
ವರದಿಗಾರ (ಎ.24): ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿದ ಕಾರಣ, ಬಿಜೆಪಿ ಸಂಸದ, ದಲಿತ ನಾಯಕ ಉದಿತ್ ರಾಜ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ವಾಗತಿಸಿದ್ದಾರೆ.
BJP MP Udit Raj joins Congress party in presence of Congress President Rahul Gandhi pic.twitter.com/nkk09fPlD1
— ANI (@ANI) April 24, 2019
ಟಿಕೆಟ್ ನಿರಾಕರಿಸಿರುವ ಕಾರಣ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ವಾಯವ್ಯ ದೆಹಲಿಯ ಬಿಜೆಪಿ ಸಂಸದರಾಗಿದ್ದ ಉದಿತ್ ರಾಜ್ ಮಂಗಳವಾರ ಹೇಳಿದ್ದರು.ಲೋಕಸಭಾ ಚುನಾವಣೆಯಲ್ಲಿ ವಾಯವ್ಯ ದೆಹಲಿಯಿಂದ ಸ್ಪರ್ಧಿಸಲು ಪಂಜಾಬಿ ಗಾಯಕ ಹನ್ಸ್ ರಾಜ್ ಹನ್ಸ್ ಅವರ ಹೆಸರನ್ನು ಬಿಜೆಪಿ ಪ್ರಕಟಿಸಿದ ಕೂಡಲೇ ಉದಿತ್ ರಾಜ್ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ತನಗೆ ಟಿಕೆಟ್ ನಿರಾಕರಿಸಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಲ್ಲಿ ಮಾತನಾಡಲು ಯತ್ನಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ನಿತಿನ್ ಗಡ್ಕರಿ ಮತ್ತು ರಾಜನಾಥ್ ಸಿಂಗ್ ಅವರಲ್ಲಿ ಇದೇ ವಿಷಯ ಹೇಳಿದ್ದರೂ ಕಾದು ನೋಡುವಂತೆ ಹೇಳಿದ್ದರು ಎಂದು ಅವರು ಹೇಳಿದ್ದಾರೆ.
ತಾನು ಪಕ್ಷದ ಟಿಕೆಟ್ಗೆ ಕಾಯುತ್ತಿದ್ದು, ಅದು ಸಿಗದೇ ಇದ್ದರೆ ಪಕ್ಷ ಬಿಟ್ಟು ಹೋಗುವುದಾಗಿ ಉದಿತ್ ರಾಜ್ ಮಂಗಳವಾರ ಬೆಳಗ್ಗೆ ಸರಣಿ ಟ್ವೀಟ್ ಮಾಡಿದ್ದರು. ಇದಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಮಗೆ ಟಿಕೆಟ್ ನಿರಾಕರಿಸಿರುವುದು ಯಾಕೆ ಎಂದು ಗೊತ್ತಿಲ್ಲ ಎಂದಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭರವಸೆ ಇಟ್ಟು ನನ್ನ ಇಂಡಿಯನ್ ಜಸ್ಟೀಸ್ ಪಾರ್ಟಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದೆ. ಆದರೆ ಹಲವಾರು ಚಿಕ್ಕ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿಯೇ ಇದ್ದು ಲಾಭ ಪಡೆದುಕೊಂಡಿವೆ.ನನಗೆ ತುಂಬಾ ಬೇಸರವಾಗಿದೆ. ನನಗೆ ಹೇಳಬೇಕಾದುದನ್ನು ಹೇಳಲೂ ಅವಕಾಶ ಕೊಡಲಿಲ್ಲ ಎಂದು ಉದಿತ್ ರಾಜ್ ಬೇಸರ ವ್ಯಕ್ತ ಪಡಿಸಿದ್ದಾರೆ.
