
ವರದಿಗಾರ (ಜುಲೈ.09): ದಕ್ಷಿಣ ಕನ್ನಡ ಜಿಲ್ಲೆಯು ಸಾಮೂಹಿಕ ಅತ್ಯಾಚಾರಗಳಿಂದ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಇಲ್ಲಿನ ಪುತ್ತೂರು ಖಾಸಗಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅದೇ ಕಾಲೇಜಿನ ಕಾಮುಕರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆಗೆ ಸಂಬಂಧಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಸುದ್ದಿ ಜಿಲ್ಲೆಯಿಂದ ಕೇಳಿ ಬಂದಿದೆ.
ಪುತ್ತೂರಿನ ಘಟನೆಯಂತೆ ಈ ಘಟನೆಯೂ ತಡವಾಗಿ ಬೆಳಕಿ ಬಂದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆಯ ಗ್ರಾಮ ಪಂಚಾಯತ್ ಸಿಬ್ಬಂದಿ ಸಹಿತ ಐವರ ತಂಡ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. . ವಿಟ್ಲ ಸಮೀಪದ ನಿವಾಸಿಯಾಗಿರುವ 17 ವರ್ಷದ ಬಾಲಕಿ ಮೇಲೆ ಈ ಕೃತ್ಯ ನಡೆದಿದೆ.
ಸಾಮೂಹಿಕ ಅತ್ಯಾಚಾರ ಸಂತ್ರಸ್ತ ಬಾಲಕಿ ಇದೀಗ ಗರ್ಭವತಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಬಾಲಕಿ ಎಸೆಸೆಲ್ಸಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದಳು ಈ ಸಂದರ್ಭವನ್ನು ಬಳಸಿಕೊಂಡ ಗ್ರಾಮ ಪಂಚಾಯತ್ ಸಿಬ್ಬಂದಿ ಸೇರಿದಂತೆ ಐವರ ತಂಡ ಈಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿ ಯುವತಿ ಗರ್ಭವತಿಗೆ ಕಾರಣವಾಗಿದ್ದಾರೆ. ಇದೀಗ ಬಾಲಕಿ 6 ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಯಾರಲ್ಲೂ ಹೇಳದಂತೆ ಆರೋಪಿಗಳು ಬೆದರಿಕೆ ಹಾಕಿದ್ದರೆನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡ್ನೂರು ಗ್ರಾಮ ಪಂಚಾಯತ್ ತೆರಿಗೆ ಸಂಗ್ರಹಕ ಕೃಷ್ಣ ನಾಯಕ್, ಆಟೋ ಚಾಲಕ ಧನುಷ್ ನಾಯಕ್ , ಬಾಲಕಿಯ ಸಂಬಂಧಿಕ ಗಣೇಶ್ ರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಹಾಗೂ ಇನ್ನಿತರ ಇಬ್ಬರು ತಲೆಮರೆಸಿಕೊಂಡಿದ್ದು ಪವನ್ ಮತ್ತು ಪುನೀತ್ ಎಂಬವರ ಹೆಸರನ್ನು ಬಾಲಕಿ ಹೇಳಿದ್ದಾಳೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಪೊಲಿಸರು ತನಿಖೆ ಮುಂದುವರಿಸಿದ್ದಾರೆ.
