ರಾಷ್ಟ್ರೀಯ ಸುದ್ದಿ

ರಾಹುಲ್ ಗಾಂಧಿ ನಾಮಪತ್ರದ ದಾಖಲೆಗಳೆಲ್ಲವೂ ಸರಿ ಇದೆ; ಅಮೇಠಿ ಚುನಾವಣಾಧಿಕಾರಿ ಸ್ಪಷ್ಟನೆ

ವರದಿಗಾರ (ಎ.22):  ಅಮೇಠಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಲ್ಲಿಸಿದ್ದ ನಾಮಪತ್ರದ ದಾಖಲೆಗಳೆಲ್ಲವೂ ಸರಿಯಾಗಿವೆ ಎಂದು ಅಮೇಠಿ ರಿಟರ್ನಿಂಗ್‌ ಆಫೀಸರ್‌ ರಾಮ್ ಮನೋಹರ್ ಮಿಶ್ರಾ ಹೇಳಿದ್ದಾರೆ. ಈ ಬಗ್ಗೆ ಮೂಲಗಳು ವರದಿ ಮಾಡಿವೆ.

ಕಂಪನಿಯೊಂದರ ನೋಂದಣಿ ವೇಳೆ ರಾಹುಲ್‌ ಗಾಂಧಿ ಅವರು ತಾವು ಬ್ರಿಟನ್‌ ಪೌರತ್ವ ಹೊಂದಿರುವುದಾಗಿ ದಾಖಲೆ ನೀಡಿದ್ದಾರೆ ಎಂದೂ, ಶೈಕ್ಷಣಿಕ ದಾಖಲೆಗಳಲ್ಲಿ ರಾಹುಲ್‌ ಗಾಂಧಿ ಅವರ ಹೆಸರಿಲ್ಲ ಎಂದು ಆರೋಪಿಸಿ ಅಮೇಠಿಯ ಪಕ್ಷೇತರ ಅಭ್ಯರ್ಥಿಯೊಬ್ಬರು ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಈ ಸಂಬಂಧ ರಾಹುಲ್‌ ಅವರ ನಾಮಪತ್ರದ ಪರಿಶೀಲನೆ ಸೋಮವಾರ ನಡೆದಿದೆ. ಪರಿಶೀಲನೆ ಬಳಿಕ ಈ ಬಗ್ಗೆ ಚುನಾವಣಾ ಅಧಿಕಾರಿ ಸ್ಪಷ್ಟನೆ ನೀಡಿದ್ದು, ದಾಖಲೆ ಪತ್ರಗಳೆಲ್ಲವೂ ಸರಿಯಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅಮೇಠಿ ಕ್ಷೇತ್ರದಿಂದ ಸಲ್ಲಿಸಿರುವ ನಾಮಪತ್ರದ ಜತೆಗೆ ಕೊಟ್ಟಿರುವ ಪ್ರಮಾಣಪತ್ರದಲ್ಲಿ ಅವರ ಪೌರತ್ವ ಮತ್ತು ವಿದ್ಯಾರ್ಹತೆ ಬಗೆಗಿನ ವಿವರಗಳು ತಾಳೆಯಾಗುವುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಧ್ರುವಲಾಲ್‌ ಎಂಬವರು ಆಕ್ಷೇಪ ಎತ್ತಿದ್ದರು. ರಾಹುಲ್‌ ಗಾಂಧಿ ಅವರ ಉಮೇಧುವಾರಿಕೆಯನ್ನು ಆಕ್ಷೇಪಿಸಿ ನಾಲ್ಕು ಮಂದಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ರಾಹುಲ್‌ ಅವರು ಹೂಡಿಕೆ ಮಾಡಿದ್ದಾರೆ ಎನ್ನಲಾದ ಬ್ರಿಟನ್‌ ಕಂಪನಿಯೊಂದರ ದಾಖಲೆಯನ್ನು ಧ್ರುವಲಾಲ್‌ ಅವರ ವಕೀಲ ರವಿಪ್ರಕಾಶ್‌ ಮಾಧ್ಯಮದ ಮುಂದೆ ಪ್ರದರ್ಶಿಸಿ, ರಾಹುಲ್‌ ಅವರು ಬ್ರಿಟನ್‌ ಪ್ರಜೆ ಎಂದು ಈ ದಾಖಲೆಯಲ್ಲಿ ಇದೆ. ಈ ಕಂಪನಿಯು ಐದು ವರ್ಷ ಅಸ್ತಿತ್ವದಲ್ಲಿತ್ತು. ಕಂಪನಿಯು ಲಾಭ ಗಳಿಸಿರುವ ಸಾಧ್ಯತೆ ಇದೆ. ಹಾಗಿದ್ದರೂ ಪ್ರಮಾಣಪತ್ರದಲ್ಲಿ ಈ ಲಾಭದ ಉಲ್ಲೇಖ ಇಲ್ಲ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೆ ‘ಇನ್ನೊಂದು ದೇಶದ ನಾಗರಿಕರು ಭಾರತದಲ್ಲಿ ಸ್ಪರ್ಧಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿಲ್ಲ,’ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದರು. ರಾಹುಲ್  ಯಾವ ಆಧಾರದ ಮೇಲೆ ಬ್ರಿಟಷ್‌ ಪೌರತ್ವ ಪಡೆದರು? ಹಾಗಿದ್ದೂ, ಭಾರತದ ನಾಗರಿಕತ್ವ ಸಿಕ್ಕಿದ್ದು ಹೇಗೆ? ಈ ವಿಚಾರದಲ್ಲಿ ಸ್ಪಷ್ಟನೆ ಸಿಗುವವ ವರೆಗೆ ಅವರ ನಾಮಪತ್ರವನ್ನು ಅಂಗೀಕರಿಸದಂತೆ ರವಿಪ್ರಕಾಶ್ ಚುನಾವಣಾಧಿಕಾರಿಗೆ ಮನವಿ ಮಾಡಿದ್ದರು.

‘2003 ರಿಂದ 2009ರ ಅವಧಿಯಲ್ಲಿ ಬ್ರಿಟನ್‌ ಸಂಸ್ಥೆ ಹೊಂದಿದ್ದ ಆಸ್ತಿ ವಿವರವನ್ನು ರಾಹುಲ್‌ ಗಾಂಧಿ ನೀಡಿಲ್ಲ. ಇನ್ನೊಂದೆಡೆ ಅಫಿಡವಿಟ್‌ನಲ್ಲಿ ಸಲ್ಲಿಸಿರುವ ವಿದ್ಯಾರ್ಹತೆ ದಾಖಲೆಗಳಲ್ಲಿ ಹೊಂದಾಣಿಕೆಯಿಲ್ಲ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅವರ ದಾಖಲೆಗಳಲ್ಲಿ ರಾಹುಲ್‌ ವಿನ್ಸಿ ಎಂದು ಇದೆ. ಆದರೆ, ರಾಹುಲ್‌ ಗಾಂಧಿ ಹೆಸರಲ್ಲಿ ಯಾವ ದಾಖಲೆಗಳೂ ಲಭ್ಯವಿಲ್ಲ. ರಾಹುಲ್‌ ವಿನ್ಸಿ ಮತ್ತು ರಾಹುಲ್‌ ಗಾಂಧಿ ಇಬ್ಬರೂ ಒಬ್ಬರೇ? ಅಥವಾ ಬೇರೆ ಬೇರೆಯವರೇ ಎಂಬುದು ನಮ್ಮ ಪ್ರಶ್ನೆ. ಹಾಗೇನಾದರೂ ಬೇರೆ ಬೇರೆಯಾಗಿದ್ದಲ್ಲಿ ರಾಹುಲ್‌ ಗಾಂಧಿ ಅವರು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ನೈಜ ದಾಖಲೆಗಳನ್ನು ಸಲ್ಲಿಸಬೇಕು,’ ಎಂದು ರವಿ ಪ್ರಕಾಶ್ ಒತ್ತಾಯಿಸಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group