
ವರದಿಗಾರ (ಮಾ.19): ಮನುವಾದಿಗಳು ಹಿಂದುತ್ವ, ದೇಶಪ್ರೇಮ, ರಾಷ್ಟ್ರೀಯತೆಯ ಹೆಸರಲ್ಲಿ ಬಹುಸಂಖ್ಯಾತರನ್ನು ವಂಚಿಸುತಿದ್ದಾರೆ ಎಂದು ಮಾಜಿ ಸಚಿವ ಆರ್.ಎನ್. ನಾಯ್ಕ ಹೇಳಿದ್ದಾರೆ.
ಅವರು ಹೊನ್ನಾವರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಬಹುಸಂಖ್ಯಾತರನ್ನು ವಂಚಿಸುವ ಮನುವಾದ ಮತ್ತು ಅದರ ವಿರೋಧಿ ಮಾನವತಾವಾದದ ನೆಲೆಯಲ್ಲಿ ಈ ಚುನಾವಣೆ ನಡೆಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದದಲ್ಲಿ ಬಿಜೆಪಿ ಮತ್ತು ಅದರ ನಾಯಕರಿಗೆ ಹಿಂದುತ್ವ, ದೇಶಪ್ರೇಮ, ರಾಷ್ಟ್ರೀಯತೆಗಳು ಅಡಗುದಾಣಗಳಾಗಿವೆ. ಈ ಅಡಗುದಾಣಗಳಲ್ಲಿ ಕುಳಿತು ಭಾರತ, ಭಾರತದ ಬಹುಸಂಖ್ಯಾತರ ಕನಸುಗಳನ್ನು ಸ್ಫೋಟಿಸುತ್ತಿರುವ ಮತಾಂಧರು ಮತಾಂಧರ ಪರಿವಾರದ ವಿರುದ್ಧ ಮತ ಚಲಾಯಿಸಿ ಮತಾಂಧರನ್ನು ಒಕ್ಕಲೆಬ್ಬಿಸುವ ಕೆಲಸ ಆಗಬೇಕಿದೆ ಎಂದು ಕರೆ ನೀಡಿದ್ದಾರೆ.
ಲಾಗಾಯ್ತಿನ ಮನುವಾದದ ವಂಚನೆಗೆ ಕಳೆದ 25 ವರ್ಷಗಳಿಂದ ಅನಂತಕುಮಾರ ಮತ್ತು ಬಿ.ಜೆ.ಪಿ. ನೆರವಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಿಂದುಳಿದವರ ವಿರುದ್ಧ ಅಲ್ಫಸಂಖ್ಯಾತರನ್ನು, ಅಲ್ಫಸಂಖ್ಯಾತರ ವಿರುದ್ಧ ದಲಿತರು ಹಿಂದುಳಿದವರನ್ನು ಎತ್ತಿಕಟ್ಟುವ ವಂಚಕ ಪರಿವಾರದ ಅನೀತಿಯ ರಾಜಕಾರಣವನ್ನು ದೇಶಪ್ರೇಮ ಎನ್ನುತ್ತೀರಾ? ಎಂದು ಪ್ರಶ್ನಿಸಿದ ಅವರು, ದೇವರು, ಧರ್ಮ, ದೇಶಪ್ರೇಮದ ಸೋಗಿನ ದೇಶದ್ರೋಹಿಗಳನ್ನು ಹಿಮ್ಮೆಟ್ಟಿಸುವ ಮೂಲಕ ಅಭಿವೃದ್ಧಿ ಪರವಾಗಿ ಮನುವಾದ, ಮನುವಾದಿಗಳ ವಿರುದ್ಧವಾಗಿ ಮಾನವೀಯತೆಗೆ ಮತ ಚಲಾಯಿಸುವ ಮೂಲಕ ಸುಳ್ಳಿನ ಕಾರ್ಖಾನೆಯನ್ನು ಬುಡಮೇಲು ಮಾಡಬೇಕು ಎಂದು ಹೇಳಿದ್ದಾರೆ.
ವರದಿ: ಕಣ್ಣೇಶ್ವರ್ ನಾಯ್ಕ
