ನಿಮ್ಮ ಬರಹ

ಕ್ಯಾಂಡಲ್ ಉರಿಸುವವರಿಗೆ ಅತ್ಯಾಚಾರದ ಸಂತ್ರಸ್ತೆ ಸಾಯಲೇಬೇಕೆ..?? -ಪ್ರತಿಭಾ ಕುಳಾಯಿ

ವರದಿಗಾರ (ಜುಲೈ,08): ಸಾಮೂಹಿಕ ಅತ್ಯಾಚಾರದಂತ ಘಟನೆಗಳು ದೂರದ ದಿಲ್ಲಿಯಲ್ಲೋ, ಯುಪಿ ಬಿಹಾರದಲ್ಲೋ ನಡೆಯುತ್ತಿದ್ದುದನ್ನು ನೋಡಿದ್ದೆವು. ಆದರೆ ದೇರಳಕಟ್ಟೆಯ ವೈದ್ಯಕೀಯ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ, ಮಣಿಪಾಲ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿತ ಗ್ಯಾಂಗ್ ರೇಪ್ ಪ್ರಕರಣದ ಬಳಿಕ ಅವಿಭಜಿತ ದ.ಕ. -ಉಡುಪಿ ಜಿಲ್ಲೆಯಲ್ಲೂ ಇಂತಹ ಘಟನೆಗಳು ನಡೆಯುತ್ತಿದೆಯಲ್ಲವೇ ಎಂದು ಮರುಕ ಪಟ್ಟಿದ್ದೆವು. ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅಲ್ಲಲ್ಲಿ ಪ್ರತಿಭಟನೆಗಳೂ ನಡೆದಿದ್ದವು.

ಆದರೆ ದಿಲ್ಲಿ ಗ್ಯಾಂಗ್ ರೇಪ್, ಜಮ್ಮು ಬಾಲಕಿ ಅತ್ಯಾಚಾರ ಮತ್ತು ಮರ್ಡರ್ ಪ್ರಕರಣಗಳು ನಡೆದಾಗ ದೇಶ ಒಂದಾಗಿ ಪ್ರತಿಭಟನೆ ನಡೆಸಿತ್ತು. ಇನ್ನುಳಿದಂತೆ ನಮ್ಮ ಆಸುಪಾಸಿನಲ್ಲಿ ನಡೆದ ಸರಣಿ ಅತ್ಯಾಚಾರ, ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರತಿಭಟನೆ ನಡೆದಿದ್ದು ಕಂಡಿಲ್ಲ. ಇದೇಕೆ ಹೀಗೆ? ಕ್ಯಾಂಡಲ್ ಹಚ್ಚಲು, ಪ್ರತಿಭಟನಾ ಭಾಷಣ ಬಿಗಿಯಲು ಅತ್ಯಾಚಾರದ ಸಂತ್ರಸ್ತೆ ಸಾಯಲೇಬೇಕೆ? ಅತ್ಯಾಚಾರ ಅನ್ನೋದು ಸಮಸ್ತ ಹೆಣ್ಣು ಕುಲವನ್ನು, ಹೆಣ್ಣು ಹೆತ್ತವರನ್ನು ಆತಂಕ, ಭಯಕ್ಕೆ ದೂಡುವ ವಿಚಾರ ಅಲ್ಲವೇ? ಇಲ್ಲಿ ಹೊರಡುವ ಕೈಗಳು ಇಲ್ಲವೇಕೆ?

ಇನ್ನು ಪ್ರತಿಯೊಂದು ಅತ್ಯಾಚಾರ ಪ್ರಕರಣಗಳು ನಡೆದಾಗಲೂ ಸಾಮಾನ್ಯವಾಗಿ ಪ್ರಾರಂಭವಾಗುವುದು ಅದೇ ಕೆಟ್ಟ ರಾಜಕೀಯ. ಅತ್ಯಾಚಾರ ಆರೋಪಿಗಳು, ಸಂತ್ರಸ್ತೆ ಎಲ್ಲವನ್ನೂ ಜಾತಿ-ಧರ್ಮ, ಪಕ್ಷ-ಸಂಘಟನೆ ಆಧಾರದಲ್ಲಿ ವಿಂಗಡಿಸಿ ಹೋರಾಟವನ್ನೇ ಹತ್ತಿಕ್ಕಲಾಗುತ್ತದೆ. ಇಲ್ಲಿ ಸಮಾಜಪರ ಕಾಳಜಿ ಹೊಂದಿರುವ ಸಂಘಟನೆಗಳೂ ಕೂಡಾ ಆರೋಪಿಗಳು ನಮ್ಮವರಲ್ಲ ಎಂದು ನುಣುಚಿಕೊಳ್ಳುತ್ತವೆ. ಇದರಿಂದ ಪ್ರಕರಣ ನಿಧಾನಕ್ಕೆ ಹಳ್ಳ ಹಿಡಿಯುತ್ತವೆ. ಅದರ ಬದಲು ಅತ್ಯಾಚಾರ ಆರೋಪಿಗಳು ಯಾರೇ ಆಗಿರಲಿ ಅವರ ವಿರುದ್ಧ ಒಕ್ಕೊರಲ ಪ್ರತಿಭಟನೆ ನಡೆಸಬಾರದೇಕೆ??

ಸಂಘಟನೆ, ಪಕ್ಷಕ್ಕೆ ಸೇರಿದವರಾದರೆ ತಕ್ಷಣವೇ ಹೊರಗಿಟ್ಟು ಕಾನೂನು ಕ್ರಮಕ್ಕೆ ಒತ್ತಾಯ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆಯಬಾರದೇಕೆ?
ಇನ್ನು ದಕ್ಷಿಣ ಕನ್ನಡ ಜಿಲ್ಲೆ “ಎಜುಕೇಷನ್ ಹಬ್” ಎಂದು ಕರೆಯಲ್ಪಟ್ಟಿದೆ. ಹತ್ತಾರು ಪ್ರಖ್ಯಾತ ಶಿಕ್ಷಣ ಸಂಸ್ಥೆಗಳಿದ್ದು ಸಾವಿರಾರು ಮಂದಿ ತಮ್ಮ ಮಕ್ಕಳನ್ನು ಇಲ್ಲಿರಿಸಿ ಓದಿಸುತ್ತಿದ್ದಾರೆ. ಆದರೆ ಇದನ್ನೇ ಟಾರ್ಗೆಟ್ ಮಾಡಿಕೊಂಡು ಗಾಂಜಾ ಮತ್ತಿತರ ಮಾದಕ ವಸ್ತು ಸರಬರಾಜು ಮಾಡುವ ದಂಧೆಕೋರರು ತಮ್ಮ ವ್ಯಾಪ್ತಿ ವಿಸ್ತರಿಸುತ್ತಿದ್ದಾರೆ. ಇದರ ಮುಂದುವರಿದ ಭಾಗವೇ ಪುತ್ತೂರಿನಲ್ಲಿ ನಡೆದಂತಹ ಹೀನ ಕೃತ್ಯ. ಇಲ್ಲಿ ಯಾರದ್ದೋ ಮನೆಯ ಹೆಣ್ಣುಮಕ್ಕಳು ಎಂದು ನಾಗರೀಕ ಸಮಾಜ, ಪೊಲೀಸ್ ಇಲಾಖೆ ಸುಮ್ಮನಿದ್ದರೆ ನಾಳೆ ದುರುಳರು ನಮ್ಮ ಮನೆ ಬಾಗಿಲು ತಟ್ಟಬಹುದು. ಜಿಲ್ಲಾ ಪೊಲೀಸ್ ಇಲಾಖೆಯೂ ಅಷ್ಟೇ ಶಿಕ್ಷಣ ಸಂಸ್ಥೆಗಳನ್ನೇ ಟಾರ್ಗೆಟ್ ಮಾಡ್ಕೊಂಡು ಅಕ್ರಮ ದಂಧೆ ನಡೆಸುವವರ ಹೆಡೆಮುರಿ ಕಟ್ಟಬೇಕು. ಇಂದು ಪುತ್ತೂರಿನಲ್ಲಿ ನಡೆದ ಘಟನೆ ಮುಂದೆಂದೂ ಎಲ್ಲೂ ನಡೆಯಬಾರದು. ಅಂತ ತೀವ್ರ ಪ್ರತಿಭಟನೆ ನಮ್ಮಲ್ಲಿ ನಡೆಯಬೇಕು. ಮಕ್ಕಳ ಹೆತ್ತವರೂ ಅಷ್ಟೇ ವಯಸ್ಸಿಗೆ ಬಂದ ತಮ್ಮ ಮಕ್ಕಳ ಮೇಲೆ ನಿಗಾ ಇರಿಸಬೇಕು. ಇನ್ನಾದರೂ ಜಿಲ್ಲೆಯ ಪೊಲೀಸ್ ಇಲಾಖೆ, ಸಾಮಾಜಿಕ ಸಂಘಟನೆಗಳು ಈ ವಿಚಾರದಲ್ಲಿ ರಾಜಕೀಯಕ್ಕೆ ಆಸ್ಪದ ನೀಡದೆ ಕಾಮುಕರಿಗೆ ಕಠಿಣ ಶಿಕ್ಷೆಯಾಗುವಲ್ಲಿ ಶ್ರಮಿಸಲಿ.

-ಪ್ರತಿಭಾ ಕುಳಾಯಿ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group