ನಿಮ್ಮ ಬರಹ

ಶಾಲೆಗೆ ಕಳಿಸಬೇಕಾದ ಮಕ್ಕಳನ್ನು ಗೋರಿಯೊಳಗೆ ಇಳಿಸಿದ ತಂದೆಯೊಬ್ಬನ ಮೌನ ರೋದನ…!

ವರದಿಗಾರ (ಜೂ.12): “ಎಲ್ಲರೂ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಬಿಟ್ಟು ಬರುತ್ತಿರುವ ಈ ಹೊತ್ತಲ್ಲಿ ನನ್ನ ವಿಧಿಯೇ… ನಾನು ನನ್ನ ಮಕ್ಕಳನ್ನು ಕಬರಿನೊಳಗೆ ಬಿಟ್ಟು ಬರುತ್ತಿದ್ದೇನೆ…” ಎಂದು ತನ್ನೊಳಗೆ ಆಡಿಕೊಳ್ಳುತ್ತಾ ತನ್ನ 2 ವರ್ಷದ ಕಂದಮ್ಮನನ್ನು ಗೋರಿಯೊಳಗೆ  ಏಕಾಂಗಿಯಾಗಿ ಇಳಿಸುತ್ತಿದ್ದ ಸರ್ದಾರ್ ಫಝಲ್ ಅಹ್ಮದ್ ನನ್ನು ಸಮಾಧಾನಿಸಲು ಅಲ್ಲಿ ಯಾರೂ ಉಳಿದಿರಲಿಲ್ಲ. 2019ರ ಮೇ 18ರಂದು ಒಮಾನ್ ನ ವಾದಿ ಬನಿ ಖಾಲಿದ್ ನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಸರ್ದಾರ್ ನ ಇಡೀ ಕುಟುಂಬವೇ ತನ್ನ ಕಣ್ಣೆದುರೇ ಕೊಚ್ಚಿ ಹೋಗಿತ್ತು. ಮರುದಿನ ಊರಿಗೆ ಹಿಂತಿರುಗಲಿರುವ ತಂದೆ ತಾಯಿಯನ್ನು ಸುತ್ತಾಡಿಸಲೆಂದು ಕಾರಿನಲ್ಲಿ ವಾದಿ (ನೀರಿನ ತೊರೆ) ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ ಸರ್ದಾರ್,  ಪವಾಡ ಸದೃಶವಾಗಿ ಪಾರಾಗಿ ಬಂದಿದ್ದರೂ ಅಪ್ಪ, ಅಮ್ಮ, ಪತ್ನಿ ಮತ್ತು ಮೂವರು ಮಕ್ಕಳನ್ನು ಕಳೆದುಕೊಂಡಿದ್ದ. ನೀರಿನಲ್ಲಿ ಕೊಚ್ಚಿ ಹೋಗಿದ್ದ ಪೈಕಿ ಮೇ 9 ರಂದು ಪತ್ತೆಯಾದದ್ದು ಬಾಕಿ ಉಳಿದಿದ್ದ ಕೊನೆಯ ಮೃತದೇಹವಾಗಿತ್ತು. ಅದು ತನ್ನ ಎರಡು ವರ್ಷದ ಮಗು ಝೈದ್ ನದ್ದು. ದುರಂತ ನಡೆದ ಸ್ಥಳಕ್ಕಿಂತ ಸುಮಾರು  ಕಿ. ಮೀ. ದೂರದಲ್ಲಿ ಮಾಂಸದ ಕೆಲವು ಚೂರುಗಳಂತಿದ್ದ ಮಗುವಿನ ಮೃತದೇಹವನ್ನು ಎರಡು ಕೈಯಲ್ಲಿ ಎತ್ತಿಕೊಂಡು ಮಸ್ಕತ್ ನ ಅಮರಾತ್ ದಫನ ಭೂಮಿಯಲ್ಲಿ ಇಳಿಸುವಾಗ ಸರ್ದಾರ್ ಆಗಾಗ ಹೇಳಿಕೊಳ್ಳುತ್ತಿದ್ದ…. “ಸ್ವರ್ಗಕ್ಕೆ ಕಳುಹಿಸಿ ಕೊಡುತ್ತಿದ್ದೇನೆ ಮಗನೇ..” . ಆತನನ್ನು ಸಮಾಧಾನಿಸಲು ತನ್ನವರೆಂದು ಮತ್ಯಾರೂ ಅಲ್ಲಿ ಉಳಿದಿರಲಿಲ್ಲ. ವಾರದ ಹಿಂದೆಯಷ್ಟೇ ದಫನ ಮಾಡಿದ್ದ ಅಪ್ಪ, ಅಮ್ಮ, ಪತ್ನಿ, ಇಬ್ಬರು ಕಂದಮ್ಮಗಳ ಕಬರಿನ ಪಕ್ಕದಲ್ಲೇ 2 ವರ್ಷದ ಮಗನ ದೇಹವನ್ನು ಇಟ್ಟು ಮಯ್ಯತ್  ನಮಾಝ್ (ಮೃತದೇಹದ ಎದುರಿನ ಅಂತಿಮ ಪ್ರಾರ್ಥನಾ ನಮಾಝ್) ನಿರ್ವಹಿಸುವಾಗಲೂ ಸರ್ದಾರ್ ನ ಸಬರ್ (ತಾಳ್ಮೆ) ಕಟ್ಟೆಯೊಡೆಯಲಿಲ್ಲ.

“ಎಲ್ಲರೂ ಹೊರಟು ಹೋದರು.  ಸೃಷ್ಟಿಕರ್ತ ನನ್ನನ್ನು ಯಾಕೆ ಉಳಿಸಿದ? ನನ್ನ ಸಮಯ ಯಾವಾಗ ಬರುತ್ತದೋ? ಹೋಗಲಿ, ಅವರಾದರೂ ಸ್ವರ್ಗ ಸೇರಿದರಲ್ಲಾ…” ಕಬರಸ್ಥಾನದ ಬಳಿ ತನ್ನೊಂದಿಗಿದ್ದ ನಾಲ್ಕೈದು ಮಂದಿಯಲ್ಲಿ ಸರ್ದಾರ್ ಫಾಝಿಲ್ ಅಹ್ಮದ್ ಆಡಿಕೊಳ್ಳುತ್ತಿದ್ದ ಮಾತುಗಳಿವು.

ಮೇ 18ರಂದು ವಾದಿಯಲ್ಲಿ ಹಠಾತ್ ಉದ್ಭವಿಸಿದ ಪ್ರವಾಹ  ರಸ್ತೆಯಲ್ಲಿದ್ದ ಇವರ ಕಾರನ್ನು ಎಳೆದುಕೊಂಡು ಹೋಗಿತ್ತು. ನೀರಿನಲ್ಲಿ ಕೊಚ್ಚಿ ಹೋದ ಸರ್ದಾರ್ ಮಾತ್ರ ಮರವೊಂದನ್ನು ಬಿಗಿಯಾಗಿ ಹಿಡಿದುಕೊಂಡು ದಡ ಸೇರಿದ್ದ. ಉಳಿದವರೆಲ್ಲರೂ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ಪೈಕಿ ಮೇ 21ರಂದು ಮೊದಲ ಮೃತದೇಹ ಪತ್ತೆಯಾಗಿತ್ತು. ಅದು ತಾಯಿ ಶಬನಾ ಬೇಗಮ್ ರ ಮೃತದೇಹ. ಮೇ 22ರಂದು ಪತ್ತೆಯಾದದ್ದು ಪತ್ನಿ ಆರ್ಷಿ ಖಾನ್ ರ ಮೃತದೇಹ. ಮೇ 23ರಂದು ಪತ್ತೆಯಾದದ್ದು ತಂದೆ ಖೈರುಲ್ಲಾ ಸತ್ತಾರ್ ಮತ್ತು ನಾಲ್ಕು ವರ್ಷದ ಮಗಳು ಸಿದ್ರಾ ಖಾನ್ ರದ್ದಾಗಿತ್ತು. ಮತ್ತೆ ಮೇ 29ರಂದು ಸುಮಾರು 60 ಕಿ. ಮೀ.  ದೂರದಲ್ಲಿ ಛಿದ್ರವಾಗಿದ್ದ ಮಾಂಸದ ತುಂಡುಗಳು ಪತ್ತೆಯಾದವು. ಡಿಎನ್ ಎ ಪರೀಕ್ಷೆಯಲ್ಲಿ ಅದು 28 ದಿನಗಳ ಹಸುಗೂಸು ನೂಹ್ ಖಾನ್ ನದ್ದು ಎಂದು ದೃಢಪಟ್ಟಿತ್ತು. ಅದನ್ನೂ ದಫನ ಮಾಡುವಾಗಲೂ ಸರ್ದಾರ್ ತನ್ನೊಳಗೆ ಆಳವಾಗಿ ಅಳುತ್ತಿದ್ದ. ಪ್ರವಾಹದಂತೆ ಉಕ್ಕಿ ಹರಿಯಬೇಕಾಗಿದ್ದ ಕಣ್ಣೀರನ್ನು ತಡೆಹಿಡಿಯಲು ತನ್ನೊಳಗೆ ಏನೇನೋ ಹೇಳಿಕೊಳ್ಳುತ್ತಿದ್ದ. ಸೃಷ್ಟಿಕರ್ತನ ಮೇಲಿನ ದೃಢವಿಶ್ವಾಸ ಆತನನ್ನು ಗಟ್ಟಿಗೊಳಿಸಿತ್ತು.

ದುರಂತ ಸಂಭವಿಸಿ 15 ದಿನಗಳ ಬಳಿಕ ಕೊನೆಯ ಮೃತದೇಹ ಪತ್ತೆಯಾಗಿತ್ತು. ಅದು 2 ವರ್ಷದ ಪುಟ್ಟ ಮಗು ಝೈದ್ ನದ್ದು. ಈಗಷ್ಟೇ ಆಟವಾಡಿ ಮಲಗಿದ ಮಗುವನ್ನು ಎತ್ತಿಕೊಂಡು ಬರುವ ರೀತಿಯಲ್ಲಿ ಕಬರಸ್ಥಾನದ ಬಳಿಗೆ ಬಂದ ಸರ್ದಾರ್ ನನ್ನು ತದೇಕ ಚಿತ್ತದಿಂದ ನೋಡುತ್ತಿದ್ದೆ. ಕಣ್ಣು ಕೆಂಪಾಗಿದ್ದು ಬಿಟ್ಟರೆ ಒಂದಿನಿತೂ ಹನಿಗಳಿಲ್ಲ. ಗಟ್ಟಿ ಮನಸ್ಸಿನಿಂದ ನಿದ್ರಿಸಲು ಜೋಳಿಗೆಗೆ ಇಳಿಸಿದಂತೆ ಮಗುವಿನ ಮೃತದೇಹವನ್ನು ಕಬರಿನೊಳಗೆ ಇಳಿಸಿದ. ಎಲ್ಲರೂ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಿರುವ ಸಮಯವಿದು. ನಾನು ನಿಮ್ಮೆಲ್ಲರನ್ನು ಕಬರಸ್ಥಾನದಲ್ಲಿ ಬಿಟ್ಟು ಹೋಗುತ್ತಿದ್ದೇನೆ. ಸ್ವರ್ಗದಲ್ಲಿ ಸಿಗೋಣ… ಎಲ್ಲರನ್ನೂ ಕಳೆದುಕೊಂಡ ಸರ್ದಾರ್ ಹಾಡುತ್ತಿದ್ದ ಜೋಗುಳವಾಗಿತ್ತು. ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದ. ಅಲ್ಲಾಹನ ವಿಧಿ ಎನ್ನುತ್ತಿದ್ದ. ಆಕಾಶ ದಿಟ್ಟಿಸುತ್ತಿದ್ದ. ಕಣ್ಣೀರು ತೊಟ್ಟಿಕ್ಕದೇ ಈ ಪರಿಯಾಗಿ ಒಳಗೊಳಗೆ ಅಳುತ್ತಿದ್ದ ಸರ್ದಾರ್ ಫಾಝಿಲ್ ಅಹ್ಮದ್ ನನ್ನು ಕಂಡು ನನ್ನ ಕಣ್ಣುಗಳು ಒದ್ದೆಯಾದವು. ಆರು ಮಂದಿಯ ಗೋರಿಯನ್ನು ಹಾಗೆಯೇ ದಿಟ್ಟಿಸುತ್ತಾ… “ಸೃಷ್ಟಿಕರ್ತನೇ ನನ್ನ ಸಮಯ ಯಾವಾಗ….?” ಎಂದು ಕೇಳುತ್ತಿದ್ದ ಸರ್ದಾರ್ ನ ಪ್ರಶ್ನೆಯಲ್ಲಿ ನಮಗಂತೂ ಜೀವನ ಪಾಠವಿದೆ.

✍ ಫಯಾಝ್ ಎನ್

ಹಠಾತ್ ಪ್ರವಾಹದ ಒಂದು ದೃಶ್ಯ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group