ವರದಿಗಾರ ವಿಶೇಷ

ಮಂಗಳೂರು ಲೋಕಸಭಾ ಕ್ಷೇತ್ರ :  ಪಕ್ಷಗಳ ಅಂತರಿಕ ಗೊಂದಲಗಳು ಮತ್ತು ಪ್ರಜ್ಞಾವಂತ ಮತದಾರ

ವರದಿಗಾರ ವಿಶೇಷ

ದೇಶದ ಲೋಕಸಭಾ ಚುನಾವಣೆಗಳ ದಿನಾಂಕ ಘೋಷಣೆಯಾಗಿದ್ದು, ಕರ್ನಾಟಕದಲ್ಲಿ ಎಪ್ರಿಲ್ 18 ರಂದು ಮತ್ತು 23 ರಂದು ಹೀಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ದೇಶದ ರಾಜಕೀಯಕ್ಕೆ ಹಲವಾರು ಘಟಾನುಘಟಿ ನಾಯಕರುಗಳನ್ನು ಅರ್ಪಿಸಿದ ಕೀರ್ತಿಯಿರುವ ಮಂಗಳೂರು ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಯ ಟಿಕೆಟ್ ಗಾಗಿ ಆಂತರಿಕ ಕಿತ್ತಾಟ, ಕಾಂಗ್ರೆಸಿನಲ್ಲಿ ತುಂಬಿ ತುಳುಕುತ್ತಿರುವ ಟಿಕೆಟ್ ಆಕಾಂಕ್ಷಿಗಳು ಹಾಗೂ ಜಿಲ್ಲೆಯಲ್ಲಿ ತನ್ನ ಅಸ್ತಿತ್ವ ಗಟ್ಟಿಗೊಳಿಸುತ್ತಿರುವ ಎಸ್ಡಿಪಿಐ ಪಕ್ಷ, ಇದರಿಂದಾಗಿ ಮತ್ತೊಮ್ಮೆ ಜಿಲ್ಲೆಯ ಪ್ರಜ್ಞಾವಂತ ಮತದಾರ ರಂಗು ರಂಗಿನ ರಾಜಕೀಯ ಕಾದಾಟಕ್ಕೆ ಸಾಕ್ಷಿ ವಹಿಸಲಿದ್ದಾನೆ.

ಈ ಬಾರಿ ಸುಮಾರು 8,33,824 ಪುರುಷ ಹಾಗೂ 8,63,593 ಮಹಿಳಾ ಮತದಾರರು ಹೀಗೆ ಒಟ್ಟು 16, 97,417 ಮತದಾರರನ್ನು (ಜನವರಿ 2019 ರ ಅಂಕಿ ಅಂಶದ ಪ್ರಕಾರ)  ಹೊಂದಿರುವ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ 1991 ರಿಂದ ಬಿಜೆಪಿ ತನ್ನ ಬಿಗಿ ಹಿಡಿತವನ್ನು ಗಟ್ಟಿಗೊಳಿಸುತ್ತಲೇ ಸಾಗಿದೆ. 2014 ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಬಿ ಜನಾರ್ದನ ಪೂಜಾರಿಯವರನ್ನು 1,43,,709 ಮತಗಳ ಭರ್ಜರಿ ಅಂತರದಿಂದ ಸೋಲಿಸಿ ಬೀಗಿದ್ದರು ಬಿಜೆಪಿಯ ನಳಿನ್ ಕುಮಾರ್ ಕಟೀಲ್. ಈ ಬಾರಿಯ ಕ್ಷೇತ್ರದ ಅಖಾಡ ಹೇಗಿದೆ ಎನ್ನುವುದರ ಕುರಿತೊಂದು ಹೊರಳು ನೋಟ

 ಕಾಂಗ್ರೆಸ್ : ಟಿಕೆಟ್ ಆಕಾಂಕ್ಷಿಗಳ ದಂಡು !

ಕಾಂಗ್ರೆಸ್ಸಿನಲ್ಲಿ ಈ ಬಾರಿ ಮೊದಲಿಗೆ ಅಭ್ಯರ್ಥಿಯ ರಣಕಹಳೆ ಮೊಳಗಿಸಿದ್ದು,  ಪಕ್ಷ ಅತಿಯಾಗಿ ನೆಚ್ಚಿಕೊಂಡಿರುವ ಅಲ್ಪಸಂಖ್ಯಾತ ವರ್ಗದ ಮುಸ್ಲಿಮ್ ಸಮುದಾಯ. ಈ ಕೂಗು ನ್ಯಾಯಯುತವೂ ಆಗಿತ್ತು. ಯಾಕೆಂದರೆ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯ ಜಿಲ್ಲೆಯಲ್ಲಿ ಪ್ರತಿ ಬಾರಿ ಕಾಂಗ್ರೆಸನ್ನು ಬೆಂಬಲಿಸಿದೆ. 80 ಶೇಕಡಾ ಮತದಾರರು ಕಾಂಗ್ರೆಸ್ಸನ್ನು ಬೆಂಬಲಿಸುವ ಸಮುದಾಯಕ್ಕೆ ಈ ಬಾರಿ ಟಿಕೆಟ್ ಕೊಡಬೇಕೆಂಬುವುದು ಅವರ ಬೇಡಿಕೆ. ತಮ್ಮೊಳಗೇ ಒಂದು ಆಂತರಿಕ ಸಮೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಗುರುತಿಸುವ ಪ್ರಕ್ರಿಯೆಗೆ ಮುಸ್ಲಿಮ್ ನಾಯಕರು ಮುಂದಾಗಿದ್ದರು. ಆಗ ಡಾ.ಅಮೀರ್ ತುಂಬೆ ಎಂಬ ಯುವ ನಾಯಕರೊಬ್ಬರು ಸ್ಪರ್ಧೆಯ ಮುಂಚೂಣಿಯಲ್ಲಿ ಗುರುತಿಸಿದ್ದರು. ಮುಸ್ಲಿಮ್ ಸೆಂಟ್ರಲ್ ಕಮಿಟಿ 2018 ಅಕ್ಟೋಬರಿನಲ್ಲಿ ಸಭೆಯೊಂದನ್ನು ನಡೆಸಿತಲ್ಲದೇ, ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಮುಸ್ಲಿಮ್ ಅಭ್ಯರ್ಥಿಗಳನ್ನು ಆಯ್ಕೆಮಾಡುವಂತೆ ನಿರ್ಣಯ ಕೈಗೊಂಡಿತ್ತು. ಡಿಸೆಂಬರ್ 2018 ವೇಳೆ ಕಾಂಗ್ರೆಸ್ ಹೈಕಮಾಂಡ್ ಈ ಕುರಿತಾಗಿನ ತಮ್ಮ ನಿರ್ಧಾರವನ್ನು ತಿಳಿಸಬೇಕು ಇಲ್ಲದೇ ಹೋದಲ್ಲಿ ನಾವು ಪರ್ಯಾಯ ಆಯ್ಕೆಗಳ ಕುರಿತು ಯೋಚಿಸಬೇಕಾಗುತ್ತದೆ ಎಂಬ ಬೆದರಿಕೆಯನ್ನು ಹಾಕಿದ್ದರಾದರೂ ಇದೀಗ ಚುನಾವಣೆ ಘೋಷಣೆಯಾಗಿದ್ದರೂ ಸೆಂಟ್ರಲ್ ಕಮಿಟಿ ಮಾತ್ರ ಸೊಲ್ಲೆತ್ತದೆ ಸುಮ್ಮನಿದೆ. ಇದರೊಂದಿಗೆ ಎಲ್ಲೋ ಒಂದು ಕಡೆ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಅಮೀರ್ ತುಂಬೆಯವರೂ ಸುಮ್ಮನಾಗಿಬಿಟ್ಟರು. ಸೆಂಟ್ರಲ್ ಕಮಿಟಿಯ ಈ ನಿರ್ಣಯವನ್ನು ಮತ್ತೊಂದು ರಾಜಕೀಯ ಪಕ್ಷವಾಗಿರುವ ಎಸ್ ಡಿ ಪಿ ಐ ಕೂಡಾ ಬೆಂಬಲಿಸಿತ್ತೆನ್ನುವುದು ಇಲ್ಲಿ ಗಮನಾರ್ಹವಾಗಿದೆ.

ಈ ನಡುವೆ ಪಕ್ಷದೊಳಗೆ ಎದ್ದಿದ್ದ ಮುಸ್ಲಿಮ್ ಅಭ್ಯರ್ಥಿ ಕೂಗನ್ನು ಬಹಳ ಚಾಣಾಕ್ಷತನದಿಂದ ರಾಜ್ಯ ಹೈಕಮಾಂಡ್ ತಣ್ಣಗಾಗಿಸಿದೆ.  ಕ್ಷೇತ್ರದಲ್ಲಿ ಯಾವ ವೇಳೆಯೂ ಅಭ್ಯರ್ಥಿಯ ರೇಸಿನಲ್ಲಿ ಇರದ ವಿನಯ್ ಕುಮಾರ್ ಸೊರಕೆಯನ್ನು ಅಭ್ಯರ್ಥಿಯನ್ನಾಗಿಸುವ ಸುದ್ದಿಯನ್ನು ತೇಲಿ ಬಿಟ್ಟ ಕಾಂಗ್ರೆಸ್ ಪಕ್ಷ, ಆ ಮೂಲಕ ಒಂದೊಮ್ಮೆ ಕಾಪು ಶಾಸಕರಾಗಿದ್ದ ಸಂದರ್ಭದಲ್ಲಿ ಅಲ್ಪಸಂಖ್ಯಾತ ವಿರೋಧಿ ಹೇಳಿಕೆ ನೀಡಿದ್ದ ಸೊರಕೆಯನ್ನು ಅಭ್ಯರ್ಥಿಯನ್ನಾಗಿಸುವ ಗಾಳಿ ಸುದ್ದಿಯನ್ನು ಜಿಲ್ಲೆಯ ಅಲ್ಪಸಂಖ್ಯಾತರು ನಂಬುವಂತೆ ಮಾಡಿದರಲ್ಲದೆ, ಜಿಲ್ಲೆಯ ಬಹುತೇಕ ಮುಸ್ಲಿಮ್ ಸಂಘಟನೆಗಳು ಸೊರಕೆಯ ಅಭ್ಯರ್ಥಿತನವನ್ನು ವಿರೋಧಿಸುವ ಕೂಗು ಹೆಚ್ಚಾಗಿ ಕೇಳುವಂತೆ ಮಾಡಿ ಮುಸ್ಲಿಮ್ ಅಭ್ಯರ್ಥಿ ಕೂಗಿನ ಹೋರಾಟ ಹಿನ್ನೆಲೆಗೆ ಜಾರುವಂತೆ ಮಾಡುವಲ್ಲಿ ಪಕ್ಷ ಬಹುತೇಕ ಯಶಸ್ವಿಯಾಯಿತು.

ಸದ್ಯಕ್ಕೆ ಪಕ್ಷದ ಟಿಕೆಟಿಗಾಗಿ ಮಾಜಿ ಸಚಿವ ರಮನಾಥ ರೈ ಹಾಗೂ ಬಿ ಕೆ ಹರಿಪ್ರಸಾದ್ ನಡುವೆ ಪ್ರಬಲ ಸ್ಪರ್ಧೆ ಇದೆಯಾದರೂ, ಹರಿಪ್ರಸಾದ್ ರವರಿಗೆ ಬೇರೆ ಕಡೆಯಲ್ಲಿ ಟಿಕೆಟ್ ನೀಡಿ ಇಲ್ಲಿ ರಮಾನಾಥ ರೈಯವರನ್ನು ಅಭ್ಯರ್ಥಿಯನ್ನಾಗಿಸುವ ಕಾರ್ಯತಂತ್ರಗಳು ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ.  ತನ್ಮಧ್ಯೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಕೂಡಾ ಡಿಕೆಶಿಯವರ ಮೂಲಕ ತನ್ನ ಟಿಕೆಟ್ ಸ್ಪರ್ಧೆಯನ್ನು ಒಡ್ಡಿದ್ದು, ಅವರಿಗೆ ಧನಾತ್ಮಕ ಫಲಿತಾಂಶ ಸಿಗುವುದು ಅನುಮಾನವೆನ್ನಲಾಗಿದೆ.

ಈ ನಡುವೆ ಇದುವರೆಗೂ ಹಿನ್ನೆಲೆಯಲ್ಲಿ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ ಮಾಜಿ ಶಾಸಕ ಮೊಯಿದಿನ್ ಬಾವಾ ಕೂಡಾ ತನ್ನ ಸಹೋದರ ಹಾಗೂ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್ ರವರನ್ನು ಮುಂದಿರಿಸಿಕೊಂಡು “ಚಾಣಕ್ಯ ದಾಳ” ಉರುಳಿಸಿದ್ದಾರೆನ್ನಲಾಗಿದೆ.  ಹೇಗೂ ಅಸ್ತಿತ್ವದಲ್ಲಿರುವ  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಒಮ್ಮತದ ಅಭ್ಯರ್ಥಿಯ ಕುರಿತು ಹೆಚ್ ಡಿ ದೇವೇಗೌಡ ಅಥವಾ ಕುಮಾರಸ್ವಾಮಿಯವರೇನಾದರೂ ಒಲವು ವ್ಯಕ್ತಪಡಿಸಿದರೆ ರಮನಾಥ ರೈಯವರನ್ನು ಸ್ಪರ್ಧಾ ಕಣದಿಂದ ಹಿಮ್ಮೆಟ್ಟಿ ಮೊಯಿದಿನ್ ಬಾವಾ ಅಭ್ಯರ್ಥಿ ಆದರೂ ಅಚ್ಚರಿಪಡಬೇಕಾಗಿಲ್ಲ. ಆದರೆ ಅದು ಸಾಧ್ಯವಾಗಬಹುದೇ ಎನ್ನುವುದನ್ನು ಸ್ವಲ್ಪ ದಿನಗಳ ಮಟ್ಟಿಗೆ ಕಾಯಬೇಕಾಗಿದೆ.

ಎಸ್ ಡಿ ಪಿ ಐ ಗೆ ಸಮಾಜಮುಖಿ ಹೋರಾಟಗಳೇ ಶಕ್ತಿ

ದ ಕ ಜಿಲ್ಲೆಯಲ್ಲಿ ನಿಧಾನವಾಗಿ ತನ್ನ ರಾಜಕೀಯ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾ ಬಂದಿರುವ ಎಸ್ಡಿಪಿಐಗೆ ಇದೊಂದು ಶಕ್ತಿಪ್ರದರ್ಶನದ ವೇದಿಕೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗಾಗಿಸಿ 27 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು, ಜಿಲ್ಲೆಯ ಮೂರನೇ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದಿತ್ತು. ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಮೇಲಾಟವಿಲ್ಲದಿದ್ದರೂ, ಪಕ್ಷದ ಆಂತರಿಕ ಮೂಲಗಳ ಪ್ರಕಾರ ರಿಯಾಝ್ ಫರಂಗಿಪೇಟೆ ಅಥವಾ ಇಲ್ಯಾಸ್ ತುಂಬೆ ಇಬ್ಬರಲ್ಲೊಬ್ಬರನ್ನು ಅಭ್ಯಥಿಯಾಗಿ ಆಯ್ಕೆಗೊಳಿಸುವುದು ಬಹುತೇಕ ಖಚಿತಗೊಂಡಿದೆ. ಅಭ್ಯರ್ಥಿ ಯಾರೇ ಇದ್ದರೂ ಪಕ್ಷದ ಸಮಾಜಮುಖಿ, ದಲಿತ ಹಾಗೂ ಅಲ್ಪ ಸಂಖ್ಯಾತರ ಹಕ್ಕುಗಳ ಪರವಾಗಿನ ಹೋರಾಟಗಳನ್ನು ಬೆಂಬಲಿಸುವವರು ಪಕ್ಷಕ್ಕಾಗಿ ಮತ ನೀಡುತ್ತಾರೆನ್ನುವುದು ನಾಯಕರ ಆತ್ಮವಿಶ್ವಾಸದ ಮಾತುಗಳು.

ಎಸ್ಡಿಪಿಐಯ ಸ್ಪರ್ಧೆಯನ್ನು ಕಾಂಗ್ರೆಸ್ ಕಡೆಗಣಿಸುವ ಹಾಗೆಯೂ ಇಲ್ಲ. ಕಳೆದ ಬಾರಿಗಿಂತಲೂ ಪಕ್ಷ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಅದಲ್ಲದೆ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿರುವ ವಿಚಾರಗಳನ್ನೇ ಹೆಚ್ಚಾಗಿ ಜನರ ಬಳಿಗೆ ತಲುಪಿಸಲು ಪ್ರಯತ್ನಿಸುತ್ತಿದೆ. ಕಡೆಗಣಿಸಲ್ಪಟ್ಟ ಮುಸ್ಲಿಮ್ ಅಭ್ಯರ್ಥಿತನದ ಕೂಗು ಕೂಡಾ ಈ ಬಾರಿ ಎಸ್ಡಿಪಿಐಗೆ ವರದಾನವಾಗುವುದರಲ್ಲಿ ಸಂಶಯವಿಲ್ಲ.

ಬಿಜೆಪಿ ಟಿಕೆಟಿಗಾಗಿ ಆಂತರಿಕ ಕಚ್ಚಾಟ !

ಬಿಜೆಪಿಯಲ್ಲಿ ಹಾಲಿ ಸಂಸದರಾಗಿರುವ ನಳಿನ್ ಕುಮಾರರ ಸ್ಪರ್ಧೆಯ ವಿರುದ್ಧ ಸ್ವಪಕ್ಷೀಯರೇ ತಗಾದೆ ತೆಗೆದಿದ್ದು, ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರದಲ್ಲಿ ನಿಂತ ನೀರಂತಾಗಿರುವ ಅಭಿವೃದ್ಧಿ ಕಾರ್ಯಗಳ ವಿರುದ್ಧ ಜನಸಾಮಾನ್ಯರ ಕೂಗಿಗೆ ಬಿಜೆಪಿಗರೂ ಧ್ವನಿಗೂಡಿಸಿ, ನಳಿನ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಅದರಲ್ಲೂ ಪಂಪ್’ವೆಲ್ ಮೇಲ್ಸೇತುವೆ ಕಾಮಗಾರಿಯ ಹಿನ್ನಡೆಗೆ ನಳಿನ್ ಒಬ್ಬರನ್ನೇ ಜವಬ್ದಾರರನ್ನಾಗಿಸುವುದರ ಹಿಂದೆ ಅವರನ್ನು ವಿರೋಧಿಸುವ ಬಿಜೆಪಿಗರೇ ಇದ್ದಾರೆನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಬಿಜೆಪಿ ಟಿಕೆಟಿಗಾಗಿ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಸತ್ಯಜಿತ್ ಸುರತ್ಕಲ್ ಈ ಬಾರಿ ನಳಿನ್ ವಿರುದ್ಧ ಮತ್ತೊಮ್ಮೆ ತೊಡೆ ತಟ್ಟಿದ್ದಾರೆ. ಪಕ್ಷದಲ್ಲಿ ಸೀಮಿತ ವರ್ಗವೊಂದರ ಬೆಂಬಲದೊಂದಿಗೆ ಅಖಾಡದಲ್ಲಿರುವ ಸತ್ಯಜಿತ್ ಗೆ ಟಿಕೆಟ್ ಈ ಬಾರಿ ಕೂಡಾ ಸಿಗುವುದು ಅನುಮಾನ ಎನ್ನಲಾಗಿದೆ.

ಇದೇ ವೇಳೆ ಹಲವಾರು ವರ್ಷಗಳಿಂದ ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣದಲ್ಲಿ ವೇದವ್ಯಾಸ್ ಕಾಮತ್ ಜೊತೆಗೆ ಟಿಕೆಟಿಗಾಗಿ ಸ್ಪರ್ಧಿಸಿದ್ದ ಕ್ಯಾಪ್ಟನ್ ಬ್ರಿಜೇಶ್ ಚೌಟ ಈ ಬಾರಿ ನಳಿನ್ ಜೊತೆಗೆ ಟಿಕೆಟಿಗಾಗಿ ಪ್ರಬಲ ಪೈಪೋಟಿ ನೀಡುತ್ತಿದ್ದು, ಹಿಂದುತ್ವದ ಆಧಾರದ ಮೇಲೆ ದೆಹಲಿ ನಾಯಕರು ಅಭ್ಯರ್ಥಿಗಳನ್ನು ಆರಿಸಲಿದ್ದು, ಬ್ರಿಜೇಶ್ ಚೌಟರನ್ನು ಆಯ್ಕೆಗೊಳಿಸುವ ಸಂಭವನೀಯತೆ ಕಡಿಮೆ ಎನ್ನಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಆಂತರಿಕವಾಗಿ ಪಕ್ಷದೊಳಗೆ ಎಷ್ಟೇ ಕಿತ್ತಾಟಗಳಿದ್ದರೂ, ದೆಹಲಿ ಮಟ್ಟದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ನಳಿನ್ ಕುಮಾರ್ ಕಟೀಲ್ ಮತ್ತೊಮ್ಮೆ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಪಕ್ಷದ ಜಿಲ್ಲಾ ನಾಯಕರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲವಾದರೂ, ರಾಜ್ಯ ಮಟ್ಟದ ನಾಯಕರು “ಟಿಕೆಟಿಗಾಗಿ ಪಕ್ಷದೊಳಗೆ ಆಂತರಿಕ ಸ್ಪರ್ಧೆ ಇರುವುದು ನಿಜ. ಪಕ್ಷದೊಳಗಿನ ಪ್ರಜಾಪ್ರಭುತ್ವದ ನೀತಿಯಂತೆ ಇದು ಸಾಮಾನ್ಯ ಕೂಡಾ. ಆದರೆ ಟಿಕೆಟ್ ಕುರಿತಂತೆ ಬಹಿರಂಗ ಹೇಳಿಕೆ, ಫ್ಲೆಕ್ಸ್ ಹಾಕಿಸುವುದು, ವಾಟ್ಸಪ್ ಚರ್ಚೆಗಳಿಗೆ ಕಡಿವಾಣ ಹಾಕಲಾಗಿದೆ” ಎಂದವರು ತಿಳಿಸುತ್ತಾರೆ. ಆ ಮೂಲಕ ಪರೋಕ್ಷವಾಗಿ ನಳಿನ್ ಕುಮಾರ್ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗುವ ಕುರಿತಾಗಿನ ಸುಳಿವು ನೀಡುತ್ತಾರೆ.

ಒಟ್ಟಿನಲ್ಲಿ ಹಲವು ಕೋನಗಳಿಂದ ಈ ಬಾರಿಯ ಮಂಗಳೂರು ಲೋಕಸಭಾ ಚುನಾವಣೆ ಮಹತ್ವ ಪಡೆದಿದೆ. ಪ್ರಜ್ಞಾವಂತರ ಜಿಲ್ಲೆಯೆಂದು ಖ್ಯಾತಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯು ಆಂತರಿಕ ಕಚ್ಚಾಟಗಳನ್ನು ಮೆಟ್ಟಿ ಮತ್ತೊಮ್ಮೆ ತನ್ನ ಕೋಟೆಯನ್ನು ಭದ್ರಪಡಿಸುವುದೇ, ಕಾಂಗ್ರೆಸ್ ಗೆ 28 ವರ್ಷಗಳಿಂದ ಮರೀಚಿಕೆಯಾಗಿರುವ ವಿಜಯ ಪತಾಕೆಯನ್ನು ಈ ಬಾರಿ ಹಾರಿಸಿ ಇತಿಹಾಸ ಬರೆಯುವುದೇ ಮತ್ತು ಎಸ್ಡಿಪಿಐ ಇದುವರೆಗೂ ಮಾಡಿರುವ ಸಮಾಜಮುಖಿ ಹೋರಾಟಗಳು ಮತದಾರರ ಮೇಲೆ ಯಾವ ಮಟ್ಟದಲ್ಲಿ ಪ್ರಭಾವ ಬೀರುವುದು ಎನ್ನುವುದನ್ನು ಇನ್ನು ಕೆಲವೇ ದಿನಗಳಲ್ಲಿ ಮತದಾರ ನಿರ್ಧರಿಸಲಿದ್ದಾನೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group