ರಾಜ್ಯ ಸುದ್ದಿ

ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ ನೀಡಿದ ಫೈನಲ್ ವಾರ್ನಿಂಗ್ ಏನು ಗೊತ್ತೇ?

‘ಆಪರೇಷನ್ ಕಮಲಕ್ಕೆ ಬಳಕೆಯಾಗುತ್ತಿರುವ ಹಣ ಕಾನೂನು ಬದ್ಧವೋ ಅಲ್ಲವೋ ಎಂಬುದನ್ನು ಬಿಜೆಪಿ ತಿಳಿಸಬೇಕು ಮತ್ತು ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಕೊಟ್ಟವರು ಯಾರು?’

ವರದಿಗಾರ (ಜುಲೈ.09): ಕಾಂಗ್ರೆಸ್‍ನ ಅತೃಪ್ತರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡುತ್ತಾ ಅತೃಪ್ತ ಶಾಸಕರಿಗೆ ಫೈನಲ್ ವಾರ್ನಿಂಗ್ ನೀಡಿದ್ದಾರೆ.

ಅತೃಪ್ತ ಶಾಸಕರಿಗೆ ನೀಡಿದ ಫೈನಲ್ ವಾರ್ನಿಂಗ್ ಈ ರೀತಿಯಲ್ಲಿದೆ. ‘ತಕ್ಷಣವೇ ವಾಪಸ್ ಬಂದು ರಾಜೀನಾಮೆ ಹಿಂಪಡೆಯದಿದ್ದರೆ ಪಕ್ಷಾಂತರ ಕಾಯ್ದೆಯಡಿ ಶಾಸಕ ಸ್ಥಾನದಿಂದ ವಜಾಗೊಳ್ಳುವುದು ಮತ್ತು ಆರು ವರ್ಷ ಚುನಾವಣೆ ನಿಷೇಧಗೊಳ್ಳುವ ಶಿಕ್ಷೆ ಅನುಭವಿಸಬೇಕಾಗುತ್ತದೆ ಮತ್ತು ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ’ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇಂದು ವಿಧಾನಸೌಧ ಮತ್ತು ವಿಕಾಸಸೌಧ ನಡುವಿನ ಮಹಾತ್ಮಗಾಂಧಿ ಪ್ರತಿಮೆ ಎದುರು ಒಂದು ಗಂಟೆ ಬಿಜೆಪಿ ವಿರುದ್ಧ ಧರಣಿ ನಡೆಸಿ ಬಳಿಕ ಸ್ಪೀಕರ್ ಅವರಿಗೆ ದೂರು ನೀಡಲಾಗುತ್ತದೆ. ಪಕ್ಷಾಂತರ ನಿಷೇಧ ಕಾಯ್ದೆ ಅನುಚೇದ 10ರ ಅಡಿ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗುವುದು ಎಂದು ಹೇಳಿದ್ದಾರೆ.

ಆರ್ಟಿಕಲ್ 10ರ ಅನುಸಾರ ಯಾವುದೇ ಪಕ್ಷದ ಚಿಹ್ನೆಯಡಿ ಆಯ್ಕೆಯಾದ ಶಾಸಕ ಸ್ವಯಂ ಪ್ರೇರಿತವಾಗಿ ಅಥವಾ ನಿರ್ದಿಷ್ಟ ಕಾರಣಗಳನ್ನು ಇಟ್ಟುಕೊಂಡು ರಾಜೀನಾಮೆ ನೀಡುವ ಅಧಿಕಾರ ಹೊಂದಿದ್ದಾರೆ. ಅದರ ಬದಲು ಬೇರೆ ರೀತಿಯ ಪ್ರಲೋಪನೆ ಅಥವಾ ಒತ್ತಡಕ್ಕೆ ರಾಜೀನಾಮೆ ಕೊಟ್ಟಿದ್ದರೆ ಕಾನೂನು ಬಾಹೀರವಾಗುತ್ತದೆ. ಈಗ ರಾಜೀನಾಮೆ ನೀಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿಯ ಒತ್ತಡಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಅವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು. ಮುಂದಿನ ಆರು ವರ್ಷ ಅವರು ಯಾವುದೇ ಚುನಾಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಏರಬೇಕೆಂದು ನಾವು ಸ್ಪೀಕರ್ ಅವರಿಗೆ ಜಂಟಿಯಾಗಿ ದೂರು ನೀಡುತ್ತಿದ್ದೇವೆ ಎಂದಿದ್ದಾರೆ.

ಆರ್ಟಿಕಲ್ 10ರ ಅನುಸಾರ ಮತ್ತು ಸೆಕ್ಷನ್ 164 ಪರಿಚೇದ 1 ಮತ್ತು 2ರ ಅನುಸಾರ ಅನರ್ಹಗೊಂಡರೆ ಸದರಿ ಶಾಸಕರು ಸಚಿವ ಸ್ಥಾನವನ್ನಾಗಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿಲ್ಲ. ಈ ಕಾನೂನಿನಡಿ ಕ್ರಮ ಕೈಗೊಳ್ಳಲು ಸಂವಿಧಾನ ಸ್ಪೀಕರ್ ಅವರಿಗೆ ಪರಮಾಧಿಕಾರ ನೀಡಿದೆ. ಸ್ಪೀಕರ್ ಅವರು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅರಿವಿದ್ದಂತೆ ಇಲ್ಲ. ಈಗಲಾದರೂ ವಾಪಸ್ ಬಂದು ರಾಜೀನಾಮೆಯನ್ನು ಹಿಂಪಡೆಯಿರಿ. ಇಲ್ಲವಾದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಇಂದಿನ ಶಾಸಕಾಂಗ ಸಭೆಯಲ್ಲಿ ವಿಧಾನಮಂಡಲ ಅಧಿವೇಶನದ ಬಗ್ಗೆ ಚರ್ಚೆ ನಡೆಸಲಾಗಿದೆ. ಬೇಡಿಕೆಗಳ ಮೇಲೆ ಚರ್ಚೆ ನಡೆದು ನಾಲ್ಕು ತಿಂಗಳ ಲೇಖಾನುಧಾನಕ್ಕೆ ಈ ಮೊದಲು ಒಪ್ಪಿಗೆ ಪಡೆಯಲಾಗಿತ್ತು. ಮುಂದಿನ 8 ತಿಂಗಳ ಕಾಲ ಹಣಕಾಸು ಮಸೂದೆಗೆ ಒಪ್ಪಿಗೆ ಪಡೆಯಬೇಕಿದೆ. ಹೀಗಾಗಿ ಜುಲೈ 12ರಿಂದ ಆರಂಭಗೊಳ್ಳುವ ವಿಧಾನಮಂಡಲ ಅಧಿವೇಶನ ಪ್ರಮುಖವಾದದ್ದು, ಎಲ್ಲಾ ಶಾಸಕರು ಇದರಲ್ಲಿ ಕಡ್ಡಾಯವಾಗಿ ಭಾಗವಹಿಸಲೇಬೇಕು. ಯಾವುದೇ ಕೆಲಸಗಳಿದ್ದರೂ ಬಿಟ್ಟು ಅಧಿವೇಶನಕ್ಕೆ ಹಾಜಾರಾಗಿ ಎಂದು ಸೂಚನೆ ನೀಡುತ್ತಿರುವುದಾಗಿ ಸಿದ್ದರಾಮಯ್ಯ ಹೇಳಿದರು.

ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ 20ತಿಂಗಳ ನಂತರ ಸಂಪುಟ ಪುನರಚಿಸಲು ನಿರ್ಧರಿಸಲಾಗಿತ್ತು. ಕೆಲವು ಹಿರಿಯ ಶಾಸಕರಿಗೆ, ಅರ್ಹರಿಗೆ ಅವಕಾಶ ನೀಡರಲಿಲ್ಲ. ಹೀಗಾಗಿ ಮತ್ತೆ ಸಂಪುಟ ಪುನರಚಿಸಲು ನಿರ್ಧರಿಸಲಾಗಿದೆ. ಹೊಸಬರಿಗೆ ಅವಕಾಶ ಮಾಡಿಕೊಡಲು ಸಂಪುಟದಲ್ಲಿರುವ ಎಲ್ಲಾ ಸಚಿವರು ತಮ್ಮ ಸ್ಥಾನಕ್ಕೆ ನಿನ್ನೆ ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ನೀಡಿದರು ಎಂಬ ಮಾತ್ರಕ್ಕೆ ಸಚಿವರು ಮಾಜಿಗಳಾಗಿಲ್ಲ. ಪಕ್ಷದ ಅಧ್ಯಕ್ಷರು ಮುಖ್ಯಮಂತ್ರಿಯವರಿಗೆ ರಾಜೀನಾಮೆ ಪತ್ರ ಕಳುಹಿಸಿ ಅದು ಅಂಗೀಕಾರಗೊಳ್ಳುವವರೆಗೂ ಮಂತ್ರಿ ಮಂಡಲ ಅಸ್ಥಿತ್ವದಲ್ಲಿರುತ್ತದೆ. ಸರ್ಕಾರವೂ ಚಾಲ್ತಿಯಲ್ಲಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಶೇ.38, ಬಿಜೆಪಿಗೆ 37, ಜೆಡಿಎಸ್‍ಗೆ 19ರಷ್ಟು ಮತಗಳು ಬಿದ್ದಿದ್ದವು. ಬಿಜೆಪಿಗಿಂತಲೂ ಕಾಂಗ್ರೆಸ್ ಶೇ.1ರಷ್ಟು ಮತ ಗಳಿಸಿತ್ತು. ಜೆಡಿಎಸ್-ಕಾಂಗ್ರೆಸ್ ಸೇರಿದಂತೆ ಶೇ.52ರಷ್ಟು ಮತಗಳಿಕೆಯಾಗಿದೆ.

ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರು. ಆನಂತರ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಒಟ್ಟಾಗಿ ಸಮ್ಮಿಶ್ರ ಸರ್ಕಾರ ರಚಿಸಿವೆ.

ಒಂದು ವರ್ಷದ ಆಡಳಿತದಲ್ಲಿ ಬಿಜೆಪಿ ಐದು ಬಾರಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಿ ವಿಫಲವಾಗಿದೆ. ಈ ಬಾರಿ ರಾಜ್ಯ ಬಿಜೆಪಿ ನಾಯಕರ ಜತೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ಸಂವಿಧಾನ ಬಾಹೀರವಾಗಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಹಣಬಲ ಹಾಗೂ ರಾಜಕೀಯ ಬಲವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಆಪರೇಷನ್ ಕಮಲಕ್ಕೆ ಬಳಕೆಯಾಗುತ್ತಿರುವ ಹಣ ಕಾನೂನು ಬದ್ಧವೋ ಅಲ್ಲವೋ ಎಂಬುದನ್ನು ಬಿಜೆಪಿ ತಿಳಿಸಬೇಕು ಮತ್ತು ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಕೊಟ್ಟವರು ಯಾರು ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಇದೇ ಸಂದರ್ಭ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group