ವರದಿಗಾರ (ಜುಲೈ 6): ದಲಿತ ಮತ್ತು ಮುಸ್ಲಿಂ ಸಮುದಾಯಗಳು ಸರಕಾರದ ವಿರುದ್ಧ ದಂಗೆ ಏಳುವ ದಿನಗಳು ದೂರ ಇಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಸರಕಾರವನ್ನು ಎಚ್ಚರಿಸಿದ್ದಾರೆ.
ಅವರು ಮಂಡ್ಯ ನಗರದಲ್ಲಿ ‘ದಲಿತ ಮತ್ತು ಅಲ್ಪಸಂಖ್ಯಾತರ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ’ದ ವಿರುದ್ಧ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
‘ಭಾರತ ದೇಶದಲ್ಲಿ ದಲಿತರಿಗೆ ಮತ್ತು ಮುಸಲ್ಮಾನರಿಗೆ ರಕ್ಷಣೆ ಇಲ್ಲ ಎಂಬುದು ಪದೇ ಪದೇ ಸಾಬೀತುಗೊಳ್ಳುತ್ತಿದೆ. ದಲಿತರಿಗೆ ಮತ್ತು ಮುಸಲ್ಮಾನರಿಗೆ ಹೊಡೆಯಲು ಹಾಗೂ ಕೊಲ್ಲಲು ಇಂದು ಕಾರಣಗಳೇ ಬೇಕಾಗಿಲ್ಲ. ಅಖ್ಲಾಕ್ ನಿಂದ ತಬ್ರೇಝ್ ಅನ್ಸಾರಿವರೆಗೆ ಮತ್ತು ಖೈರ್ಲಾಂಜಿ ಯಿಂದ ಗುಂಡ್ಲುಪೇಟೆಯಲ್ಲಿ ನಡೆದ ಘಟನೆಗಳು ಇದಕ್ಕೆ ಸಾಕ್ಷಿ ಗಳಾಗಿವೆ’ ಎಂದು ಅವರು ಹೇಳಿದ್ದಾರೆ.
‘ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಘಪರಿವಾರದ ಶಕ್ತಿ ಕೇಂದ್ರವೆಂದೇ ಗುರುತಿಸಲ್ಪಟ್ಟಿರುವ ವಿವೇಕಾನಂದ ಕಾಲೇಜಿನ ದಲಿತ ವಿದ್ಯಾರ್ಥಿನಿಯ ಮೇಲೆ ಅದೇ ಕಾಲೇಜಿನ ಎಬಿವಿಪಿ ಕಾರ್ಯಕರ್ತರೆನ್ನಲಾದ ಐವರು ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಅದನ್ನು ವೀಡಿಯೋ ಚಿತ್ರೀಕರಣದ ಮೂಲಕ ಸೆರೆಹಿಡಿದು ನಿರಂತರವಾಗಿ ಬೆದರಿಕೆಯೊಡ್ಡಿದ್ದಲ್ಲದೆ ಬುಧವಾರ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟು ವಿಕೃತಿ ಪಡೆದ ಘಟನೆಯು ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಈ ಬಗ್ಗೆ ಸರಕಾರಗಳು ತಕ್ಷಣ ಕಾರ್ಯ ಪ್ರವೃತ್ತರಾಗಿ ದೌರ್ಜನ್ಯದ ವಿರುದ್ಧ ವಿಶೇಷ ಕಾನೂನು ತರುವಂತೆ ಅವರು ಆಗ್ರಹಿಸಿದರು. ಒಂದು ವೇಳೆ ಈ ರೀತಿಯ ದೌರ್ಜನ್ಯಗಳು ಮುಂದುವರಿಯುವುದೇ ಅದಲ್ಲಿ ದಲಿತರು ಮತ್ತು ಮುಸಲ್ಮಾನರು ಒಂದಾಗಿ ಸರ್ಕಾರದ ವಿರುದ್ಧ ದಂಗೆ ಏಳುವ ದಿನಗಳು ದೂರ ಇಲ್ಲ ಎಂದು ಎಂದು ರವರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ವಿವಿಧ ಸಾಮಾಜಿಕ, ಧಾರ್ಮಿಕ, ರಾಜಕೀಯ ಹೋರಾಟಗಾರರು ಮತ್ತು ವಿವಿಧ ಪ್ರಗತಿಪರ ಹೋರಾಟಗಾರರು ಉಪಸ್ಥಿತರಿದ್ದರು.
