ಜಿಲ್ಲಾ ಸುದ್ದಿ

ಮೃತ ಅಶ್ರಫ್ ಕಲಾಯಿಯನ್ನು ಮುಂದಿಟ್ಟು ಎಸ್ಡಿಪಿಐ ವಿರುದ್ಧ ನಿರಾಧಾರ ಆರೋಪ : ಸಚಿವ ಖಾದರ್ ವಿರುದ್ಧ ಚಾಟಿ ಬೀಸಿದ ಅಶ್ರಫ್ ಕುಟುಂಬ !

➤ ಯುಟಿ ಖಾದರ್ ರಾಜಕೀಯ ಲಾಭಕ್ಕಾಗಿ ಇಷ್ಟು ಕೀಳು ಮಟ್ಟಕ್ಕಿಳಿಯಬಾರದಿತ್ತು : ಮೃತರ ತಮ್ಮ

➤ SDPI ಯವರೇ ನನ್ನ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿರುವುದು : ಅಶ್ರಫ್ ಪತ್ನಿ

ವರದಿಗಾರ ಎ 5 :  ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯುಟಿ ಖಾದರ್ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಮಿಥುನ್ ರೈ ಪರ ನಿನ್ನೆ ಮೆಲ್ಕಾರ್ ಜಂಕ್ಷನ್ ನಲ್ಲಿ ನಡೆದಿದ್ದ ಪಕ್ಷದ ಪ್ರಚಾರ ಸಭೆಯಲ್ಲಿ ಎಸ್ಡಿಪಿಐ ಪಕ್ಷದ ವಿರುದ್ಧ ನಿರಾಧಾರವಾಗಿ ಆರೋಪಗಳನ್ನು ಮಾಡಿದ್ದರು. ಖಾದರ್ ಆರೋಪಗಳ ಕುರಿತಂತೆ ಮೃತ ಅಶ್ರಫ್ ಕುಟುಂಬ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ‘ತಮ್ಮ ರಾಜಕೀಯ ಲಾಭಕ್ಕೋಸ್ಕರ ಅಶ್ರಫ್ ಕಲಾಯಿಯವರ ಹೆಸರನ್ನು ಬಳಸಿಕೊಳ್ಳಬೇಡಿ’ ಎಂದು ಮೃತ ಅಶ್ರಫ್ ಪತ್ನಿ ತಾಹಿರಾ ಅವರು ಉಸ್ತುವಾರಿ ಸಚಿವ ಖಾದರರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.  ಸಚಿವ ಖಾದರ್ ನಿನ್ನೆಯ ಸಭೆಯಲ್ಲಿ ಅಶ್ರಫ್ ಕಲಾಯಿಯವರ ಹತ್ಯೆಯ ನಂತರ ಎಸ್ಡಿಪಿಐಯವರು ಎಲ್ಲಾ ಕಡೆ ಧನ ಸಂಗ್ರಹ ಮಾಡಿದ್ದಾರೆ,  ಈ ಹಣ ಎಲ್ಲಿ ಹೋಯಿತು, ಎಸ್ಡಿಪಿಐಯವರು ಯಾರಿಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ್ದರು.

ಸಚಿವ ಖಾದರ್ ಅವರ ಹೇಳಿಕೆಯ ಕುರಿತು ಮೃತ ಅಶ್ರಫ್ ಕಲಾಯಿಯವರ ಪತ್ನಿಯನ್ನು ಸಂಪರ್ಕಿಸಿದ ‘ವರದಿಗಾರ’ ತಂಡಕ್ಕೆ ಪ್ರತಿಕ್ರಿಯಿಸಿದ ಅವರು, ‘ ತಮ್ಮ ರಾಜಕೀಯ ಲಾಭಕ್ಕೋಸ್ಕರ ಅಶ್ರಫ್ ರವರ ಹೆಸರನ್ನು ಬಳಸಬೇಡಿ, ಅಶ್ರಫ್ ಮರಣಾ ನಂತರ ಪ್ರತಿ ತಿಂಗಳು ಕುಟುಂಬದ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿರುವುದು ಎಸ್ಡಿಪಿಐಯವರಾಗಿದ್ದಾರೆ. ಖಾದರ್ ಆರೋಪಿಸಿರುವಂತೆ ಎಸ್ಡಿಪಿಐಯವರು ಎಲ್ಲೂ ಅಶ್ರಫ್ ಗಾಗಿ ಧನ ಸಂಗ್ರಹ ನಡೆಸಿಲ್ಲ. ಪ್ರತಿಯೊಬ್ಬ ಸದಸ್ಯರು ಒಂದಾಗಿ ಧನ ಸಹಾಯ ನೀಡಿ ನನ್ನ ಪ್ರತಿ ತಿಂಗಳ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದಾರೆ. ನನಗೆ ಮನೆ ಕಟ್ಟಿಸಿಕೊಡುವ ಭರವಸೆಯನ್ನು ಕೂಡಾ ಅವರು ನೀಡಿದ್ದಾರೆ. ಅಶ್ರಫ್ ಮೃತರಾದ ನಂತರ ಯಾವ ರಾಜಕೀಯ ಪಕ್ಷಗಳೂ ನನ್ನ ಬಳಿಗೆ ಬಂದಿಲ್ಲ. ಬಂದಿದ್ದರೆ ಅದು ಎಸ್ಡಿಪಿಐ ಪಕ್ಷ ಮಾತ್ರವಾಗಿದೆ.  ನಿಮ್ಮ ರಾಜಕೀಯಕ್ಕೋಸ್ಕರ ಅಶ್ರಫ್ ಹೆಸರನ್ನು ಬಳಸಿಕೊಂಡು ಅಪಪ್ರಚಾರ ನಡೆಸಿದರೆ ದೇವರು ಮೆಚ್ಚಲಾರ” ಎಂದು ಆಕ್ರೋಶಭರಿತರಾಗಿ ಹೇಳಿದ್ದಾರೆ.

 

ಖಾದರ್ ಆರೋಪದ ಕುರಿತು ಮೃತ ಅಶ್ರಫ್ ತಮ್ಮ ಶಮೀರ್ ಅವರನ್ನು ಸಂಪರ್ಕಿಸಿದಾಗ  ಪ್ರತಿಕ್ರಿಯಿಸಿದ ಅವರು, ” ನಿನ್ನೆ ರಾತ್ರಿಯಿಂದ ಸಾಮಾಜಿಕ ತಾಣಗಳಲ್ಲಿ ಯುಟಿ ಖಾದರ್ ರವರ ಭಾಷಣದಲ್ಲಿ ನನ್ನ ಮೃತ ಅಣ್ಣ ಅಶ್ರಫ್ ಬಗ್ಗೆ ಸುಳ್ಳುಗಳಿಂದ ಕೂಡಿರುವ ಅಪಪ್ರಚಾರದ ಹೇಳಿಕೆ ವೈರಲ್ ಆಗುತ್ತಿದ್ದು, ವಾಸ್ತವದಲ್ಲಿ ಸರಕಾರದಿಂದ ಪರಿಹಾರವಾಗಿ ನೀಡಲಾದ ಹಣವನ್ನು ಪಡೆಯಲು ವಿಳಂಬವಾಗಿರುವುದು ನಿಜ.ಆದರೆ ವಿಳಂಬವಾಗಿರುವುದಕ್ಕೂ ಎಸ್ಡಿಪಿಐ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ವಿನಾ ಕಾರಣ ಅಪಪ್ರಚಾರ ಮಾಡಬೇಡಿ, ನನ್ನ ಅತ್ತಿಗೆಗೆ ಪ್ರತಿ ತಿಂಗಳು ರೇಶನ್ ಕೂಡಾ ಎಸ್ಡಿಪಿಐ ಪಕ್ಷದವರೇ ನೀಡುತ್ತಿದ್ದಾರೆ. ಪಕ್ಷದ ಎಲ್ಲಾ ಕಾರ್ಯಕರ್ತರು ಒಂದಾಗಿ ಮನೆ ನಿರ್ಮಿಸಿಕೊಡುವ ಪ್ರಯತ್ನದಲ್ಲಿದ್ದಾರೆ. ಅದು ಶೀಘ್ರವೇ ಕಾರ್ಯರೂಪಕ್ಕೆ ಬರಬಹುದು. ಆದರೆ ಯಾರೂ ಕೂಡಾ ನನ್ನ ಅಣ್ಣನ ವಿಚಾರದಲ್ಲಿ ರಾಜಕೀಯ ಮಾಡಬೇಡಿ.  2016 ಜೂನ್ 21 ರಂದು ಅಶ್ರಫ್ ರನ್ನು ಹತ್ಯೆ ನಡೆಸಲಾಗಿತ್ತು. ನಂತರ ಸತತ ಮೂರು ವಾರಗಳ ಕಾಲ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈಯವರನ್ನು ಭೇಟಿ ಮಾಡಿ ಪರಿಹಾರಕ್ಕಾಗಿ ಮನವಿ ಸಲ್ಲಿಸಿದರೂ ನಮಗೆ ಯಾವುದೇ ಸ್ಪಂದನೆ ದೊರೆತಿರಲಿಲ್ಲ. ಆದರೆ ನಂತರ ನಡೆದ ಶರತ್ ಮಡಿವಾಳ ಹತ್ಯೆಯ ಪರಿಹಾರಕ್ಕಾಗಿ ಬಿಜೆಪಿಯ ಒತ್ತಡಕ್ಕೆ ಮಣಿದ ಸರಕಾರ, ಶರತ್ ಮಡಿವಾಳರಿಗೆ ಪರಿಹಾರ ನೀಡಿದ ನಂತರ ನಮಗೆ ಪರಿಹಾರ ನೀಡಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಕಾಂಗ್ರೆಸ್ಸಿನ ಚುನಾವಣಾ ಲಾಭಕ್ಕೆ ಬೇಕಾಗಿ ಯುಟಿ ಖಾದರ್ ಸರ್ ಇಂತಹಾ ನೀಚಮಟ್ಟಕ್ಕಿಳಿಯುತ್ತಾರೆಂದು ನಾನು ಭಾವಿಸಿರಲಿಲ್ಲ. ಅವರು ಈ ರೀತಿ ಸುಳ್ಳನ್ನು ಪ್ರಚಾರ ಮಾಡುವಾಗ ಸೃಷ್ಟಿಕರ್ತನು ನೋಡುತ್ತಿದ್ದಾನೆ ಎಂದು ಅರಿತುಕೊಳ್ಳಬೇಕು” ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಯುಟಿ ಖಾದರ್ ಸುಳ್ಳಿನ ಭರಾಟೆ ಇಲ್ಲಿಗೆ ನಿಲ್ಲದೆ, ಸುಳ್ಯದ ಇಸ್ಮಾಯಿಲ್ ನೆಲ್ಯಮಜಲು ಅವರನ್ನು ಕೊಂದದ್ದು ಕೂಡಾ ಎಸ್ಡಿಪಿಐಯವರೇ ಎಂದು ತನ್ನ ಭಾಷಣದಲ್ಲಿ ಹೇಳಿದ್ದರು. ಆದರೆ ವಾಸ್ತವದಲ್ಲಿ ಈ ಕುರಿತು ಪರಿಶೀಲಿಸಿದಾಗ, ಇಸ್ಮಾಯಿಲ್ ರವರನ್ನು ಜಮೀನು ವಿವಾದದ ಕಾರಣಕ್ಕಾಗಿ ಕೊಲೆ ನಡೆಸಲಾಗಿತ್ತು ಎಂದು ಪೊಲೀಸ್ ಇಲಾಖೆಯ ದಾಖಲೆಗಳೇ ಸೂಚಿಸುತ್ತದೆ. ಒಟ್ಟಾರೆಯಾಗಿ ಇದೀಗ ಮೃತರ ಕುಟುಂಬವೇ ಯುಟಿ ಕಾದರ್ ವಿರುದ್ಧ ತಿರುಗಿ ಬಿದ್ದಿರುವುದನ್ನು ಗಮನಿಸಿದರೆ ಉಸ್ತುವಾರಿ ಸಚಿವರು ತಮ್ಮ ಪಕ್ಷದ ರಾಜಕೀಯ ಲಾಭಕ್ಕೋಸ್ಕರ ನಿರಾಧಾರವಾಗಿ ಆರೋಪಗಳನ್ನು ಹೊರಿಸಿದ್ದಾರೆನ್ನುವುದು ಸಾಬೀತಾಗಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group