ರಾಷ್ಟ್ರೀಯ ಸುದ್ದಿ

ಕುರ್ಚಿಯಲ್ಲಿ ಕುಳಿತು ಊಟ ಮಾಡಿದಕ್ಕೆ ದಲಿತ ಯುವಕನ ಥಳಿಸಿ ಹತ್ಯೆ!

ವರದಿಗಾರ (ಮೇ.6): ಮದುವೆ ಕಾರ್ಯಕ್ರಮದಲ್ಲಿ ಮೇಲ್ಜಾತಿಯವರ ಮುಂದೆ ಕುರ್ಚಿಯಲ್ಲಿ ಕುಳಿತು ಊಟ ಮಾಡಿದ ಎಂಬ ಏಕೈಕ ಕಾರಣಕ್ಕೆ 21ರ ಹರೆಯದ ದಲಿತ ಯುವಕನನ್ನು ಥಳಿಸಿ ಭೀಭತ್ಸಕ ರೀತಿಯಲ್ಲಿ ಹತ್ಯೆ ಮಾಡಿರುವ ಘಟನೆಯು ಉತ್ತರಾಖಂಡದ ತೆಹ್ರಿ ಗಡ್ವಲ್ ಜಿಲ್ಲೆಯ ಶ್ರೀಕೊಟ ಎಂಬ ಪ್ರದೇಶದಲ್ಲಿ ನಡೆದಿದೆ ಎಂದು ಮೂಲಗಳು ವರದಿ ಮಾಡಿವೆ.

ಮೂಲ ವರದಿಗಳ ಪ್ರಕಾರ, ಎಪ್ರಿಲ್ 26ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮರುದಿನ ಯುವಕ ಅನಾರೋಗ್ಯಕ್ಕೀಡಾದಾಗ ಆತನನ್ನು ಡೆಹ್ರಾಡೂನ್‌ನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆಫಲಕಾರಿಯಾಗದೆ ಯುವಕ ರವಿವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾನೆ. ಮೃತನನ್ನು ತೆಹ್ರಿ ಗಡ್ವಲ್‌ನ ಬಾಸನ್ ಗ್ರಾಮದ ಜಿತೇಂದ್ರ ದಾಸ್ ಎಂದು ಗುರುತಿಸಲಾಗಿದೆ.

ಅದೇ ಪ್ರದೇಶಕ್ಕೆ ಸೇರಿದ ಏಳು ಆರೋಪಿಗಳ ವಿರುದ್ಧ ಎಪ್ರಿಲ್ 29ರಂದು ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಘಟನೆ ನಡೆದ ರಾತ್ರಿ ದಾಸ್ ಸೇರಿದಂತೆ ಮನೆಮಂದಿಯೆಲ್ಲ ದೂರದ ಸಂಬಂಧಿಯ ವಿವಾಹ ಸಮಾರಂಭಕ್ಕೆ ತೆರಳಿದ್ದರು. ಮನೆಯ ಉಳಿದ ಸದಸ್ಯರು ಒಂದು ಕಡೆ ಸೇರಿದ್ದಾಗ ಜಿತೇಂದ್ರ ದಾಸ್ ಮಾತ್ರ ಊಟ ಮಾಡಲು ತೆರಳಿದ್ದ. ನಾವೆಲ್ಲ ಊಟದ ಬಳಿಕ ಪ್ರತ್ಯೇಕವಾಗಿ ಮನೆಗೆ ವಾಪಸಾಗಿದ್ದೆವು. ಘಟನೆಯ ಬಗ್ಗೆ ನಮಗೆ ಮರುದಿನ ಬೆಳಗ್ಗೆಯಷ್ಟೇ ತಿಳಿಯಿತು. ದಾಸ್ ಮರುದಿನ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಆತನ ತಾಯಿ ಗಮನಿಸಿ ನಂತರ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ದಾಸ್‌ನ ಚಿಕ್ಕಪ್ಪ ಏಲಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮದುವೆ ಸಮಾರಂಭದಲ್ಲಿ ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ ದಾಸ್‌ನ ಗೆಳೆಯ, ತಾನು ಹಲ್ಲೆಕೋರರಿಂದ ಆತನನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರು ದಾಸ್‌ಗೆ ದಾರಿಯುದ್ದಕ್ಕೂ ಹಲ್ಲೆ ನಡೆಸಿದ್ದರು ಎಂದು ಹೇಳಿಕೆ ನೀಡಿದ್ದಾನೆ. ಈ ಹೇಳಿಕೆಯನ್ನು ದೃಢಪಡಿಸಿರುವ ದಾಸ್‌ನ ಸೋದರ ಸಂಬಂಧಿ, ಹಲ್ಲೆಕೋರರು ದಾಸ್‌ನ ತಲೆ ಹಾಗೂ ಗುಪ್ತಾಂಗಕ್ಕೂ ಹೊಡೆದಿದ್ದಾರೆ ಎಂದು ತಿಳಿಸಿದ್ದಾರೆ. ಈ ಘಟನೆಯನ್ನು ಗಂಭೀರ ಎಂದು ವ್ಯಾಖ್ಯಾನಿಸಿರುವ ಪೊಲೀಸ್ ಪ್ರಧಾನ ನಿರ್ದೇಶಕ ಅಶೋಕ್ ಕುಮಾರ್, ತಪ್ಪಿತಸ್ಥರನ್ನು ಕಾನೂನಿನ ಪ್ರಕಾರ ಶಿಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಪ್ರಕರಣವೂ ಇನ್ನೂ ಕೆಳಜಾತಿಯ ಮೇಲೆ ಮೇಲ್ಜಾತಿಗಳು ಕ್ಷುಲ್ಲಕ ಕಾರಣಗಳಿಗಾಗಿ ಪೀಡಿಸುತ್ತಿರುವುದನ್ನು ಬಯಲಿಗೆಳೆದಿದೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group