
‘ಅಖಂಡ ಭೃಷ್ಟಾಚಾರ ಮಾಡಿ ರಾಜ್ಯಕ್ಕೆ ಆಪಖ್ಯಾತಿ ತಂದ ಕುಖ್ಯಾತಿ ಬಿಜೆಪಿ ಪಕ್ಷಕ್ಕಿದೆ’
‘ರಾಜ್ಯದಲ್ಲಿ ಪರ್ಯಾಯ ರಾಜಕೀಯವೇ ಸೂಕ್ತ ಪರಿಹಾರ’
ವರದಿಗಾರ (ಜು.29): ಕರ್ನಾಟಕ ರಾಜ್ಯ ರಾಜಕೀಯದ ಬೆಳವಣಿಗೆ ಮತ್ತಷ್ಟು ತಾರಕಕ್ಕೇರಿದ್ದು ‘ಬಿಜೆಪಿಯದ್ದು ಕುತಂತ್ರಗಳ ಕಾರಸ್ಥಾನ’ ಎಂದು ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ಕರೆದಿರುವುದು ಸದ್ಯ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ವಿಧಾನಸಭಾ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ 17 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಆದೇಶವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಸ್ವಾಗತಿಸಿದ್ದು, ಇದು ಪ್ರಜಾಸತ್ತೆಯ ಗೆಲುವು ಮಾತ್ರವಾಗಿರದೆ ಮುಂದೆ ತಮ್ಮ ಸ್ವಾರ್ಥ ಹಿತಕ್ಕಾಗಿ ಜನಾದೇಶವನ್ನು ತಿರಸ್ಕರಿಸಿ ಆಮಿಷಗಳಿಗೆ ಬಲಿಯಾಗುವ ಚುನಾಯಿತ ಜನಪ್ರತಿನಿಧಿಗಳಿಗೆ ತಕ್ಕ ಪಾಠವಾಗಿದೆ ಎಂದಿರುವ ಅವರು ಜನಾದೇಶವನ್ನು ತಿರಸ್ಕರಿಸಿ ಕುದುರೆ ವ್ಯಾಪಾರಕ್ಕೆ ಹೋದ ಅತೃಪ್ತ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ.
ಅವರು ಮಂಗಳೂರಿನ ಎಸ್ಡಿಪಿಐ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ‘ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಆರಂಭದಿಂದಲೇ ಭಿನ್ನಮತ, ಒಳ ಜಗಳಗಳಿಂದ ಜರ್ಝರಿತವಾಗಿ ಸಾಗುತ್ತಾ ಬಂದಿದ್ದು ತಮ್ಮ ಶಾಸಕರನ್ನು ಬಹಳ ಕಷ್ಟದಿಂದ ತಮ್ಮೊಂದಿಗಿರಿಸಿದ್ದೇ ಈ ತನಕದ ಆ ಪಕ್ಷಗಳ ಸಾಧನೆಯಾಗಿದೆ’ ಎಂದು ಹೇಳಿದ್ದಾರೆ. ‘ರಾಜ್ಯದ ಅಭಿವೃದ್ಧಿ, ಉತ್ತರ ಕರ್ನಾಟಕದ ಹಿಂದುಳಿಯುವಿಕೆ ಮುಂತಾದ ವಿಷಯಗಳ ಬಗ್ಗೆ ಚಿಂತಿಸಲು ಮೈತ್ರಿ ಸರಕಾರದ ಬಳಿ ಸಮಯವಿರಲಿಲ್ಲ, ಕೇವಲ ಹದಿನಾಲ್ಕು ತಿಂಗಳಲ್ಲೇ ಸರಕಾರ ಬಿದ್ದು ಹೋಗಿರುವುದಕ್ಕೆ ಆ ಎರಡೂ ಪಕ್ಷಗಳ ನಾಯಕತ್ವವೂ ಕಾರಣವಾಗಿದೆ’ ಎಂದು ಆರೋಪಿಸಿದ್ದಾರೆ.
‘ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದಾದ್ಯಂತ ಕಾಂಗ್ರೆಸ್ ಪಕ್ಷದ್ದು ಹೀನಾಯ ಸ್ಥಿತಿಯಾಗಿದೆ. ಗೋವಾದಲ್ಲಿ ಏಕಾಏಕಿ 10 ಶಾಸಕರು ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಬೆಂಬಲ ನೀಡಿದ್ದು ಇತ್ತೀಚಿನ ಬೆಳವಣಿಗೆ. ಕರ್ನಾಟಕದಲ್ಲಿ ಜಾತ್ಯಾತೀತ ಪಕ್ಷಗಳೆಂದು ಘೋಷಿಸಿಕೊಂಡಿರುವ ಕಾಂಗ್ರೆಸ್- ಜೆಡಿಎಸ್ನ ಶಾಸಕರು, ಹಿರಿಯ ನಾಯಕರು ಈ ರೀತಿಯಾಗಿ ಪಕ್ಷವನ್ನು ತೊರೆದು ಬಿಜೆಪಿಯಂತಹ ಬಲಪಂಥೀಯ ಪಕ್ಷಗಳಿಗೆ ಹಾರುತ್ತಿರುವುದನ್ನು ಕೇವಲ ಸ್ವಾರ್ಥ ಸಾಧನೆಗಾಗಿ ಎಂದು ಮಾತ್ರವೇ ಭಾವಿಸುವಂತಿಲ್ಲ. ಈ ಪಕ್ಷದಲ್ಲಿರುವ ಶಾಸಕ- ನಾಯಕರುಗಳಿಗೆ ಜಾತ್ಯಾತೀತತೆ ಮತ್ತು ಬಲಪಂಥೀಯತೆ ನಡುವೆ ಯಾವುದೇ ವ್ಯತ್ಯಾಸ ಅಥವಾ ಅವುಗಳ ಸಾಧಕ- ಬಾಧಕಗಳನ್ನು ನಿರ್ಲಕ್ಷಿಸುವ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ’ ಎಂದು ಇಲ್ಯಾಸ್ ಹೇಳಿದ್ದಾರೆ.
‘ನಿರಂತರ ನಾಲ್ಕು ಸಂಪುಟಗಳಲ್ಲಿ ಮಂತ್ರಿಗಳಾಗಿ ಸುಖಾನುಭವಿಸಿದ ರೋಷನ್ ಬೇಗ್ ಮತ್ತು ರಾಮಲಿಂಗರೆಡ್ಡಿಯವರಂತಹ ಹಿರಿಯರೂ ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ತೊರೆದು ಹೋಗಿದ್ದು ಹಿರಿತನ, ಅನುಭವ ಅವರಿಗೆ ಇನ್ನೂ ಸರಿಯಾದ ಪಾಠ ಕಲಿಸಿಲ್ಲ ಹಾಗೂ ಪ್ರಭುದ್ಧತೆಯ ಕೊರತೆ ಕಾಡುತ್ತಿದೆ ಎಂದು ತೋರಿಸುತ್ತಿದೆ. ಕಾಂಗ್ರೇಸ್ ಪಕ್ಷದಲ್ಲಿ ಇಷ್ಟೆಲ್ಲಾ ಶಾಸಕರು ಜಾರಿದರೂ ಇನ್ನೂ ಅದರಲ್ಲಿ ಅಸಂತೃಪ್ತ ಶಾಸಕರು ಇರುವಂತಹ ಸೂಚನೆಗಳು ವ್ಯಕ್ತವಾಗುತ್ತಿವೆ. ಜೆಡಿಎಸ್ ಪಕ್ಷದ್ದೂ ಇದೇ ಗತಿಯಾಗಿದೆ’ ಎಂದಿದ್ದಾರೆ.
‘ಇನ್ನು ಬಿಜೆಪಿ ಪಕ್ಷದ್ದು ಒಂತರಾ ಕುತಂತ್ರಗಳ ಕಾರಸ್ಥಾನ ಅನ್ನಬಹುದು. ಅತೃಪ್ತರೆನಿಸಿಕೊಂಡ ಶಾಸಕರ ರೆಸಾರ್ಟ್ ರಾಜಕಾರಣ, ಹಣ-ಆಮಿಷಗಳ ಬೆಲೆ ಇವೆಲ್ಲಾ ಆ ಪಕ್ಷಕ್ಕೆ ಹಿಂದಿನಿಂದಲೇ ದಕ್ಕಿಸಿಕೊಂಡ ಅನುಭವ. ಕರ್ನಾಟಕದಲ್ಲಿ ಅಖಂಡ ಭೃಷ್ಟಾಚಾರ ಮಾಡಿ ರಾಜ್ಯಕ್ಕೆ ಆಪಖ್ಯಾತಿ ತಂದ ಕುಖ್ಯಾತಿ ಬಿಜೆಪಿ ಪಕ್ಷಕ್ಕಿದೆ. ವಿಧಾನ ಸಭೆಯಲ್ಲಿ ನೈತಿಕತೆಯನ್ನು ಪ್ರಶ್ನಿಸುವ ಬಿಜೆಪಿ ಪಕ್ಷಗಳ ನಾಯಕರಿಗೆ ಯಾವ ನೈತಿಕತೆಯು ಉಳಿದಿಲ್ಲ. ಇಂದು ರಾಜ್ಯದ ಜನರ ಹಿತಾಸಕ್ತಿಗಿಂತ ಪಕ್ಷಗಳ ಪ್ರತಿಷ್ಠೆ, ನಾಯಕರ ಸ್ವಾರ್ಥ ಸಾಧನೆಯೇ ಅತ್ಯಂತ ಮುಖ್ಯವಾದಂತಹ ಮನೋಸ್ಥಿತಿ ಕರ್ನಾಟಕದ ರಾಜಕೀಯದ ಮುಖ್ಯವಾಹಿನಿಯಲ್ಲಿರುವ ಈ ಮೂರು ಪಕ್ಷಗಳದ್ದಾಗಿದೆ’ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.
‘ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ, ಉತ್ತರ ಕರ್ನಾಟಕದಲ್ಲಿ ಹಿಂದುಳಿಯುವಿಕೆಯನ್ನು ಕೊನೆಗಾಣಿಸುವ ಹಾಗೂ ರಾಜ್ಯದ ಜನಸಾಮಾನ್ಯರ, ರೈತರ, ಕಾರ್ಮಿಕರ ಸಮಸ್ಯೆಗಳನ್ನು ನೀಗಿಸುವ ಮಾದರಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಜನತೆ ಪರ್ಯಾಯ ರಾಜಕೀಯದತ್ತ ನಿರ್ಧಾರ ಕೈಗೊಳ್ಳಲು ಇದು ಅತ್ಯಂತ ಸೂಕ್ತ ಸಮಯ. ಎಸ್.ಡಿ.ಪಿ.ಐ ಪರ್ಯಾಯ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ’ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ. ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ನೂರುಲ್ಲಾ ಕುಲಾಯಿ, ಮುನೀಬ್ ಬೆಂಗ್ರ ಉಪಸ್ಥಿತರಿದ್ದರು.
