
ಹೋಟೆಲ್ ಹೊರಗಡೆ ಡಿಕೆಶಿಯನ್ನು ತಡೆದ ಮುಂಬೈ ಪೊಲೀಸ್ !
ಡಿಕೆಶಿ ಬುಕ್ ಮಾಡಿಸಿದ್ದ ಮುಂಬೈ ಹೋಟೆಲ್ ರೂಮ್ ಕ್ಯಾನ್ಸಲ್ !
ವರದಿಗಾರ (ಜುಲೈ, 10): ಕರ್ನಾಟಕದ ‘ಅತೃಪ್ತ’ ಶಾಸಕರು ಉಳಿದುಕೊಂಡಿದ್ದ ಮುಂಬೈನ ‘ರಿನೈಸಾನ್ಸ್’ ಹೋಟೆಲಿಗೆ ಶಾಸಕರನ್ನು ಭೇಟಿ ಮಾಡಲು ತೆರಳಿದ್ದ ‘ಟ್ರಬಲ್ ಶೂಟರ್’ ಖ್ಯಾತಿಯ ಡಿ ಕೆ ಶಿವಕುಮಾರ್ ರನ್ನು ಮುಂಬೈ ಪೊಲೀಸರು ಹೋಟೆಲಿನ ಮುಂಬಾಗದಲ್ಲೇ ಬಲವಂತವಾಗಿ ತಡೆದಿಟ್ಟ ಘಟನೆ ವರದಿಯಾಗಿದೆ. ಶಾಸಕರು ಯಾರನ್ನೂ ಭೇಟಿಯಾಗಲು ಬಯಸುತ್ತಿಲ್ಲ ಆದುದರಿಂದ ತಮ್ಮನ್ನು ಒಳ ಹೋಗಲು ಅನುಮತಿಸಲಾಗದು ಎಂದು ಪೊಲೀಸರು ಕಾರಣ ನೀಡಿದ್ದಾರೆ. ಇದು ಮಾತ್ರವಲ್ಲದೆ ಅತೃಪ್ತರು ತಂಗಿದ್ದ ಅದೇ ಹೋಟೆಲಿನಲ್ಲಿ ತನಗೊಂದು ರೂಮ್ ಮುಂಗಡ ಬುಕ್ ಮಾಡಿದ್ದ ಡಿಕೆಶಿ, ಅಲ್ಲಿ ತೆರಳಿದಾಗ ಬುಕ್ ಮಾಡಿದ್ದ ರೂಮನ್ನು ರದ್ದು ಪಡಿಸಲಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ ಎಂಬುವುದು ಇಲ್ಲಿ ಗಮನಾರ್ಹವಾಗಿದೆ.
ಕರ್ನಾಟಕದ ‘ರಾಜಕೀಯ ಅರಾಜಕತೆ’ ಯ ಸೃಷ್ಟಿಯಲ್ಲಿ ತಮ್ಮದೇನೂ ಪಾತ್ರವಿಲ್ಲ ಎಂದು ಬಿಜೆಪಿ ಅದೆಷ್ಟು ಅಲವತ್ತುಕೊಂಡರೂ, ಅಧಿಕಾರಕ್ಕಾಗಿ ಹಲವು ತಿಂಗಳುಗಳಿಂದ ಹಪಹಪಿಸುತ್ತಲೇ ಇದ್ದ ಮತ್ತು ಅಧಿಕಾರಕ್ಕಾಗಿ ಯಾವ ಮಟ್ಟಕ್ಕಿಳಿಯಲೂ ಹೇಸದ ಬಿಜೆಪಿಯ ಕೈವಾಡ ಇಲ್ಲಿ ಬಹಳ ಸ್ಪಷ್ಟವಾಗಿ ಗೋಚರಿಸತೊಡಗಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಧಿಕಾರಕ್ಕೇರಿದ ಮರುದಿನದಿಂದಲೇ ಅನೈತಿಕತೆಯ ಹಾದಿಯ ಮೂಲಕ ಶಾಸಕರನ್ನು ಆಮಿಷಗಳಿಗೆ ಒಳಪಡಿಸಿ ರಾಜ್ಯ ಸರಕಾರವನ್ನು ಬುಡಮೇಲುಗೊಳಿಸಲು ಪ್ರಯತ್ನಪಡುತ್ತಲೇ ಇದ್ದ ಬಿಜೆಪಿಯ ಕುತಂತ್ರಗಳನ್ನು ಪ್ರತಿ ತಂತ್ರಗಳ ಮೂಲಕ ವಿಫಲಗೊಳಿಸುತ್ತಿದ್ದ ಡಿಕೆಶಿ-ಸಿದ್ಧರಾಮಯ್ಯ ಜೋಡಿಗಳಿಗೆ ಈ ಬಾರಿಯ ಅತೃಪ್ತರ ಭೇಟಿಯಾಗಿ ಮನವೊಲಿಸುವ ಪ್ರಯತ್ನವೇ ಕಷ್ಟ ಸಾಧ್ಯವೆನಿಸಿದೆ. ಡಿಕೆಶಿ ತಾನು ಬುಕ್ ಮಾಡಿದ್ದ ರೂಮ್ ರದ್ದುಗೊಂಡಿದ್ದರಿಂದ ಮುಂಬೈನ ರಸ್ತೆ ಬದಿಯಲ್ಲಿಯೇ ಬೆಳಗ್ಗಿನ ಉಪಹಾರ ಸೇವಿಸುವಂತಾಗಿದೆ.
ಹೋಟೆಲಿನ ಹೊರಗಡೆ ಹೇಳಿಕೆ ನೀಡಿದ ಡಿಕೆಶಿ ” ನಮ್ಮವರನ್ನು ಭೇಟಿಯಾಗದೆ ವಾಪಾಸ್ ಹೋಗುವ ಪ್ರಶ್ನೆಯೇ ಇಲ್ಲ. ನಿನ್ನೆ ರಾತ್ರಿ ಬಿಜೆಪಿ ಹೋಟೆಲಿನಲ್ಲಿ ನಮ್ಮವರಿಂದ ಯಾವೆಲ್ಲಾ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂಬುವುದು ನನಗೆ ಗೊತ್ತು. ನನ್ನಲ್ಲಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ. ಆದರೆ ಒಳ್ಳೆಯ ಹೃದಯವಿದೆ. ನಮ್ಮವರನ್ನು ನೋಡಲು ಬಂದಿದ್ದೇನೆ. ಅವರನ್ನು ಕರೆದುಕೊಂಡು ಹೋಗುತ್ತೇನೆ” ಎಂದು ಗುಡುಗಿದ್ದಾರೆ.
ಈ ನಡುವೆ ಟ್ವೀಟ್ ಮಾಡಿರುವ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ ವೈ ರಾಘವೇಂದ್ರ “ಡಿಕೆಶಿಯವರೇ, ಈ ಬಾರಿ ನಿಮ್ಮ ಆಟ ಮುಂಬೈನಲ್ಲಿ ನಡೆಯಲ್ಲ” ಎಂದಿದ್ದಾರೆ. ಇಂತಹಾ ಹೇಳಿಕೆಗಳು ಬಿಜೆಪಿಯ ಅಧಿಕಾರಕ್ಕಾಗಿ ಪರದೆಯ ಹಿಂದಿನ ಆಟಗಳನ್ನು ಬಹಿರಂಗಗೊಳಿಸುತ್ತಿದೆ.
