ರಾಷ್ಟ್ರೀಯ ಸುದ್ದಿ

ಪ್ರಧಾನಿ ಮೋದಿ ಆದಾಯದಲ್ಲಿ ಶೇ.52ರಷ್ಟು ಹೆಚ್ಚಳ!

ವರದಿಗಾರ (ಎ.26): ಪ್ರಧಾನಿ ನರೇಂದ್ರ ಮೋದಿಯವರ ಆದಾಯ ಕಳೆದ 5 ವರ್ಷಗಳಲ್ಲಿ ಶೇ.52 ರಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ವರದಿ ಮಾಡಿವೆ.

2019ರ ಚುನಾವಣೆಯಲ್ಲಿ ವಾರಾಣಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶುಕ್ರವಾರ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ್ದು ಈ ಸಂದರ್ಭದಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತನ್ನ ಆಸ್ತಿಯನ್ನು ಘೋಷಿಸಿದ್ದಾರೆ. 2014ರಿಂದ 2019ರವರೆಗೆ ಈ ಹೆಚ್ಚಳ ಕಂಡು ಬಂದಿದೆ. ಈ ಹೆಚ್ಚಳ ಕಂಡುಬಂದಿರುವುದು ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇರಿಸಿರುವ ರೂ. 1.27 ಕೋಟಿ ನಿಶ್ಚಿತ ಠೇವಣಿ (ಫಿಕ್ಸೆಡ್ ಡಿಪಾಸಿಟ್)ಯಲ್ಲಿ ಎಂದು ತಿಳಿಸಲಾಗಿದೆ.

ಪ್ರಮಾಣ ಪತ್ರದಲ್ಲಿ ಒಟ್ಟು ಆಸ್ತಿಯ ಮೊತ್ತ ರೂ.2.51 ಕೋಟಿಯಾಗಿದ್ದು, ಇದರಲ್ಲಿ ಸ್ಥಿರಾಸ್ತಿ ಮೊತ್ತ ರೂ. 1.10 ಕೋಟಿ ಹಾಗೂ ಬ್ಯಾಂಕು, ಇತರೆ ಹೂಡಿಕೆ ಸೇರಿ ಒಟ್ಟು ಮೊತ್ತ ರೂ. 1,41,36,119 ಎಂದು ತಿಳಿಸಲಾಗಿದೆ. ನಗದು ಹಣದಲ್ಲಿ 2014ರಲ್ಲಿ ಇದ್ದ ಮೊತ್ತಕ್ಕೂ 2019ರಲ್ಲಿ ಇರುವ ಮೊತ್ತಕ್ಕೂ ಶೇ.114.15ರಷ್ಟು ಹೆಚ್ಚಳ ಕಂಡು ಬಂದಿದೆ. 2014ರಲ್ಲಿ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ವೇಳೆ ನಗದು ಮೊತ್ತ ರೂ. 65,91,582 ಇತ್ತು. ಮೋದಿ ಪಡೆಯುತ್ತಿರುವ ಸರ್ಕಾರಿ ಸಂಬಳ ಹಾಗೂ ಉಳಿತಾಯದ ಮೇಲಿನ ಬಡ್ಡಿಯೇ ಆದಾಯದ ಮೂಲ ಎನ್ನಲಾಗಿದೆ. ಪ್ರಮಾಣಪತ್ರದಲ್ಲಿ ಮೋದಿ ತಾನು ಯಾವುದೇ ಕ್ರಿಮಿನಲ್ ಆರೋಪವಾಗಲಿ, ವಿಚಾರಣೆಯನ್ನಾಗಲಿ ಎದುರಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಆಸ್ತಿ ಘೋಷಣೆ ಪ್ರಮಾಣ ಪತ್ರದಲ್ಲಿ ಮೂರು ವಿಭಾಗಗಳಿದ್ದು, ಅವುಗಳೆಂದರೆ, ಸ್ಥಿರಾಸ್ತಿ, ಚರಾಸ್ತಿ ಮತ್ತು ಹೊಣೆಗಾರಿಕೆಗಳು ಎಂದು ವರ್ಗೀಕರಿಸಲಾಗಿದೆ.

ಪ್ರಮಾಣ ಪತ್ರದ ಪ್ರಕಾರ ನರೇಂದ್ರ ಮೋದಿ ಚರಾಸ್ತಿಯಲ್ಲಿ ಮಾ.31, 2019ರ ವೇಳೆಗೆ ರೂ.38,750 ಕೈಯಲ್ಲಿರುವ ನಗದು, ಬ್ಯಾಂಕ್ ಬ್ಯಾಲೆನ್ಸ್ ರೂ.4,143,  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಹಣ ರೂ.1,27,81,574 ( ರೂ.1.27 ಕೋಟಿ ). ಸ್ಥಿರಾಸ್ತಿಯಲ್ಲಿ ರೂ.1,10 ಕೋಟಿ ಬೆಲೆಬಾಳುವ ಮನೆ ಇದೆ ಎಂದು ತಿಳಿಸಿದ್ದಾರೆ. 2014ರಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಮೋದಿ ಕೈಯಲ್ಲಿದ್ದ ಹಣ ರೂ.32,700. ಬ್ಯಾಂಕ್ ಬ್ಯಾಲೆನ್ಸ್ ರೂ. 26.05 ಲಕ್ಷಗಳಾಗಿದ್ದವು.  ಅಂದು ಫಿಕ್ಸೆಡ್ ಡಿಪಾಸಿಟ್ ರೂ.32.48 ಲಕ್ಷ ಎಂದು ಹೇಳಲಾಗಿತ್ತು.

 

Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group