
ವರದಿಗಾರ (ಮಾ.08): ಬಾಬರಿ ಮಸ್ಜಿದ್ ಮತ್ತು ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ವಿವಾದಕ್ಕೆ ಸಂಬಂಧಿಸಿ ಸಂಧಾನದ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಹೇಳಿದೆ.
ಸಂಧಾನಕ್ಕಾಗಿ ಸಮಿತಿಯೊಂದನ್ನೂ ರಚಿಸಲಾಗಿದೆ. ಈ ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ಅವರು ಅಧ್ಯಕ್ಷರಾಗಿರಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ.
ಸಂಧಾನ ಪ್ರಕ್ರಿಯೆಯನ್ನು ಫೈಜಾಬಾದ್ನಲ್ಲಿ ನಡೆಸಬೇಕು ಮತ್ತು ಸಂಪೂರ್ಣವಾಗಿ ಚಿತ್ರೀಕರಿಸಬೇಕು. ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರೂ ಸಂಧಾನ ಸಮಿತಿಯಲ್ಲಿರಬೇಕು ಎಂದು ಸಂವಿಧಾನ ಪೀಠ ಹೇಳಿದೆ. ಸಂಧಾನ ಪ್ರಕ್ರಿಯೆ ನಾಲ್ಕು ವಾರಗಳ ಒಳಗೆ ಆರಂಭಗೊಂಡು ಎಂಟು ವಾರಗಳ ಒಳಗೆ ಪೂರ್ಣಗೊಳ್ಳಬೇಕು. ಸಂಧಾನಕಾರರಿಗೆ ಉತ್ತರ ಪ್ರದೇಶ ಸರ್ಕಾರ ಎಲ್ಲ ಸೌಲಭ್ಯ ಒದಗಿಸಬೇಕು. ಅಗತ್ಯವೆನಿಸಿದಲ್ಲಿ ಸಂಧಾನಕಾರರು ಹೆಚ್ಚಿನ ಕಾನೂನು ಸಹಕಾರ ಪಡೆಯಬಹುದು ಎಂದೂ ಪೀಠ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ವಿಚಾರಣೆ ನಡೆಸಿದ್ದ ಸಂವಿಧಾನ ಪೀಠ, ಸಂಧಾನದ ಸಲಹೆ ನೀಡಿತ್ತು. ಆದರೆ, ನಿರ್ಮೋಹಿ ಅಖಾಡ ಹೊರತುಪಡಿಸಿದಂತೆ ಉಳಿದ ಹಿಂದುತ್ವಪರ ಸಂಘಟನೆಗಳು ಈ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವುಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಮುಸ್ಲಿಂ ಸಂಘಟನೆಗಳು ಪ್ರಸ್ತಾವವನ್ನು ಸ್ವಾಗತಿಸಿದ್ದವು. ಒಮ್ಮತ ಮೂಡದ್ದರಿಂದ ನ್ಯಾಯಾಲಯ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು.
