
‘ಇದು ದೇಶಕ್ಕೆ ಮಾಡಿರುವ ಅವಮಾನ’: ಸಿದ್ದರಾಮಯ್ಯ
‘ಇನ್ನು ಮುಂದೆ ಅದ್ದೂರಿಯಾಗಿ ಆಚರಿಸುತ್ತೇವೆ, ಯಾರಿಂದಲೂ ತಡೆಯಲು ಸಾಧ್ಯವಿಲ್ಲ’: ಝಮೀರ್ ಅಹ್ಮದ್
ವರದಿಗಾರ,ಜು.30: ಸಾಮಾಜಿಕ ನ್ಯಾಯದ ಅರಸ, ಭೂ ಸುಧಾರಣೆಯ ಹರಿಕಾರ, ಮೈಸೂರ ಹುಲಿ ಟಿಪ್ಪು ಸುಲ್ತಾನ್ ರ ‘ಟಿಪ್ಪು ಜಯಂತಿ’ಯನ್ನು ಕರ್ನಾಟಕ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ ಕೈ ಬಿಟ್ಟಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ಆಚರಿಸುತ್ತಿರುವ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ರದ್ದುಗೊಳಿಸಿದೆ.
ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂದು ಅಧಿಕೃತ ಇಲಾಖೆ ಆದೇಶ ಹೊರಡಿಸಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಟಿಪ್ಪು ಜಯಂತಿಯನ್ನು ರದ್ದುಗೊಳಿಸಲು ತೀರ್ಮಾನಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಿಜೆಪಿಯು ದುರುದ್ದೇಶದಿಂದ ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ರ ಜಯಂತಿಯನ್ನು ಕೈ ಬಿಟ್ಟಿದೆ. ದೇಶಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದ ಅವರ ಜಯಂತಿಯನ್ನು ರದ್ದುಗೊಳಿಸಿರುವುದು ದೇಶಕ್ಕೆ ಮಾಡಿರುವ ಅವಮಾನ’ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ, ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ‘ಯಡಿಯೂರಪ್ಪ ಅಧಿಕಾರಕ್ಕೇರಿ 3 ದಿನಗಳಷ್ಟೇ ಆಗಿದೆ. ಆದರೆ ಒಂದು ನಿರ್ಧಾರವನ್ನು ತೆಗೆಯಬೇಕಾದರೆ ಕ್ಯಾಬಿನೆಟ್ ಸಭೆಯನ್ನು ಕರೆದು ಮಾಡಬೇಕು. ಅದ್ಯಾವುದು ಇಲ್ಲದೆ ಹೇಗೆ ತೀರ್ಮಾನ ತಗೊಂಡಿದ್ದಾರೆ ಎಂದು ನನಗೆ ತಿಳಿದಿಲ್ಲ. ತೀರ್ಮಾನವನ್ನು ತೀವ್ರವಾಗಿ ಖಂಡಿಸುತ್ತೇನೆ. ನಾವು ಅದೆಷ್ಟೊ ವರ್ಷಗಳಿಂದಲೇ ಟಿಪ್ಪು ಜಯಂತಿಯನ್ನು ಆಚರಿಸುತ್ತಾ ಬರುತ್ತಿದ್ದೇವೆ. ದೇಶದ ಎಲ್ಲಾ ಕಡೆಗಳಲ್ಲಿ ಟಿಪ್ಪು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಇನ್ನು ಮುಂದೆಯೂ ಇದಕ್ಕಿಂತಲೂ ಅದ್ದೂರಿಯಾಗಿ ಆಚರಿಸುತ್ತೇವೆ. ಅದನ್ನು ಯಾರಿಂದಲು ತಡೆಯಲು ಸಾಧ್ಯವಿಲ್ಲ. ಯಾವ ಬಿಜೆಪಿಯಿಂದಲೂ, ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿಕೆ ನೀಡಿ ಬಿಜೆಪಿಯ ಜನವಿರೋಧಿ ನೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
