ಅಂಕಣ

ಟಿಪ್ಪುಜಯಂತಿ ರದ್ದು: ಪೂರ್ಣಯ್ಯ, ಮೀರ್ ಸಾಧಿಕ್ ತಪ್ಪಿಸಿಕೊಳ್ಳದಿರಲಿ

‘ರಗಳೆ’ ಅಂಕಣದಲ್ಲಿ ಫಯಾಝ್ ಎನ್.

ವರದಿಗಾರ (ಜು.31): 1799ರಲ್ಲಿ ಟಿಪ್ಪುಸುಲ್ತಾನ್ ಬ್ರಿಟಿಷ್ ಸೈನ್ಯದ ವಿರುದ್ಧ ವೀರಾವೇಷದಿಂದ ಹೋರಾಡಿ ರಣರಂಗದಲ್ಲಿ ಹುತಾತ್ಮರಾಗುತ್ತಾರೆ. ಬ್ರಿಟಿಷರು ಟಿಪ್ಪುವಿನ ಸದನದೊಳಗೆ ನುಗ್ಗಲು ಟಿಪ್ಪುವಿನ ಜೊತೆಗಿದ್ದ ‘ಅತೃಪ್ತ’ ಮಂತ್ರಿ, ಸಹವರ್ತಿಗಳೇ ಕಾರಣರು. ಟಿಪ್ಪು ಅವರನ್ನು ಅಪಾರವಾಗಿ ನಂಬಿದ್ದರು. ವಿಶ್ವಾಸದ್ರೋಹವೆಸಗಿ ಟಿಪ್ಪುವಿನ ಸಾಮ್ರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದ ಪೂರ್ಣಯ್ಯ ಮತ್ತು ಮೀರ್ ಸಾಧಿಕ್ ಅದಕ್ಕಾಗಿ ಬ್ರಿಟಿಷರಿಂದ ಅಪಾರ ಪ್ರಮಾಣದ ಆಮಿಷವನ್ನೂ ಪಡೆದಿದ್ದರು. ಚರಿತ್ರೆ ಪುನರಾವರ್ತನೆಯಾಗುತ್ತಿದೆ… ಇಂದು ಮುಸ್ಲಿಮ್ ಸಮುದಾಯವು ಟಿಪ್ಪುವಿನ ಪರಿಸ್ಥಿತಿಯಲ್ಲಿದೆ. ಸಮುದಾಯವು ನಂಬಿಕೊಂಡು ಬಂದಿದ್ದ ಜಾತ್ಯತೀತ ಪಕ್ಷಗಳು ಜಾತ್ಯತೀತ ವಿರೋಧಿ ಪಕ್ಷಗಳಿಗೆ ಆಡಳಿತವನ್ನು ಒಪ್ಪಿಸಿದೆ. ಮರುಕ್ಷಣದಲ್ಲೇ ಟಿಪ್ಪುಜಯಂತಿ ರದ್ದುಗೊಂಡಿದೆ.

ಕಾಂಗ್ರೆಸ್, ಜೆಡಿಎಸ್ ಯುಕ್ತ ಬಿಜೆಪಿ ಅಧಿಕಾರಕ್ಕೇರಿದ ಮರುಕ್ಷಣವೇ ರಾಜ್ಯದಲ್ಲಿ ಟಿಪ್ಪುಜಯಂತಿ ಆಚರಣೆಯನ್ನು ರದ್ದುಗೊಳಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೇರಿಸಿದ ಕಾಂಗ್ರೆಸ್, ಜೆಡಿಎಸ್ ಮೇಲಿನ ಆಕ್ರೋಶವನ್ನು ತಣ್ಣಗಾಗಿಸಲು ಟಿಪ್ಪುಜಯಂತಿ ವಿಚಾರವನ್ನು ಬಳಸಿಕೊಳ್ಳುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ. ಯಡಿಯೂರಪ್ಪ ಅಧಿಕಾರಕ್ಕೇರಲು ಕಾರಣರಾದ ಪೂರ್ಣಯ್ಯ, ಮೀರ್ ಸಾಧಿಕ್ ರನ್ನು ಗುರುತಿಸದೇ ಹೋದರೆ ಟಿಪ್ಪು ಎದುರಿಸಿದ ಅದೇ ದುರಂತವನ್ನು ಮುಸ್ಲಿಮ್ ಸಮುದಾಯವು ಎದುರಿಸಬೇಕಾದೀತು. ಮಾಧ್ಯಮಗಳು ಪೂರ್ವಯೋಜಿತವಾಗಿ ಟಿಪ್ಪುಜಯಂತಿ ವಿಚಾರವನ್ನು ಭಾರತೀಯತೆಯ ಹಿನ್ನೆಲೆಯಿಂದ ಚರ್ಚಿಸದೆ ಕೋಮುಧ್ರುವೀಕರಣದ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ಚರ್ಚೆಗಳು ಬಿಜೆಪಿ ಪ್ರಾಯೋಜಿತವಾಗುತ್ತಿವೆ.

ವಾಸ್ತವದಲ್ಲಿ ಟಿಪ್ಪುಜಯಂತಿ ಆಚರಿಸುವುದರಿಂದ ನಿರ್ದಿಷ್ಟವಾಗಿ ಮುಸ್ಲಿಮ್ ಸಮುದಾಯ ಗಳಿಸಿಕೊಳ್ಳಲಿಕ್ಕಿರುವುದೋ ಅಥವಾ ಕಳೆದುಕೊಳ್ಳಲಿಕ್ಕಿರುವುದೋ ಏನು ಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ಟಿಪ್ಪುವಿನ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರ ನಿರ್ಮಾಣದ ಇತಿಹಾಸವು ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವಂಥದ್ದು. ಅದು ನಮ್ಮ ಕನ್ನಡನಾಡಿಗೆ ಹಿರಿಮೆಯಾಗಿತ್ತು. ಟಿಪ್ಪುಸುಲ್ತಾನ್ ಆಡಳಿತ ಕ್ರಾಂತಿ, ಭೂಸುಧಾರಣೆ, ಸಾಮಾಜಿಕ ನ್ಯಾಯ, ಸರ್ವಧರ್ಮ ಸಹಿಷ್ಣುತೆ, ದೇಶಪ್ರೇಮ ಇವೆಲ್ಲವೂ ಸಂಘಪರಿವಾರಕ್ಕೆ ಅಪಥ್ಯವಾದರೂ ವಾಸ್ತವ. ಟಿಪ್ಪುವಿನ ಇತಿಹಾಸವನ್ನು ತಿರುಚಿ ದೇಶದ್ರೋಹಿ ಎಂಬಂತೆ ಸಂಘಪರಿವಾರ ಚಿತ್ರಿಸುತ್ತಿದ್ದ ಹೊತ್ತಿನಲ್ಲೂ ಪ್ರಗತಿಪರರು, ಇತಿಹಾಸಕಾರರು, ಕೆಲವು ಟಿಪ್ಪು ಹೆಸರಿನ ಸಂಘಸಂಸ್ಥೆಗಳು ಟಿಪ್ಪುಸುಲ್ತಾನರ ಕುರಿತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದವು. ಅಲ್ಲೆಲ್ಲೂ ಸರಕಾರದ ವತಿಯಿಂದ ಪ್ರತ್ಯೇಕ ಜಯಂತಿ ಘೋಷಣೆಯಾಗಿರಲಿಲ್ಲ. ಅವರದ್ದೇ ಆದ ರೀತಿಯಲ್ಲಿ ಟಿಪ್ಪುವಿನ ಜನನ ಮತ್ತು ಹುತಾತ್ಮ ದಿನವನ್ನು ಸ್ಮರಿಸುತ್ತಿದ್ದರು. ಅಷ್ಟೇ ಯಾಕೆ ಟಿಪ್ಪು ಜಯಂತಿ ಚಾಲ್ತಿಗೆ ಬರುವ ಮುನ್ನ ಸ್ವತಹ ಇದೇ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮುಂತಾದ ಬಿಜೆಪಿ ನಾಯಕರೂ ಟಿಪ್ಪು ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು. ಆದರೆ ಇಲ್ಲೆಲ್ಲೂ ಟಿಪ್ಪು ಸಂಘಟನೆಗಳಾಗಲೀ, ಮುಸ್ಲಿಮ್ ಸಮುದಾಯವಾಗಲೀ ಸರಕಾರಿ ಟಿಪ್ಪುಜಯಂತಿಗಾಗಿ ಮನವಿ ಸಲ್ಲಿಸಿದ್ದಿಲ್ಲ. ಆದರೆ ಅವರ ಇತಿಹಾಸವನ್ನು ಮುಂದಿನ ತಲೆಮಾರಿಗೂ ತಲುಪಿಸುವುದಕ್ಕಾಗಿ ಟಿಪ್ಪು ವಿಶ್ವವಿದ್ಯಾನಿಲಯದ ಬೇಡಿಕೆಯನ್ನಂತೂ ಇಟ್ಟದ್ದು ನಿಜ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿದ್ದು ನಿಜ. ಆದರೆ ಕಾಂಗ್ರೆಸ್ ಸರಕಾರ ಸಮುದಾಯಕ್ಕೆ ನಯಾ ಪೈಸೆಯ ಜರೂರತ್ತಿಲ್ಲದ ಟಿಪ್ಪುಜಯಂತಿಯನ್ನು ಚಾಲ್ತಿಗೆ ತಂದಿತ್ತು. ಜಯಂತಿಯ ಜವಾಬ್ಧಾರಿಯನ್ನು ಅಲ್ಪಸಂಖ್ಯಾತ ಇಲಾಖೆಗೆ ವಹಿಸಿದಾಗಲೇ ಟಿಪ್ಪುವಿನ ವರ್ಚಸ್ಸನ್ನು ಒಂದು ಸಮುದಾಯಕ್ಕೆ ಸಂಕುಚಿತಗೊಳಿಸುವ ಪೂರ್ಣಯ್ಯ, ಮೀರ್ ಸಾಧಿಕ್ ರ ತಂತ್ರಗಾರಿಕೆಯೂ ಟಿಪ್ಪುಜಯಂತಿಯ ಮರೆಯಲ್ಲಿತ್ತು. ಟಿಪ್ಪುಜಯಂತಿ ಎಂಬ ಸರಕಾರದ ಆದೇಶದ ವಿರುದ್ಧ ಕಾನೂನುಬಾಹಿರವಾಗಿ ಬೀದಿಗಿಳಿದ ಸಂಘಪರಿವಾರವನ್ನು ಎದುರಿಸುವ ಟಿಪ್ಪುವಿನ ಶೌರ್ಯವು ಕಾಂಗ್ರೆಸ್ ಪಾಳಯದಲ್ಲಿ ಇಲ್ಲ ಎಂಬುದು ಆರಂಭದಲ್ಲೇ ಸಾಬೀತಾಗಿತ್ತು. ಬಿಗುಭದ್ರತೆ, ಸಾರ್ವಜನಿಕರು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳದಂತೆ ನಿರ್ಬಂಧ, ಜಿಲ್ಲಾಡಳಿತದ ವತಿಯಿಂದ ನಡೆಯುವ ಕಾರ್ಯಕ್ರಮಕ್ಕೆ ಸ್ವತಹ ಕಾಂಗ್ರೆಸ್ ಶಾಸಕ, ಸಂಸದರೇ ಗೈರು ಹಾಜರಾಗುವುದು ಇವೆಲ್ಲವೂ ಮೀರ್ ಸಾಧಿಕ್ ನ ನಡೆಗಳಾಗಿದ್ದವು.

ಟಿಪ್ಪುಜಯಂತಿ ಎಂಬುದನ್ನು ಮುಸ್ಲಿಮ್ ಸಮುದಾಯಕ್ಕೆ ಸರಕಾರ ಕೊಟ್ಟ ಪುಣ್ಯದ ಕೊಡುಗೆ ಎಂಬ ಭಾವನೆಯನ್ನು ಮುಸ್ಲಿಮರೆಡೆಯಲ್ಲಿ ಪ್ರಚಾರ ಮಾಡುವುದರ ಹಿಂದೆ ಶತಮಾನದ ರಾಜಕೀಯ ವಂಚನೆಯಿದೆ. ಮುಸ್ಲಿಮ್ ಸಮುದಾಯದ ಅಭಿವೃದ್ಧಿಗಾಗಿ ಸರಕಾರವೇ ನಿಯೋಜಿಸಿದ ರಂಗನಾಥಮಿಶ್ರಾ ಆಯೋಗ, ಸಾಚಾರ್ ಆಯೋಗ ಮುಂತಾದ ವರದಿಗಳ ಅನುಷ್ಠಾನಕ್ಕೆ ಬೇಕಾದ ಯೋಜನೆಗಳನ್ನಾದರೂ ಜಾರಿಗೆ ತರುವ ಎಲ್ಲ ಅವಕಾಶಗಳು ಕಾಂಗ್ರೆಸ್ ಪಕ್ಷಕ್ಕಿತ್ತು. ಈ ಬಾರಿ ಮೈತ್ರಿ ಸರಕಾರ ಪ್ರಕಟಿಸಿದ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಅನುದಾನವನ್ನು ಕಡಿತಗೊಳಿಸಲಾಗಿತ್ತು. ಈ ಎಲ್ಲ ಅಂಶಗಳನ್ನು ಬದಿಗಿಟ್ಟು ಸ್ವಾತಂತ್ರ್ಯ ಹೋರಾಟಗಾರ ಟಿಪ್ಪುವನ್ನು ಓಲೈಸಿ ಮುಸ್ಲಿಮ್ ಸಮುದಾಯದ ಐಕೋನ್ ಆಗಿ ಬಿಂಬಿಸಿ ಅದರಲ್ಲೇ ಮುಸ್ಲಿಮ್ ಸಮುದಾಯವು ಧನ್ಯರಾಗುವಂತೆ ಮಾಡುವಲ್ಲಿ ಒಂದು ಹಂತದವರೆಗೆ ಕಾಂಗ್ರೆಸ್ ಪಕ್ಷವು ಯಶಸ್ವಿಯಾಗಿತ್ತು. ಆದರೆ ಯಾವಾಗ ಟಿಪ್ಪುಜಯಂತಿಯನ್ನು ಸರಕಾರವು ಕಾಟಾಚಾರಕ್ಕೆ ಎಂಬಂತೆ ಆಚರಿಸಲು ತೊಡಗಿತೋ ಅದು ಸಂಘಪರಿವಾರಕ್ಕೆ ಟಿಪ್ಪುವನ್ನು ಎದುರಿಸಲು ಇನ್ನಷ್ಟು ಹಾದಿ ಸುಗಮಗೊಳಿಸಿತು. ಈಗ ನಡೆದಿರುವುದು ಅದೇ. ಯಡಿಯೂರಪ್ಪನವರಿಗೆ ವೈಯಕ್ತಿಕವಾಗಿ ಟಿಪ್ಪುವಿನಿಂದ ಯಾವುದೇ ತೊಂದರೆ ಇಲ್ಲ. ಆದರೆ ಕೋಮುಧ್ರುವೀಕರಣದ ರಾಜಕೀಯ ನಡೆಸಲು ಟಿಪ್ಪುಸುಲ್ತಾನ್ ರ ಅಗತ್ಯವಿದೆ. ಇನ್ನು ಬರುವ ಆರು ತಿಂಗಳೊಳಗೆ ಸುಮಾರು 14 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಕೋಮುಧ್ರುವೀಕರಣದ ಮೂಲಕ ಮತ ಗಳಿಸಲು ಯಡಿಯೂರಪ್ಪ ಮುನ್ನುಡಿ ಬರೆದಿದ್ದಾರೆ. ಅವರ ನಡೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೂ ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವ ಜರೂರತ್ತಿದೆ. ಇವೆರಡನ್ನು ಅವಲೋಕಿಸಿ ಸಮಯೋಚಿತ ತೀರ್ಮಾನ ತೆಗೆದುಕೊಳ್ಳಬೇಕಾದದ್ದು ಪ್ರಜ್ಞಾವಂತ ನಾಗರಿಕನ ಕರ್ತವ್ಯ.

1799ರಲ್ಲಿ ಟಿಪ್ಪುಸುಲ್ತಾನ್ ಬ್ರಿಟಿಷ್ ಸೈನ್ಯದ ವಿರುದ್ಧ ವೀರಾವೇಷದಿಂದ ಹೋರಾಡಿ ರಣರಂಗದಲ್ಲಿ ಹುತಾತ್ಮರಾಗುತ್ತಾರೆ. ಬ್ರಿಟಿಷರು ಟಿಪ್ಪುವಿನ ಸದನದೊಳಗೆ ನುಗ್ಗಲು ಟಿಪ್ಪುವಿನ ಜೊತೆಗಿದ್ದ ‘ಅತೃಪ್ತ’ ಮಂತ್ರಿ, ಸಹವರ್ತಿಗಳೇ ಕಾರಣರು. ಟಿಪ್ಪು ಅವರನ್ನು ಅಪಾರವಾಗಿ ನಂಬಿದ್ದರು. ವಿಶ್ವಾಸದ್ರೋಹವೆಸಗಿ ಟಿಪ್ಪುವಿನ ಸಾಮ್ರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದ ಪೂರ್ಣಯ್ಯ ಮತ್ತು ಮೀರ್ ಸಾಧಿಕ್ ಅದಕ್ಕಾಗಿ ಬ್ರಿಟಿಷರಿಂದ ಅಪಾರ ಪ್ರಮಾಣದ ಆಮಿಷವನ್ನೂ ಪಡೆದಿದ್ದರು. ಚರಿತ್ರೆ ಪುನರಾವರ್ತನೆಯಾಗುತ್ತಿದೆ… ಇಂದು ಮುಸ್ಲಿಮ್ ಸಮುದಾಯವು ಟಿಪ್ಪುವಿನ ಪರಿಸ್ಥಿತಿಯಲ್ಲಿದೆ. ಸಮುದಾಯವು ನಂಬಿಕೊಂಡು ಬಂದಿದ್ದ ಜಾತ್ಯತೀತ ಪಕ್ಷಗಳು ಜಾತ್ಯತೀತ ವಿರೋಧಿ ಪಕ್ಷಗಳಿಗೆ ಆಡಳಿತವನ್ನು ಒಪ್ಪಿಸಿದೆ. ಮರುಕ್ಷಣದಲ್ಲೇ ಟಿಪ್ಪುಜಯಂತಿ ರದ್ದುಗೊಂಡಿದೆ. ಪೂರ್ಣಯ್ಯ, ಮೀರ್ ಸಾಧಿಕ್ ರ ಮೋಸ, ವಂಚನೆಯ ಅರಿವು ಟಿಪ್ಪುಸುಲ್ತಾನ್ ಗೆ ಮೊದಲೇ ಇದ್ದಿದ್ದರೆ ಖಂಡಿತವಾಗಿಯೂ ಟಿಪ್ಪು ತನ್ನ ಸ್ವಂತ ಬಲದಿಂದಲೇ ಬ್ರಿಟಿಷರನ್ನು ದೇಶದಿಂದ ಒದ್ದೋಡಿಸುತ್ತಿದ್ದರು. ಸದ್ಯಕ್ಕೆ ನಮಗೆ ಪೂರ್ಣಯ್ಯ, ಮೀರ್ ಸಾಧಿಕ್ ರ ಅರಿವಾಗಿದೆ. ನಮ್ಮ ರಾಜಕೀಯ ಸಬಲೀಕರಣದ ಗುತ್ತಿಗೆಯನ್ನು ಇನ್ಯಾರಿಗೋ ವಹಿಸದೆ ಪರ್ಯಾಯ ರಾಜಕೀಯಕ್ಕೆ ಮುನ್ನುಡಿ ಬರೆಯಲು ಇದು ಸಕಾಲ. ಟಿಪ್ಪು ಜಯಂತಿ ಎಂಬುದು ಒಂದು ದಿನದ ಆಚರಣೆಯಲ್ಲ. ಅದು ಒಂದು ಇತಿಹಾಸ. ಆ ಇತಿಹಾಸವನ್ನು ಚೆನ್ನಾಗಿ ಅರಿಯದವರು ಇತಿಹಾಸ ನಿರ್ಮಿಸಲಾರರು.

ಯಡಿಯೂರಪ್ಪ ಟಿಪ್ಪುಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿರುವುದು ಸಂಘದ ಅಜೆಂಡಾದ ಭಾಗ. ಅದರಲ್ಲಿ ವಿಶೇಷವೇನೂ ಇಲ್ಲ. ಗೋಡ್ಸೆಯಲ್ಲಿ ದೇಶಭಕ್ತಿಯನ್ನು ಕಾಣುವ ಸಂಘಪರಿವಾರಕ್ಕೆ ಗಾಂಧೀಜಿ ಯಾವತ್ತೂ ಸ್ವಾತಂತ್ರ್ಯ ಹೋರಾಟಗಾರನೆಂದು ಒಪ್ಪಿಕೊಂಡಿಲ್ಲ. ಇಂಥವರಿಂದ ಟಿಪ್ಪುಸುಲ್ತಾನ್ ರ ಬಗ್ಗೆ ಅಪಪ್ರಚಾರ, ಅವಹೇಳನ, ರದ್ದತಿಯನ್ನಲ್ಲದೆ ಬೇರೆ ಏನನ್ನು ನಿರೀಕ್ಷಿಸಬಹುದು? ಇತ್ತ ರಾಜ್ಯ ರಾಜಕೀಯದಲ್ಲಿ ಟಿಪ್ಪುಜಯಂತಿ ಮಾತ್ರ ರದ್ದುಗೊಂಡಿರುವುದು ದೊಡ್ಡ ಸುದ್ದಿಯಾಗಿದೆ… ಈ ಸುದ್ದಿಯ ಗದ್ದಲದ ನಡುವೆ ಕೇಂದ್ರದ ಮೋದಿ ಸರಕಾರ ಮಂಡಿಸಿರುವ ತ್ರಿವಳಿ ತಲಾಕ್ ಮಸೂದೆಯು ರಾಜ್ಯಸಭೆಯಲ್ಲಿ ಮಂಡನೆಯಾಗಿರುವುದನ್ನು ಮರೆಯಬಾರದು. ಬಹುಮತವಿಲ್ಲದಿದ್ದರೂ ಅಲ್ಲಿ ಬಿಜೆಪಿ ಹೆಚ್ಚು ಮತಗಳೊಂದಿಗೆ ತನ್ನ ಮಸೂದೆಯನ್ನು ಪಾಸು ಮಾಡಿಸಿಕೊಳ್ಳುತ್ತದೆ. ಪಕ್ಷದ ಕಚೇರಿಯಲ್ಲಿ ಟಿಪ್ಪುಜಯಂತಿ ಆಚರಿಸುವುದರಿಂದ ಮುಸ್ಲಿಮ್ ಸಮುದಾಯದ ಘನತೆ, ಭದ್ರತೆ, ಸಾಮಾಜಿಕ ನ್ಯಾಯ ಖಾತರಿಯಾಗುವುದಿಲ್ಲ. ಫ್ಯಾಷಿಷ್ಟ್ ಅಜೆಂಡಾಗಳು ಕಾನೂನು ರೂಪದಲ್ಲಿ ಜಾರಿಗೆ ಬರುವಾಗ ಜಾತ್ಯತೀತ ಪಕ್ಷಗಳು ಉಪಾಯವಾಗಿ ಜಾರಿಕೊಳ್ಳುತ್ತಿವೆ. ಕಲಾಪ ಬಹಿಷ್ಕರಿಸಿ ಮತದಾನ ಪ್ರಕ್ರಿಯೆಯಿಂದ ಹೊರನಡೆಯುತ್ತಿವೆ. ಪ್ರಸಕ್ತ ರಾಜಕೀಯದಲ್ಲಿ ಇವೆಲ್ಲವೂ ಪೂರ್ಣಯ್ಯ ಮತ್ತು ಮೀರ್ ಸಾಧಿಕ್ ರ ತಂತ್ರಗಳಾಗಿವೆ. ಇವರ ಮೇಲೆ ನಿಗಾ ಇರಲಿ. ಪ್ರಜ್ಞಾವಂತಿಕೆ ಇರಲಿ. ಮುಂದಿನ ದಿನಗಳಲ್ಲಿ ಇವರು ನಮ್ಮ ಕೈಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳೋಣ…

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group