ಸಾಮಾಜಿಕ ತಾಣ

ಶಿವಮೊಗ್ಗ, ಮಂಗಳೂರಲ್ಲಿ ರಾರಾಜಿಸುತ್ತಿದೆ ದೇಶವಿರೋಧಿ ಕಾರ್ಯಕ್ರಮದ ಪೋಸ್ಟರ್’ಗಳು  !!

ವರದಿಗಾರ  (ಜ 22) : ಸರ್ವಧರ್ಮಗಳ ಜನರಿರುವ ಭಾರತದ ಅಸ್ಮಿತೆಯು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವದ ಸುಂದರ ತತ್ವಗಳ ಮೇಲೆ ಗುರುತಿಸಿಕೊಳ್ಳುತ್ತದೆ. ಅದಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಲೇ ಇದೆ. ಅದೇ ರೀತಿ ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ಪ್ರಜಾಪ್ರಭುತ್ವ ಭಾರತಕ್ಕೆ ಸೆಡ್ಡು ಹೊಡೆಯುವ ಪ್ರಯತ್ನವೆಂಬಂತೆ “ಹಿಂದೂ ರಾಷ್ಟ್ರ” ಸ್ಥಾಪನೆಯ ಕಾರ್ಯಕ್ರಮದ ಪೋಸ್ಟರ್ ಗಳು ಇಡೀ ನಗರಾದ್ಯಂತ ರಾರಾಜಿಸುತ್ತಿದೆ. ಇದರ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಹಿಂದೂ ಜನಜಾಗೃತಿ ಸಮಿತಿ ಎಂಬ ಸಂಘಟನೆ ಆಯೋಜಿಸುತ್ತಿರುವ “ಹಿಂದೂ ರಾಷ್ಟ್ರ ಜಾಗೃತಿ ಸಭೆ” ಎಂಬ ಕಾರ್ಯಕ್ರಮ ಜನವರಿ 27 ರಂದು ಮಂಗಳೂರಿನ ಕೇಂದ್ರ ಮೈದಾನ ಹಾಗೂ ಶಿವಮೊಗ್ಗದ ಎನ್ ಡಿ ವಿ ಹಾಸ್ಟೆಲ್ ಮೈದಾನದಲ್ಲಿ ನಡೆಯುವ ಕುರಿತು ಪೋಸ್ಟರ್ ಗಳನ್ನು ಅಂಟಿಸಲಾಗಿದೆ.

ಭಾರತದ ಸಂವಿಧಾನ, ಭಾರತವನ್ನು ಒಂದು ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರ (secular democratic country) ಎಂದು ಘೋಷಿಸುತ್ತದೆ. ಇಲ್ಲಿ ಯಾವುದೇ ಧರ್ಮದ ಆಧಾರದಲ್ಲಿ ದೇಶ ಕಟ್ಟುತ್ತೇವೆ ಎನ್ನುವುದು ಸಂವಿಧಾನ ವಿರೋಧೀ ಕೃತ್ಯ, ಮಾತ್ರವಲ್ಲ ದೇಶವಿರೋಧೀ ಕೃತ್ಯವೂ ಹೌದು.. ಆದರೆ ಶಿವಮೊಗ್ಗದ ಮತ್ತು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಈ ಸಂವಿಧಾನ ವಿರೋಧಿ ಕಾರ್ಯಕ್ರಮಗಳು ರಾಜಾರೋಷವಾಗಿ ಪೋಸ್ಟರ್ ಅಂಟಿಸುವ ಮಟ್ಟಕ್ಕೆ ಬಂದು ತಲುಪಿರುವುದು ಮಾತ್ರ ಆತಂಕಕ್ಕೀಡುಮಾಡಿದೆ.

ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ವರದಿಗಾರ ತಂಡ, ಜಿಲ್ಲೆಯ ಎಸ್ಪಿ ಅಭಿನವ್ ಖರೆ ಅವರನ್ನು ಸಂಪರ್ಕಿಸಿದಾಗ, ಕಾರ್ಯಕ್ರಮದ ಆಯೋಜಕರು ಇಂತಹಾ ಕಾರ್ಯಕ್ರಮಕ್ಕೆ ಅನುಮತಿ ಪಡೆದಿರುವ ಕುರಿತು ನಮಗೆ ಇದುವರೆಗೂ ಮಾಹಿತಿ ಬಂದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಕಾರ್ಯಕ್ರಮದ ಆಯೋಜಕರ ವಿರುದ್ದ ಸ್ವಯಂಪ್ರೇರಿತ ದೇಶದ್ರೋಹದ ಕೇಸು ದಾಖಲಿಸಿದರೆ ಮುಂದೆ ಇಂತಹಾ ಕಾರ್ಯಕ್ರಮಗಳು ನಡೆಯುವುದನ್ನು ತಪ್ಪಿಸಬಹುದಾಗಿದೆ.

ಜಾಗತಿಕ ಮಟ್ಟದಲ್ಲಿ “ಇಸ್ಲಾಮಿಕ್ ರಾಷ್ಟ್ರ” ಮಾಡುತ್ತೇವೆ ಎಂಬ ಗುರಿಯೊಂದಿಗೆ ಅಮಾಯಕ ಜನರ ಮಾರಣಹೋಮ ನಡೆಸುತ್ತಿರುವ ಐಸಿಸ್  ಭಯೋತ್ಪಾದಕರ ಪ್ರಯತ್ನಗಳು ಹೇಗೆ ಮಾರಕವೋ ಅದೇ ರೀತಿ ಭಾರತವೆಂಬ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ “ಹಿಂದೂ ರಾಷ್ಟ್ರ” ಸ್ಥಾಪನೆಯ ಪ್ರಯತ್ನವೂ ಮಾರಕವೇ ಆಗಿರುತ್ತದೆ. ಇಂತಹಾ ದೇಶದ್ರೋಹಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದುದು ಅತ್ಯಗತ್ಯವಾಗಿದೆ.

 

To Top
error: Content is protected !!
WhatsApp chat Join our WhatsApp group