ರಾಜ್ಯ ಸುದ್ದಿ

ನರೆಂದ್ರ ದಾಭೋಲ್ಕರ್ ಹತ್ಯೆಗೆ ಉಗ್ರರು ಬಳಸಿದ್ದು ಬೆಳಗಾವಿಯಿಂದ ಕದ್ದಿದ್ದ ಬೈಕ್!

‘ಶಿವಾಜಿ ಉದ್ಯಾನದಲ್ಲಿ ಸಂಚು ರೂಪಿಸಿದ್ದ ಆರೋಪಿಗಳು, ಧರ್ಮದ ವಿರುದ್ಧ ಮಾತನಾಡುವವರನ್ನು ಮುಗಿಸಲು ಶಪಥ ಮಾಡಿದ್ದರು’

‘ವ್ಯವಸ್ಥಿತ ಸಂಚು ರೂಪಿಸಿ ಗೋವಿಂದ್ ಪಾನ್ಸರೆ, ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಯನ್ನು ಹತ್ಯೆ ಮಾಡಿದ್ದಾರೆ’

ವರದಿಗಾರ (ಜೂನ್.13): ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆ ಮಾಡಲು ಉಗ್ರರು ಬಳಸಿದ್ದು ಬೆಳಗಾವಿಯಿಂದ ಕದ್ದಿದ್ದ ಬೈಕ್ ಎನ್ನುವ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ. ಹಿರಿಯ ಸಂಶೋಧಕ ಧಾರವಾಡದ ಎಂ.ಎಂ.ಕಲಬುರ್ಗಿ ಹತ್ಯೆಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಬಂಧಿಸಿರುವ ಮಹಾರಾಷ್ಟ್ರದ ವಾಸುದೇವ ಸೂರ್ಯವಂಶಿ ಅಲಿಯಾಸ್ ಮೆಕ್ಯಾನಿಕ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಆರೋಪಿಗಳಾದ ಮಹಾರಾಷ್ಟ್ರದ ಅಮೋಲ್ ಕಾಳೆ, ವಾಸುದೇವ, ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ ಹಾಗೂ ಬೆಳಗಾವಿಯ ಪ್ರವೀಣ್ ಪ್ರಕಾಶ್ ಚತುರ್‌ನನ್ನು ಕಲಬುರ್ಗಿ ಹತ್ಯೆ ಪ್ರಕರಣದಲ್ಲೂ  ಈಗಾಗಲೇ ಬಂಧಿಸಲಾಗಿದೆ. ಆರೋಪಿಗಳ ವಿಚಾರಣೆ ನಡೆಸಿ ಹೇಳಿಕೆ ಪಡೆದಿರುವ ಅಧಿಕಾರಿಗಳು, ಅವುಗಳ ಪರಿಶೀಲನೆ ನಡೆಸುತ್ತಿದ್ದಾರೆ.

‘ಬೈಕ್ ಲಾಕ್ ತೆಗೆಯುವುದರಲ್ಲಿ ಮೆಕ್ಯಾನಿಕ್ ನಿಪುಣನಾಗಿದ್ದಾನೆ. ಹೀಗಾಗಿಯೇ ಆತನಿಗೆ ಬೈಕ್ ಕಳವು ಮಾಡುವ ಜವಾಬ್ದಾರಿ ನೀಡಲಾಗಿತ್ತು. ಬೆಳಗಾವಿಯಲ್ಲಿ ಬೈಕ್‌ ಕದ್ದರೂ ಆತನ ಬಗ್ಗೆ ಸ್ಥಳೀಯ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿಯೇ ಆತ ಹುಬ್ಬಳ್ಳಿ ಹಾಗೂ ದಾವಣಗೆರೆಯಲ್ಲೂ ಬೈಕ್ ಕದ್ದಿದ್ದ. ಆ ಎರಡೂ ಬೈಕ್‌ಗಳನ್ನು ಆರೋಪಿಗಳು ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಮೂಢನಂಬಿಕೆ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದ ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿಗಳು, ಬೈಕ್ ಬೇಕೆಂದು ಮೆಕ್ಯಾನಿಕ್‌ಗೆ ಹೇಳಿದ್ದರು. 2013ರ ಜನವರಿಯಲ್ಲಿ ಬೆಳಗಾವಿಗೆ ಬಂದಿದ್ದ ಮೆಕ್ಯಾನಿಕ್, ಬೈಕೊಂದನ್ನು ಕದ್ದುಕೊಂಡು ಹೋಗಿದ್ದ’ ಎಂದು ಎಸ್‌ಐಟಿ ಅಧಿಕಾರಿ ತಿಳಿಸಿದ್ದಾರೆ. ‘ಆರೋಪಿ ಕದ್ದಿದ್ದ ಮೊದಲ ಬೈಕ್ ಇದು. ಅದೇ ಬೈಕ್‌ನಲ್ಲಿ ಹೋಗಿ ದುಷ್ಕರ್ಮಿಗಳಿಬ್ಬರು 2013ರ ಆಗಸ್ಟ್ 20ರಂದು ದಾಭೋಲ್ಕರ್ ಅವರನ್ನು ಹತ್ಯೆ ಮಾಡಿದ್ದರು. ಆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅದು ಆರೋಪಿಗಳಿಗೆ ಅನುಕೂಲ ಮಾಡಿಕೊಟ್ಟಿತ್ತು. ಹೀಗಾಗಿ ಆರೋಪಿಗಳು, ವ್ಯವಸ್ಥಿತ ಸಂಚು ರೂಪಿಸಿ ಗೋವಿಂದ್ ಪಾನ್ಸರೆ, ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಅವರನ್ನೂ ಹತ್ಯೆ ಮಾಡಿದರು’ ಎಂದು ವಿವರಿಸಿದರು.

‘ದಾಭೋಲ್ಕರ್ ಹಾಗೂ ಪಾನ್ಸರೆ ಹತ್ಯೆ ಬಳಿಕ ಕಲಬುರ್ಗಿ ಹತ್ಯೆಗೆ ಸಂಚು ರೂಪಿಸಿದ್ದು ಅಮೋಲ್ ಕಾಳೆ. ರಾಜ್ಯದ ಯುವಕರಿಂದಲೇ ಹತ್ಯೆ ಮಾಡಿಸಲು ಯೋಚಿಸಿದ್ದ ಆತ, ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಹಾಗೂ ಪ್ರವೀಣ್ ಚತುರ್‌ನನ್ನು ಸಂಪರ್ಕಿಸಿದ್ದ. ಬೆಳಗಾವಿಯ ಶಿವಾಜಿ ಉದ್ಯಾನದಲ್ಲಿ ಆರೋಪಿಗಳೆಲ್ಲರೂ ಸೇರಿ ಸಂಚು ರೂಪಿಸಿದ್ದರು. ಧರ್ಮದ ವಿರುದ್ಧ ಮಾತನಾಡುವವರನ್ನು ಮುಗಿಸಲು ಶಪಥ ಮಾಡಿದ್ದರು’ ಎಂದು ಎಸ್‌ಐಟಿ ಅಧಿಕಾರಿ ತಿಳಿಸಿದರು. ‘ಇತ್ತೀಚೆಗೆ ಬಂಧಿಸಿದ್ದ ಪ್ರವೀಣ್‌ ಚತುರನನ್ನು ಶಿವಾಜಿ ಉದ್ಯಾನಕ್ಕೆ ಕರೆದೊಯ್ದು ಮಹಜರು ನಡೆಸಲಾಗಿದೆ. ಅಲ್ಲಿ ಚರ್ಚಿಸಿದ ವಿಷಯಗಳನ್ನೆಲ್ಲ ಆತ ಬಾಯ್ಬಿಟ್ಟಿದ್ದಾನೆ’ ಎಂದು ಮೂಲಗಳು ವರದಿ ಮಾಡಿವೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group