ರಾಜ್ಯ ಸುದ್ದಿ

ಮೋದಿ ಸರ್ಕಾರ ರೈತರ ಮೊರೆ ಕೇಳದೆ ಇರುವಷ್ಟು ಕಿವುಡಾಗಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

‘2019ರ ಬಜೆಟ್ ರೈತರು, ಯುವಜನರು ಮತ್ತು ಗ್ರಾಮೀಣ ಭಾರತಕ್ಕೆ ಮಾರಕ’

ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಬಗ್ಗೆ ಸಿದ್ದರಾಮಯ್ಯ ಸರಣಿ ಟ್ವೀಟ್

ವರದಿಗಾರ (ಜುಲೈ.05): ಪ್ರಧಾನಿ ನರೇಂದ್ರ ಮೋದಿ ಸರಕಾರವು ರೈತರ ಮೊರೆ ಕೇಳದೇ ಇರುವಷ್ಟು ಕಿವುಡಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದಾರಾಮಯ್ಯ ಹೇಳಿದ್ದಾರೆ.

ಅವರು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಬಗ್ಗೆ ತನ್ನ ಟ್ಟಿಟ್ಟರ್ ನಲ್ಲಿ ಪ್ರತಿಕ್ರಿಯಿಸುತ್ತಾ, ‘ ಸಾಲ ಮನ್ನಾಕ್ಕಾಗಿ ದೇಶದ ರೈತರು ಒಕ್ಕೊರಲಿನಿಂದ ಮೊರೆ ಇಡುತ್ತಿದ್ದಾರೆ. ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಈಗಿನ ಮೈತ್ರಿ ಸರ್ಕಾರಗಳೆರಡೂ ರೈತರ ಮೊರೆಗೆ ಓಗೊಟ್ಟು ಸಾಲ ಮನ್ನಾ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿದೆ. ಆದರೆ ನರೇಂದ್ರ ಮೋದಿ ಸರ್ಕಾರ ರೈತರ ಮೊರೆ ಕೇಳದೆ ಇರುವಷ್ಟು ಕಿವುಡಾಗಿದೆ’ ಎಂದು ಹೇಳಿದ್ದಾರೆ.

2019ರ ಬಜೆಟ್ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಕೇಂದ್ರ ಸರಕಾರದ ವಿರುದ್ಧ ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

ಸರಣಿ ಟ್ವೀಟ್ ಮುಂದುವರಿಸುತ್ತಾ, ‘ 2019-20ರ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಪತ್ರ ಸಂಪೂರ್ಣವಾಗಿ ರೈತರು,ಯುವಜನರು ಮತ್ತು ಗ್ರಾಮೀಣ ಭಾರತಕ್ಕೆ ಮಾರಕವಾಗಿದೆ’ ಎಂದು ಹೇಳಿದ್ದಾರೆ.

ಮತ್ತೊಂದು ಟ್ಟೀಟ್ ನಲ್ಲಿ, ‘ ದೇಶದ ರೈತರು ಸರಿಯಾದ ಮಳೆ ಇಲ್ಲದೆ, ಬೆಳೆದ ಬೆಳೆಗೆ ಯೋಗ್ಯ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಯುವಜನತೆ ನಿರುದ್ಯೋಗದಿಂದಾಗಿ ಬಳಲುತ್ತಿದ್ದಾರೆ. ಈ ಎರಡು ಮುಖ್ಯ ಸಮಸ್ಯೆಗಳನ್ನು ನರೇಂದ್ರ ಮೋದಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ’ ಎಂದು ಆರೋಪಿಸಿದ್ದಾರೆ.

‘ ಕೃಷಿ ಬೆಳವಣಿಗೆಗೆ ಪೂರಕವಾಗಿರುವ ನೀರಾವರಿ, ತೋಟಗಾರಿಕೆ, ಸಹಕಾರ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗಿದೆ. ನಿರುದ್ಯೋಗ ತಾಂಡವವಾಡುತ್ತಿರುವಾಗ ಅತ್ಯಂತ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿರುವ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿರುವುದರಿಂದ ನಿರುದ್ಯೋಗದ ಪ್ರಮಾಣ ಮಾತ್ರವಲ್ಲ, ವಲಸೆ ಪ್ರಮಾಣ ಕೂಡಾ ಹೆಚ್ಚಾಗಲಿದೆ’ ಎಂದು ಹೇಳಿದ್ದಾರೆ.

ಹೀಗೇ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆ ಎಂದು ೫ ವರ್ಷಗಳ ಹಿಂದೆ ಆಶ್ವಾಸನೆ ನೀಡಿದ್ದ ಮೋದಿ ಸರ್ಕಾರ ಈ ಆಯವ್ಯಯ ಪತ್ರದಲ್ಲಿಯೂ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ. ಕಳೆದ ಐದು ವರ್ಷಗಳಲ್ಲಿ ಕೇವಲ 0.3 % ನಷ್ಟು ಮಾತ್ರ ಬಜೆಟ್ ಹಣವನ್ನು ಖರ್ಚು ಮಾಡಿರುವುದು ಸರ್ಕಾರದ ರೈತ ವಿರೋಧಿ ನೀತಿಗೆ ಸಾಕ್ಷಿ’ ಎಂದೂ ಹೇಳಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರನ್ನು ಉಲ್ಲೇಖಿಸುತ್ತಾ, ‘ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಮಾತ್ರಕ್ಕೆ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎನ್ನುವುದು ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್ ಅವರಿಗೆ ತಿಳಿದಿರಲಿ. ತಂತ್ರ-ಮಂತ್ರದಿಂದ ಚುನಾವಣೆ ಗೆಲ್ಲಬಹುದೇನೋ,ಆದರೆ ಉದ್ಯೋಗವನ್ನು ಸೃಷ್ಟಿಸಲಾಗುವುದಿಲ್ಲ‌ ಸಚಿವರೇ’ ಎಂದು ಬುದ್ದಿಮಾತು ಹೇಳುವ ಪ್ರಯತ್ನವೂ ಮಾಡಿದ್ದಾರೆ.

‘ಜಾಗತಿಕವಾಗಿ ತೈಲಬೆಲೆ ಕಡಿಮೆಯಾಗುತ್ತಿದ್ದರೂ ನರೇಂದ್ರ ಮೋದಿ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಎರಡು ರೂಪಾಯಿಗಳಷ್ಟು ಏರಿಸಿದೆ. ಇದರಿಂದ ಸಹಜವಾಗಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ, ಸಾರಿಗೆ ದುಬಾರಿಯಾಗಲಿದೆ. ಇದರಿಂದ ಸಾಮಾನ್ಯ ಜನರ ಕಷ್ಟಗಳು ಹೆಚ್ಚಾಗಲಿವೆ’ ಎಂದು ಕೇಂದ್ರ ಸರಕಾರ ಇಂದು ಮಂಡಿಸಿರುವ ಬಜೆಟ್ ಬಗ್ಗೆ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group