ ಬಾಧಕಗಳೇನು ಎಂದು ನನ್ನೊಡನೆ ಚರ್ಚಿಸಲು ಶುರು ಮಾಡಿದರು.

ಆಗ ನಾ ಹೇಳಿದೆ, “ಇಲ್ಲಿ ನಾವು ಕುಳಿತು ಕಾಶ್ಮೀರದ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದೇವೆ. ಆದರೆ ಅಲ್ಲಿ ಕಾಶ್ಮೀರದ ಜನತೆಯ ಅಭಿಪ್ರಾಯವನ್ನೂ ಕೇಳದೆ ಸಂಸತ್ತಿನಲ್ಲಿ ದೇಶದ ಗೃಹ ಸಚಿವ ಏಕಾಏಕಿ ಒಂದು ವಿಶೇಷ ಶಾಸನದ ರದ್ದತಿಯ ಘೋಷಣೆ ಮಾಡುತ್ತಾರೆ… ಇದೆಂಥಾ ಪ್ರಜಾಪ್ರಭುತ್ವ? ಇದನ್ನು ನಾವು ವಿರೋಧಿಸುತ್ತೇವೆ.”

ಪುನಃ ಆ ಕಡೆಯಿಂದ “ಮೇಡಂ, ನೀವು ಆರ್ಟಿಕಲ್ 370 ರದ್ದತಿಯ ಪರವೋ ವಿರುದ್ಧವೋ?”

ಅದಕ್ಕೆ “ನಾವು ಅದರ ಪರವೋ ವಿರುದ್ಧವೋ ಎನ್ನುವುದಕ್ಕಿಂತ ಇದರ ಪ್ರಮುಖ ಫಲಾನುಭವಿಗಳಾಗಿರುವ ಕಾಶ್ಮೀರದ ಜನತೆ ಏನು ಹೇಳುತ್ತಾರೆ ಎಂಬುದು ಹೆಚ್ಚು ಮಹತ್ವದ್ದು. ನಾವಂತೂ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನ ವಿರೋಧಿಸುತ್ತೇವೆ” ಎಂದೆ ನಾನು.

ಮತ್ತೆ ನಿರೂಪಕ, “ಕೆಲವು ವಿಪಕ್ಷಗಳೂ ಕೂಡ ಇದನ್ನು ಸ್ವಾಗತಿಸುತ್ತಿವೆಯಲ್ಲಾ… ಇದಕ್ಕೆ ಏನು ಹೇಳ್ತೀರಿ?”

“ಅವರನ್ನೇ ಕರೆ ಮಾಡಿ ಕೇಳಿ, ಆದರೆ ನನಗಂತೂ ಆ ಪಕ್ಷಗಳು ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣ ಮಾಡುತ್ತಿವೆ ಎಂದು ಸ್ಪಷ್ಟವಾಗಿ ಅನಿಸುತ್ತಿದೆ” ಎಂದು ಉತ್ತರಿಸಿದೆ.

ಪುನಃ ನನಗೆ ಬಂದ ಪ್ರಶ್ನೆ, “ಹಾಗಾದರೆ ಸರ್ಕಾರ ಇಂತಹ ಕ್ರಮಕ್ಕೆ ಯಾಕೆ ಮುಂದಾಗಿದ್ದು ಎನಿಸುತ್ತದೆ ನಿಮಗೆ?”

“ಪ್ರತಿ ಬಾರಿ ದೇಶದಲ್ಲಿ ಆರ್ಥಿಕ ಕುಸಿತ ಉಂಟಾದಾಗಲೂ ಮೋದಿ ಸರ್ಕಾರಕ್ಕೆ ಕಾಶ್ಮೀರ, ಯುದ್ಧ ನೆನಪಾಗುತ್ತವೆ… ದೇಶದ ಜನರ ಆಲೋಚನೆಯನ್ನು ದಿಕ್ಕು ತಪ್ಪಿಸಲೆಂದೇ ಇಂತಹ ಕೆಟ್ಟ ರಾಜಕಾರಣಕ್ಕೆ ಮುಂದಾಗುತ್ತದೆ ಮೋದಿ ಸರ್ಕಾರ. ಕಾಶ್ಮೀರದ ಜನರನ್ನು ವಿಶ್ವಾಸಕ್ಕೆ ಪಡೆಯದೆ ಅವರಿಗೆ ಸಂಬಂಧಪಟ್ಟ ಸಾಂವಿಧಾನಿಕ ಅಧಿಕಾರವನ್ನು, ಶಾಸನವನ್ನು ರದ್ದುಗೊಳಿಸುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ” ಎಂದು ಚಿಕ್ಕದಾಗಿ ಉತ್ತರ ಕೊಟ್ಟೆ….

ಆಗಷ್ಟೇ ಸಂವಿಧಾನದ ಆರ್ಟಿಕಲ್ 370 ರದ್ದತಿಯನ್ನು ಘೋಷಣೆ ಮಾಡಲಾಗಿತ್ತು. ಟಿವಿ ವಾಹಿನಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ಇಷ್ಟೆಲ್ಲಾ ಮಾತನಾಡಲು ಅವಕಾಶ ಸಿಕ್ಕಿದ್ದೇ ಹೆಚ್ಚು… ಅದೂ ಮಧ್ಯೆಮಧ್ಯೆ ಕೂಗಾಟ ಇಲ್ಲದೆ! ಹಾಗೂ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದಾದ ವಾತಾವರಣ ಇರುವುದೇ ಈ ದಿನಮಾನಗಳಲ್ಲಿ ತೀರಾ ಅಪರೂಪ ಅಲ್ಲವೇ…

ಸರ್ವಾಧಿಕಾರಿ ನರೇಂದ್ರ ಮೋದಿ

ಸಂವಿಧಾನದ ಕಲಂ 370 ರದ್ದತಿಯ ವಿಚಾರದಲ್ಲಿ ಕೆಲವು ಮಹತ್ವದ ಪ್ರಶ್ನೆಗಳು ಉದ್ಭವಿಸುತ್ತವೆ. ಮೊದಲನೆಯದ್ದು, ಈ ವಿಧಿಯ ರದ್ದತಿ ಬೇಕೋ ಬೇಡವೋ ಎಂದು ನೈತಿಕವಾಗಿ, ಕಾನೂನಾತ್ಮಕವಾಗಿ ಮತ್ತು ಶಾಸನಾತ್ಮಕವಾಗಿ ತೀರ್ಮಾನಿಸಬೇಕಿರುವುದು ಅದು ಜಾರಿಯಾಗಿದ್ದ ರಾಜ್ಯದ ಜನತೆ, ಅಂದರೆ ಜಮ್ಮು ಮತ್ತು ಕಾಶ್ಮೀರದ ಜನಸಮೂಹ. ಈಗ ಕಾಶ್ಮೀರ ಕಣಿವೆಯ ಜನರನ್ನು ಕತ್ತಲಲ್ಲಿರಿಸಿ, ಅಲ್ಲಿನ ರಾಜಕೀಯ ಮುಖಂಡರನ್ನು ಬಂಧಿಸಿ, ಆ ಪ್ರದೇಶಕ್ಕೆ ಟಿವಿ, ಪತ್ರಿಕೆ, ಅಂತರ್ಜಾಲ, ಸಾಮಾಜಿಕ ಮಾಧ್ಯಮಗಳ ಸಂಪರ್ಕವನ್ನೂ ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಕಾಶ್ಮೀರ ಮಹಾರಾಜನಿಂದ ಬಿಡುಗಡೆಗೊಂಡು ಭಾರತಕ್ಕೆ ವಿಲೀನವಾಗುವಾಗ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ, ಸ್ವಾಯತ್ತತೆ ಮತ್ತು ಅಧಿಕಾರ ನೀಡುವುದಾಗಿ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಮುರಿಯುವ ಏಕಪಕ್ಷೀಯ ಹೇರಿಕೆ ಸರ್ವಾಧಿಕಾರಿ ನಡೆ ಅಲ್ಲವೇ?

ಸಂವಿಧಾನಬಾಹಿರ, ಪ್ರಜಾತಂತ್ರವಿರೋಧಿ ನಡೆ…

ಸಂವಿಧಾನದ ಕಲಂ 370ಕ್ಕೆ ಯಾವುದೇ ಬದಲಾವಣೆ ತರುವುದಿದ್ದರೂ (ರದ್ದತಿಯೂ ಸೇರಿದಂತೆ) ಕಾಶ್ಮೀರದ ವಿಧಾನಸಭೆಯ ಸಮ್ಮತಿ ಅವಶ್ಯ ಎಂಬ ನಿಯಮವಿದೆ. ಅದನ್ನು ಮೀರಿ ವಿಧಾನಸಭೆ ವಿಸರ್ಜನೆಯಾದ ಜಮ್ಮು ಮತ್ತು ಕಾಶ್ಮೀರದ ಜನತೆಯ ಅಭಿಪ್ರಾಯವನ್ನೇ ಗಣನೆಗೆ ತೆಗೆದುಕೊಳ್ಳದೆ ಅವರ ವಿರುದ್ಧ ಇಂತಹ ದಾಳಿ ನಡೆಸುವುದು ಅನ್ಯಾಯ ಅಲ್ಲವೇ? ಮುಂದಿನ ದಿನಗಳಲ್ಲಿ ನರೇಂದ್ರ ಮೋದಿ ಸರ್ಕಾರವು ದೇಶದ ಯಾವುದೇ ರಾಜ್ಯದಲ್ಲೂ ತನ್ನ ಅಜೆಂಡಾ ಸಾಧಿಸಲು ತನ್ನ ಅನುಕೂಲಕ್ಕೆ ತಕ್ಕಂತೆ ಇಂತಹ ಅಕ್ರಮಗಳು, ಅನ್ಯಾಯಗಳನ್ನು ನಡೆಸದಿರುವುದೆಂದು ನಂಬುವುದು ಹೇಗೆ?

ಕಾಶ್ಮೀರದ ಭೂಮಿ ಕಸಿದಿರಿ… ಕಾಶ್ಮೀರಿಗಳ ಮನಸ್ಸು ಗೆದ್ದೀರಾ??

ಈಗ ಕಾಶ್ಮೀರದಲ್ಲಿ ಯಾರು ಬೇಕಾದರೂ ಭೂಮಿ ಕೊಳ್ಳಬಹುದು ಎಂದು ಕುಣಿದಾಡುತ್ತಿರುವ ಕೆಲವು ಜನಸಾಮಾನ್ಯರು ತಮ್ಮ ರಾಜ್ಯದಲ್ಲೇ, ಊರುಮನೆಗಳಲ್ಲೇ ತಮಗೆ ಬದುಕು ಸಾಗಿಸಲು ಒಂದಿಂಚು ಭೂಮಿ ಸಿಗಲಿದೆಯೇನು ಎಂಬ ಪ್ರಶ್ನೆ ಹಾಕಿಕೊಳ್ಳಲಿ… ಆನಂತರ ಕಾಶ್ಮೀರದ ಭೂಮಿಯನ್ನು ಖರೀದಿಸುವ ಬಗ್ಗೆ ಹಿಮಾಲಯದಷ್ಟೇ ಎತ್ತರದ ಕನಸು ಕಾಣಬಹುದು! ಈಗ ಏನಿದ್ದರೂ ಕಾಶ್ಮೀರದಲ್ಲಿ ನೈಸರ್ಗಿಕವಾಗಿ ಸಮೃದ್ಧವಾಗಿರುವ ಪ್ರದೇಶಗಳನ್ನು ಕಾರ್ಪೊರೇಟ್ ಸುಲಿಗೆಗೆ ತೆರೆಯುವುದೇ ಮೋದಿ ಸರ್ಕಾರ ಸಂವಿಧಾನದ ಕಲಂ 370 ರದ್ದು ಮಾಡಿದ್ದರ ಹಿಂದಿನ ಮೂಲ ಉದ್ದೇಶ. ದೇಶದ ಆರ್ಥಿಕತೆ ಕುಸಿದು ಪಾತಾಳಕ್ಕೆ ಇಳಿದಿದೆ. ಇದನ್ನು ಮರೆಮಾಚಿ ಕಾಶ್ಮೀರಕ್ಕೆ ರಾಷ್ಟ್ರಪ್ರೇಮ, ಅಭಿವೃದ್ಧಿ, ಎಂದು ಏನೇನೋ ಬಣ್ಣ ಹಚ್ಚಲಾಗುತ್ತಿದೆ. ಕಾಶ್ಮೀರವನ್ನು ಬಲವಂತವಾಗಿ ಭಾರತಕ್ಕೆ ಸೇರಿಸಿಕೊಳ್ಳಲಾಗಿದೆ, ಆದರೆ ಕಾಶ್ಮೀರಿಗಳು ತಮ್ಮನ್ನು ತಾವು ಭಾರತೀಯರು ಎಂದು ಹೆಮ್ಮೆಯಿಂದ ಕರೆದುಕೊಳ್ಳುವಂತೆ ನಮ್ಮ ಸರ್ಕಾರ ನಡೆದುಕೊಳ್ಳಬೇಕಲ್ಲಾ… ಮತಧರ್ಮದ ಆಧಾರದಲ್ಲಿ ದ್ವೇಷದ ರಾಜಕಾರಣವನ್ನೇ ಮಾಡಿ ಜನರ ಜೀವ ತೆಗೆಯುವ ಮೋದಿ ಸರ್ಕಾರಕ್ಕೆ ಇದೆಲ್ಲಾ ಅರ್ಥವಾಗುವುದಾದರೂ ಹೇಗೆ?

  • ಜ್ಯೋತಿ ಎ.
'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group