ಜಿಲ್ಲಾ ಸುದ್ದಿ

ಬಗೆಹರಿಯದ ದ.ಕ ಜಿಲ್ಲೆಯ ಮರಳು, ಕೆಂಪು ಕಲ್ಲು, ಕಪ್ಪು ಕಲ್ಲು, ಜೆಲ್ಲಿ ಕಲ್ಲಿನ ಸಮಸ್ಯೆ, ಕಟ್ಟಡ ನಿರ್ಮಾಣ ಸ್ಥಗಿತ, ಚಿಂತಾಕ್ರಾಂತರಾದ ಲಾರಿ ಮಾಲಕರು ಮತ್ತು ಕಾರ್ಮಿಕರ ಪರಿಹಾರಕ್ಕೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲು ಎಸ್.ಡಿ.ಪಿ.ಐ ಆಗ್ರಹ

ವರದಿಗಾರ (ಜೂನ್.13): ಸರಿ ಸುಮಾರು ಎರಡು ವರ್ಷಗಳಿಂದಲೂ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಿರುವ ಮರಳಿನ ಸಮಸ್ಯೆಯಿಂದಾಗಿ ದ.ಕ ಜಿಲ್ಲೆಯ ಕಟ್ಟಡ ನಿರ್ಮಾಣ, ಕೆಲಸಗಾರರು ಮತ್ತು ಲಾರಿ ಮಾಲಕರು ಬಹಳ ದೊಡ್ಡ ಸಮಸ್ಯೆಯನ್ನೆದುರಿಸುತ್ತಿದ್ದು ಈ ಬಗ್ಗೆ ಕಾರ್ಮಿಕರ ಪರಿಹಾರಕ್ಕೆ ಜಿಲ್ಲಾಡಳಿತ ಮುಂದಾಗಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಆಗ್ರಹಿಸಿದೆ.

ದ.ಕ ಜಿಲ್ಲೆಯ ಮರಳು ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿ ಹಲವು ಸಂಘ ಸಂಸ್ಥೆಗಳು, ಕಟ್ಟಡ ಉದ್ದಿಮೆದಾರರಿಂದ ಹಿಡಿದು, ಲಾರಿ ಮಾಲಕರು, ಕಟ್ಟಡ ಕಾರ್ಮಿಕರು ಹಲವಾರು ಸಭೆ ಹಾಗು ಪ್ರತಿಭಟನೆಗಳನ್ನು ನಡೆಸಿದರೂ, ಈ ಮರಳಿನ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು  ಎಸ್.ಡಿ.ಪಿ.ಐ ಆರೋಪಿಸಿದೆ.

ಇತ್ತೀಚಿಗೆ ಜಿಲ್ಲಾಡಳಿತ ಮರಳು ಸಮಸ್ಯೆಯನ್ನು ಪರಿಹರಿಸಲು ಕಾಲ್ ಸೆಂಟರೊಂದನ್ನು ತೆರೆಯಿತು. ಆ ಮೂಲಕ ಮರಳು ಬಳಕೆದಾರರು ಸಮಸ್ಯೆ ಪರಿಹಾರವಾಯಿತೆಂದು ಭಾವಿಸಿದರು. ಆದರೆ ಆ ಯೋಜನೆ ಸಂಪೂರ್ಣವಾಗಿ ವಿಫಲಗೊಂಡು ಕಟ್ಟಡ ನಿರ್ಮಾಣ ಕ್ಷೇತ್ರ, ಮರಳು ಸಾಗಾಟಗಾರರು ಹಾಗು ಅದಕ್ಕೆ ಸಂಭಂದಿಸಿದ ಎಲ್ಲಾ ಜನರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಕೆಂಪು ಕಲ್ಲು, ಕಪ್ಪು ಕಲ್ಲು, ಜೆಲ್ಲಿ ಕಲ್ಲಿನ ಉತ್ಪಾದನಾ ಕೇಂದ್ರಕ್ಕೆ ಗಣಿ ಇಲಾಖೆ ದಿನಂಪ್ರತಿ ದಾಳಿ ಮಾಡಿದ ಪರಿಣಾಮ ಹಲವು ಉತ್ಪಾದನಾ ಕೇಂದ್ರವು ಸ್ಥಗಿತಗೊಂಡಿದೆ ಎಂದು ಎಸ್.ಡಿ.ಪಿ.ಐ ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ದ.ಕ ಜಿಲ್ಲಾಡಳಿತ ಇತ್ತೀಚೆಗೆ ನೂತನವಾಗಿ ಮರಳು ಸಮಸ್ಯೆ ಬಗೆಹರಿಸಲು ಅವೈಜ್ಞಾನಿಕ ರೀತಿಯಲ್ಲಿ ಮತ್ತೊಂದು ಯೋಜನೆ ತಂದಿದೆ. ಅದುವೇ ಸ್ಯಾಂಡ್ ಬಜಾರ್ ಎಂಬ ಮೊಬೈಲ್ ಅಪ್ಲಿಕೇಶನ್. ಈ ಆಪ್ ಮುಖೇನ ಮರಳನ್ನು ಬುಕ್ ಮಾಡಬೇಕು, ಅಲ್ಲಿಂದ ಡೆಲಿವರಿ ಸ್ಥಳದ ಸಮೀಪದ ಯಾವ ಮರಳು ದಿಬ್ಬದಲ್ಲಿ ಮರಳಿದೆ ಎಂದು ಗುರುತಿಸಿ, ಅದರ ಬಗ್ಗೆ ಮಾಹಿತಿ ಕೊಟ್ಟು, ಆ ದರವನ್ನು ಪಾವತಿ ಮಾಡಿದ ನಂತರ ಮರಳನ್ನು ತಲುಪಿಸಲು ಅಲ್ಲಿಂದ ಮರಳು ಸಾಗಾಟ ಲಾರಿ ಮಾಲಕ/ಚಾಲಕರಿಗೆ ಸಂದೇಶ ರವಾನೆಯಾಗಿ, ಮರಳು ಸಾಗಾಟ ನಡೆಸುವುದು.

ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲು ಇಚ್ಚಿಸುವುದೇನೆಂದರೆ ಮರಳಿನ ಬಹುತೇಕ ವ್ಯವಹಾರ ಕ್ರೆಡಿಟ್ ಮೇಲೆ ನಡೆಯುವಂತದ್ದು. ಮರಳನ್ನು ಉಪಯೋಗಿಸುವ ಕೆಲವು ಬಳಕೆದಾರರು ಮರಳು ಉದ್ದಿಮೆದಾರರಿಗೆ ವಾರಕ್ಕೊಮ್ಮೆ ಹಣ ಪಾವತಿ ಮಾಡಿದರೆ, ಇನ್ನೂ ಕೆಲವರು ಹದಿನೈದು ದಿವಸಕ್ಕೊಮ್ಮೆ, ಮತ್ತೆ ಇನ್ನೂ ಕೆಲವರು ತಿಂಗಳಿಗೊಮ್ಮೆ ಪಾವತಿ ಮಾಡುತ್ತಾರೆ. ಡೈಲಿ ಪಾವತಿ ನಡೆಸುವವರು ತೀರಾ ವಿರಳ. ಮನೆ ಕಟ್ಟುವ ಬಡ ಕುಟುಂಬಗಳು ತಮ್ಮ ತಿಂಗಳ ಆದಾಯವನ್ನು ಒಟ್ಟುಗೂಡಿಸಿ ಮರಳಿನ ಹಣವನ್ನು ಪಾವತಿಸುವವರಿದ್ದಾರೆ, ಇಂಥವರಿಗೆ ಈ ಆಫ್ ಮೂಲಕ ಮರಳು ಪಡೆಯಲು ಬಹಳ ಅನಾನುಕೂಲವಾಗುತ್ತದೆ. ದೊಡ್ಡ ಕಟ್ಟಡ ನಿರ್ಮಾಣದಾರರದ್ದು ಇನ್ನೊಂದು ಸಮಸ್ಯೆ. ಹಾಗಿದ್ದೂ ಆಪ್ ಮೂಲಕ ಮರಳು ಪಡೆಯಲು ಆರ್ಡರ್ ಮಾಡಿ ಬ್ಯಾಂಕ್ ಮೂಲಕ ಮರಳು ದರವನ್ನು ಮೊದಲೇ ಪಾವತಿಸಿ ಮರಳು ಪಡೆಯಬೇಕೆಂಬ ತಮ್ಮ ಈ ನೀತಿ ಅಸಮಂಜಸ ಮಾತ್ರವಲ್ಲ ಅವೈಜ್ಞಾನಿಕವೂ ಆಗಿದೆ. ಕೆಂಪು ಕಲ್ಲು, ಕಪ್ಪು ಕಲ್ಲು, ಜೆಲ್ಲಿ ಕಲ್ಲುಗಳ ಉತ್ಪಾದನಾ ಕೇಂದ್ರಗಳ ಮೇಲೆ ನಡೆಯುವ ದಾಳಿಗಳಿಂದ ವ್ಯಾಪಾರ ನಡೆಸಿ ಜೀವನ ಸಾಗಿಸುವ ಜನಸಾಮಾನ್ಯರ ಜೀವನೋಪಾಯಕ್ಕೆ ದುಸ್ತರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಸ್.ಡಿ.ಪಿ.ಐ ಹೇಳಿದೆ.

ಆದ್ದರಿಂದ ಈ ಹಿಂದೆ ಇದ್ದಂತಹ ಪರ್ಮಿಟ್ ಸಹಿತ ಸಾಂಪ್ರದಾಯಿಕ ಮರಳು ನೀತಿಗೆ ಅವಕಾಶ ಕೊಡಬೇಕು. ಹೊರ ಜಿಲ್ಲೆಗೆ ಸಾಗಿಸುವ ಮರಳಿನ ವ್ಯಾಪಾರದ ಮರಳು ಮಾಫಿಯಾಗೆ ಕಡಿವಾಣ ಹಾಕಬೇಕು. ದಕ್ಷಿನ ಕನ್ನಡ ಜಿಲ್ಲೆಯ ಸಂಪತ್ತಾಗಿರುವ ಮರಳು, ಕೆಂಪು ಕಲ್ಲು, ಕಪ್ಪು ಕಲ್ಲು, ಜೆಲ್ಲಿ ಕಲ್ಲುಗಳನ್ನು ಯಥಾವತ್ತಾಗಿ ಮುಂದುವರಿಯಲು ಅವಕಾಶ ನೀಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್ ಮಾನ್ಯ ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರಲ್ಲಿ ಆಗ್ರಹಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group