ರಾಷ್ಟ್ರೀಯ ಸುದ್ದಿ

ಮೋದಿ ಮತ್ತೆ ಅಧಿಕಾರಕ್ಕೆ ಬರಲು ವಿರೋಧ ಪಕ್ಷಗಳೇ ಕಾರಣ: ಎಸ್‍ಡಿಪಿಐ

ವರದಿಗಾರ (ಮೇ 24,19): ಐದು ವರ್ಷಗಳ ಫ್ಯಾಶಿಷ್ಟ್ ದುರಾಡಳಿತದ ಹೊರತಾಗಿಯೂ ಮೋದಿ ನೇತೃತ್ವದ ಮೈತ್ರಿ ಕೂಟ ಅಧಿಕಾರಕ್ಕೆ ಬಂದಿರುವುದಕ್ಕೆ ವಿರೋಧ ಪಕ್ಷಗಳೇ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಎಸ್‍ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಚುನಾವಣೆ ನಂತರ ಸ್ಟ್ರಾಂಗ್ ರೂಮ್‍ಗಳಿಂದ ವಿದ್ಯುನ್ಮಾನ ಮತಯಂತ್ರಗಳು ಹೊರಬಂದ ಕಾರಣಗಳು ಈಗ ಸ್ಪಷ್ಟವಾಗಿವೆ. ಕಳೆದ ಬಾರಿಯ ಚುನಾವಣೆಯಲ್ಲಿಯೂ ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಕ್ರಮ ನಡೆಸಿಯೇ ಎನ್‍ಡಿಎ ಅಧಿಕಾರಕ್ಕೆ ಬಂದಿದೆ ಎಂಬುದು ಸಾಕ್ಷ್ಯ ಸಮೇತ ಬಹಿರಂಗವಾಗಿದೆ. ಈ ಚುನಾವಣೆಯಲ್ಲಿ ಇಂತಹ ಕೃತ್ಯ ನಡೆಯದಂತೆ ಚುನಾವಣಾ ಆಯೋಗದ ಮೇಲೆ ಒತ್ತಡ ತಂದು ಅದನ್ನು ನಿಲ್ಲಿಸುವಂತೆ ಮಾಡುವಲ್ಲಿ ವಿರೋಧ ಪಕ್ಷಗಳು ವಿಫಲವಾಗಿವೆ. ವಿರೋಧ ಪಕ್ಷಗಳು ಚುನಾವಣೆ ಘೋಷಣೆಯಾದ ಬಳಿಕವಷ್ಟೇ ಎಚ್ಚೆತ್ತುಕೊಂಡು ಈ ಬಗ್ಗೆ ಧ್ವನಿ ಎತ್ತಿತು ಮತ್ತು ಬಿಜೆಪಿ ವಿರೋಧಿಗಳ ಬೃಹತ್ ಒಕ್ಕೂಟವನ್ನು ರಚಿಸಲು ಕೂಡ ವಿಫಲವಾಯಿತು. ಯುಪಿಎ ನಿನ್ನೆಯಷ್ಟೇ “ಜಾತ್ಯತೀತ ಪ್ರಜಾಪ್ರಭುತ್ವ ರಂಗ” ರಚಿಸುವ ಬಗ್ಗೆ ಇತರ ಪಕ್ಷಗಳೊಂದಿಗೆ ಮಾತುಕತೆ ಆರಂಭಿಸಿತು.

ಕಳೆದ ಹಲವು ವರ್ಷಗಳಿಂದ ವಿರೋಧ ಪಕ್ಷಗಳು ಇದೇ ರೀತಿಯ ಕಾರ್ಯಶೈಲಿಯನ್ನು ಅನುಸರಿಸಿಕೊಂಡು ಬರುತ್ತಿವೆ. ದೇಶದಲ್ಲಿ ವ್ಯಾಪಾರಿಗಳು, ರೈತರು ಮತ್ತು ಕಾರ್ಮಿಕರಿಗೆ ಭಾರೀ ನಷ್ಟ ಉಂಟು ಮಾಡಿದ ನೋಟು ಅಮಾನ್ಯೀಕರಣ, ದೊಡ್ಡ ಮೊತ್ತದ ಕಪ್ಪು ಹಣವನ್ನು ಬಿಜೆಪಿಗೆ ಒಟ್ಟುಗೂಡಿಸಲು ಮಾಡಿದ ಒಂದು ತಂತ್ರ ಎಂಬುದು ಸಾಬೀತಾಗಿದೆ. ನೋಟು ನಿಷೇಧದ ವಿರುದ್ಧ ವಿರೋಧ ಪಕ್ಷ ಒಂದೇ ಒಂದು ಬೃಹತ್ ಪ್ರತಿಭಟನೆಯನ್ನೂ ಮಾಡಿಲ್ಲ. ಜಿಎಸ್ಟಿ ಜಾರಿ ಸಂದರ್ಭದಲ್ಲೂ ವಿರೋಧ ಪಕ್ಷಗಳು ಇದೇ ರೀತಿಯ ನಿರ್ಲಕ್ಷ್ಯತೆಯನ್ನು ಮುಂದುವರಿಸಿತು ಎಂದು ಫೈಝಿ ವಿರೋಧ ಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ದನ ಮತ್ತು ದನದ ಮಾಂಸದ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ನಡೆದ ಗುಂಪು ಹತ್ಯೆಯ ಸಂದರ್ಭದಲ್ಲಿ ಹೆಚ್ಚಿನ ವಿರೋಧ ಪಕ್ಷಗಳು ಮೌನಕ್ಕೆ ಶರಣಾಗಿದ್ದವು. ಈ ಬಗ್ಗೆ ಧ್ವನಿ ಎತ್ತಿದರೆ ಹಿಂದೂ ಮತಗಳು ದೂರವಾಗಬಹುದು ಎಂದು ಅವು ಭಾವಿಸಿದವು. ಈ ರೀತಿಯ ಮೌನವಹಿಸುವಿಕೆಯೊಂದಿಗೆ ಅವರು ತಮ್ಮ ಬಾವಿಯನ್ನು ತಾವೇ ತೋಡಿಕೊಂಡರು ಎಂದು ಫೈಝಿ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಭಾರೀ ಹಿನ್ನಡೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕರ ಕಣ್ಣುಗಳನ್ನು ತೆರೆಸುವಂತೆ ಮಾಡುತ್ತದೆ ಎಂದು ಫೈಝಿ ಆಶಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮುಂತಾದ ನಾಯಕರು ಬಿಜೆಪಿಯನ್ನು ಸೋಲಿಸಲು ನಿಜವಾಗಿಯೂ ಬಯಸಿದ್ದರೆ, ಪಕ್ಷವು ಇಷ್ಟು ಕಳಪೆ ಮಟ್ಟದಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂದು ಫೈಝಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಭಜಕ ಶಕ್ತಿಗಳ ವಿರುದ್ಧ ಹೋರಾಡುವ ಮತ್ತು ಅವುಗಳನ್ನು ಸೋಲಿಸುವ ಸಂಪ್ರದಾಯವನ್ನು ಭಾರತೀಯ ಸಮಾಜ ಹೊಂದಿದೆ. ಇತಿಹಾಸದುದ್ದಕ್ಕೂ ಫ್ಯಾಸಿಸಮ್ ಮತ್ತು ಪಂಥೀಯತೆಯನ್ನು ಸೋಲಿಸಿದ ಹಲವು ಉದಾಹರಣೆಗಳು ಕಾಣಸಿಗುತ್ತವೆ. ಸಂಘ ಪರಿವಾರದ ಫ್ಯಾಸಿಸಮ್ ಅನ್ನು ಎದುರಿಸಲು ಭಾರತವು ಸಮರ್ಥವಾಗಿದೆ. ಜನರು ತಮ್ಮ ಶಕ್ತಿಯನ್ನು ಅರಿಯಬೇಕು ಮತ್ತು ಫ್ಯಾಶಿಷ್ಟ್ ಶಕ್ತಿಗಳ ವಿರುದ್ಧ ಹೋರಾಡಲು ಮುಂದೆ ಬರಬೇಕು ಎಂದು ಫೈಝಿ ಕರೆ ನೀಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group