ನಿಮ್ಮ ಬರಹ

ಭಾರತ ರತ್ನವೋ…. ಬ್ರಾಹ್ಮಣ ರತ್ನವೋ….?

-ನಿಮ್ಮ ಬರಹದಲ್ಲಿ ಇಸ್ಮತ್ ಪಜೀರ್

ಭಾರತ ರತ್ನದಲ್ಲೂ ಸಾಮಾಜಿಕ ಅಸಮಾನತೆಯ ಶೃಂಖಲೆ

ವರದಿಗಾರ (ಜ.27): ಇಂದು ಕೆಲವು ಕ್ಷೇತ್ರದ ಗಣ್ಯರಿಗೆ ಭಾರತದ ಉಚ್ಚ ಮತ್ತು ಪರಮೋಚ್ಚ ಪ್ರಶಸ್ತಿಗಳನ್ನು ಪ್ರಧಾನಿಸಲಾಯಿತು. ಎಂದಿನಂತೆಯೇ ಇಂದು ಪ್ರಧಾನಿಸಲಾದ ಪ್ರಶಸ್ತಿಯೂ ವಿವಾದದಿಂದ ಮುಕ್ತವಾಗಿರಲಿಲ್ಲ.

ಇತ್ತೀಚೆಗೆ ಲಿಂಗೈಕ್ಯರಾದ ಸಿದ್ಧಗಂಗಾ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಬೇಡಿಕೆ ಇಂದು ನಿನ್ನೆಯದ್ದೇನಲ್ಲ. ಮೊನ್ನೆ ಸ್ವಾಮೀಜಿ ಲಿಂಗೈಕ್ಯರಾದ ಬಳಿಕವಂತೂ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೂ ಸಿದ್ದಗಂಗಾ ಸ್ವಾಮಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ ಕನ್ನಡಿಗರ ಈ ಬೇಡಿಕೆ ಕೈಗೂಡಲಿಲ್ಲ. ಅದಕ್ಕೆ ಒಂದು ಕಾರಣವನ್ನೂ ಬಿಜೆಪಿಗರು ನೀಡುತ್ತಿದ್ದಾರೆ.ಒಮ್ಮೆ  ಭಾರತ ಸರಕಾರದ ಯಾವುದೇ ಒಂದು  ಉಚ್ಚ ಪ್ರಶಸ್ತಿ ಸಿಕ್ಕರೆ ಪುನಃ ಅದೇ ವ್ಯಕ್ತಿಗೆ ಇನ್ನೊಂದು ಉಚ್ಚ ಪ್ರಶಸ್ತಿ ನೀಡಬೇಕೆಂದರೆ ಐದು ವರ್ಷಗಳ ಅಂತರವಿರಬೇಕು.

ಆದರೆ ಈ ಸಮಜಾಯಿಷಿ ಒಪ್ಪತಕ್ಕದ್ದಲ್ಲ.‌ಅಂತಹ ನಿಬಂಧನೆಗಳಿರುವುದು ಪದ್ಮ ಪ್ರಶಸ್ತಿಗಳಿಗೆಯೇ ಹೊರತು ಭಾರತ ರತ್ನಕ್ಕಲ್ಲ.ಹಾಗೆ ನೋಡಹೋದರೆ ವಾಜಪೇಯಿಯವರ ನೇತೃತ್ವದ ಎನ್.ಡಿ.ಎ.ಸರಕಾರ 1999  ರಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಅದೇ ವಾಜಪೇಯಿ ಸರಕಾರ 2001 ರಲ್ಲಿ ಕೇವಲ ಎರಡು ವರ್ಷಗಳ ಅಂತರದಲ್ಲಿ ಲತಾ ಮಂಗೇಶ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

ಭಾರತ ರತ್ನದಲ್ಲಿ ಬ್ರಾಹ್ಮಣರದ್ದೇ ಸಿಂಹಪಾಲು :

ಸ್ವಾತಂತ್ರ್ಯ ನಂತರದಿಂದ ಈ ವರೆಗೆ ಒಟ್ಟು ನಲ್ವತ್ತೆಂಟು ಮಂದಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ. ಅದರಲ್ಲಿ ಬರೋಬ್ಬರಿ ಇಪ್ಪತ್ತ ನಾಲ್ಕು ಮಂದಿಗೆ ಅಂದರೆ ಸರಿಯಾಗಿ ಶೇ. 50 ಭಾರತ ರತ್ನ ಪ್ರಶಸ್ತಿ ಬ್ರಾಹ್ಮಣ ಜಾತಿಯವರಿಗೆ ಸಂದಿದೆ. ಅಂದ ಮಾತ್ರಕ್ಕೆ ಪ್ರಶಸ್ತಿ ಪಡೆದವರೆಲ್ಲಾ ಭಾರತ ರತ್ನಕ್ಕೆ ಅರ್ಹರಲ್ಲವೆಂದಲ್ಲ. ಅದಾಗ್ಯೂ ಹಿಂದಿನಿಂದಲೂ ಭಾರತ ರತ್ನ ನೀಡುವಲ್ಲಿ ಸಾಮಾಜಿಕ ನ್ಯಾಯ ಕಾಪಾಡುವಲ್ಲಿ ಭಾರತದ ಹೆಚ್ಚಿನ ಸರಕಾರಗಳು ಎಡವಿದ್ದು ಎದ್ದು ಕಾಣುತ್ತದೆ. ಇವಲ್ಲದೇ ಹನ್ನೊಂದು ಮಂದಿ ಉಚ್ಚ ಜಾತಿಯವರಿಗೆ ಭಾರತ ರತ್ನ ನೀಡಲಾಗಿದೆ. ಒಟ್ಟು ನಲ್ವತ್ತೆಂಟು ಭಾರತ ರತ್ನಗಳಲ್ಲಿ ಮೂವತ್ತೈದು ಮಂದಿ ಮೇಲ್ಜಾತಿ ಮಂದಿಗಳಾಗಿದ್ದಾರೆ. ಮುಸ್ಲಿಂ ಸಮುದಾಯದ ಆರು ಮಂದಿಗೆ, ಕ್ರೈಸ್ತ ಸಮುದಾಯದ ಇಬ್ಬರಿಗೆ ನೀಡಲಾಗಿದೆ. (ಮದರ್ ಥೆರೇಸಾ ಮತ್ತು ನೆಲ್ಸನ್ ಮಂಡೇಲಾ). ಹಿಂದುಳಿದ ವರ್ಗಗಳ ಕೇವಲ ಮೂರು ಮಂದಿಗೆ ಮತ್ತು ದಲಿತ ಸಮುದಾಯದ ಒಬ್ಬರಿಗೆ (ಬಾಬಾ ಸಾಹೇಬ್ ಅಂಬೇಡ್ಕರ್) ನೀಡಲಾಗಿದೆ. ಇದು ಸ್ಪಷ್ಟವಾಗಿ ಸಾಮಾಜಿಕ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ.

ನಿರಾಕರಿಸಿದವರಿಗೇ ಮತ್ತೆ ಪದ್ಮ ಪ್ರಶಸ್ತಿ:

ಭಾರತದ ಸುಪ್ರಸಿದ್ದ ಇತಿಹಾಸಕಾರ್ತಿ ರೋಮಿಲಾ ಥಾಪರ್ ಅವರ ಹೆಸರನ್ನು 1992ರಲ್ಲಿ ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.‌ಆದರೆ ಅವರು ಅದನ್ನು ಸ್ವೀಕರಿಸಲಿಲ್ಲ.ಮತ್ತು ಅವರ ನಿರಾಕರಣೆಗೆ ತನ್ನದೇ ಆದ ಸಮರ್ಪಕ ಕಾರಣವನ್ನೂ ನೀಡಿದ್ದರು. 1992 ರಲ್ಲಿ ಪ್ರಶಸ್ತಿ ನಿರಾಕರಿಸಿದ ಅವರು ನಾನು ಯಾವುದೇ ಸರಕಾರಗಳು ನೀಡುವ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದಿದ್ದರು. 2005ರಲ್ಲಿ 1992ರ ನಿರಾಕರಣೆಯ ಹೊರತಾಗಿಯೂ ಮತ್ತೆ ಅವರ ಹೆಸರನ್ನು ಪದ್ಮ ಪ್ರಶಸ್ತಿಗೆ ಘೋಷಿಸಲಾಯಿತು. ಆದರೆ ಥಾಪರ್ ಎರಡನೇ ಬಾರಿಯೂ ಪ್ರಶಸ್ತಿ ನಿರಾಕರಿಸಿ ಪ್ರಬುದ್ಧತೆ ಮೆರೆದಿದ್ದರು.

ಒಟ್ಟಿನಲ್ಲಿ ಭಾರತದ ಅತ್ಯುಚ್ಚ ಪ್ರಶಸ್ತಿಗಳ ಜೊತೆಜೊತೆಗೇ ವಿವಾದವೂ ಅಂಟಿಕೊಂಡೇ ಬಂದಿದೆ.

ಮತ್ತು ಭಾರತ ರತ್ನದ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯವನ್ನು ತೀರಾ ಕಾಪಾಡಲಿಲ್ಲ ಎನ್ನುವುದಂತೂ ಸ್ಪಷ್ಟವಾಗಿ ಗೋಚರಿಸುತ್ತದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group