ವರದಿಗಾರ (ಜ. 21): ಸಮಾಜದಲ್ಲಿ ಕೋಮುಗಲಭೆಯ ಮೂಲಕ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಕಿರಿ ಮಂಜೇಶ್ವರ ಸಮೀಪದ ನಾಗೂರು ನೂರ್ ಜಾಮೀಯ ಜುಮಾ ಮಸೀದಿಯ ಆವರಣದಲ್ಲಿ ಹಂದಿಯ ಕಿವಿ ಹಾಗೂ ಕಾಲಿನ ಭಾಗವನ್ನು ಎಸೆದಿರುವ ಪ್ರಕರಣವನ್ನ ಬೇದಿಸಿರುವ ಪೊಲೀಸ್ ಇಲಾಖೆ ಈ ಸಂಬಂಧ ಒಟ್ಟು ಐದು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಉಪ್ಪುಂದದ ರವಿಚಂದ್ರ (43), ಆತನ ತಂದೆ ನಾಗರಾಜ್ (72), ತೊಂಡೆ ಮಕ್ಕಿಯ ನವೀನ್ ಖಾರ್ವಿ (25), ಅಮ್ಮನ್ನವರ್ ತೊಪ್ಪಲುವಿನ ಶ್ರೀಧರ ಖಾರ್ವಿ (22) ಹಾಗು ರಾಘವೇಂದ್ರ ಖಾರ್ವಿ (24) ಎಂದು ಪೊಲೀಸರು ಹೇಳಿದ್ದಾರೆ. ಜ.14ರಂದು ರಾತ್ರಿ 10.55ರ ಸುಮಾರಿಗೆ ಬೈಕಿನಲ್ಲಿ ಬಂದ ಇಬ್ಬರು ನಾಗೂರು ನೂರು ಜಾಮೀಯ ಜುಮಾ ಮಸೀದಿಯ ಆವರಣದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಉದ್ದೇಶದಿಂದ ಹಂದಿ ಮಾಂಸ ಎಸೆದು ಪರಾರಿಯಾಗಿದ್ದರು. ಜ.15ರಂದು ಬೆಳಗಿನ ಜಾವ (ನಮಾಜ್ ನಿರ್ವಹಿಸಲು ಆಗಮಿಸಿದಾಗ) 5.30ರ ಸುಮಾರಿಗೆ ಈ ಪ್ರಕರಣ ಬೆಳಕಿಗೆ ಬಂದಿತ್ತು. ಮಸೀದಿಗೆ ಅಳವಡಿಸಲಾದ ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಕಾರ್ಯ ಪ್ರವೃತ್ತರಾದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಬಂಧಿತ ಆರೋಪಿಗಳು
ಪ್ರಕರಣದ ಆರೋಪಿಗಳ ಪತ್ತೆಗಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು. ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ್ ಆರ್.ಗುನಗಾ, ಬೈಂದೂರು ಠಾಣೆ ಉಪ ನಿರೀಕ್ಷಕ ತಿಮ್ಮೇಶ್ ಬಿ.ಎನ್. ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡವು ಪ್ರಕರಣವನ್ನು ಬೇಧಿಸಿ ಸಂಚಿನಲ್ಲಿ ಪಾಲ್ಗೊಂಡ ಐವರು ಆರೋಪಿಗಳನ್ನು ಇಂದು ಬೈಂದೂರಿನಲ್ಲಿ ಬಂಧಿಸಿದ್ದಾರೆ.
ಉಪ್ಪುಂದದ ರವಿಚಂದ್ರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಪರಿಸರದಲ್ಲಿ ಕೋಮುಗಲಭೆ ಸೃಷ್ಠಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ. ಈತ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬೈಂದೂರು ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ರೌಡಿ ಶೀಟರ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕುಂದಾಪುರ ಉಪವಿಭಾಗದ ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಸಂತೋಷ್ ಖಾರ್ವಿ, ಶ್ರೀಧರ, ನಾಗರಾಜ್ ಖಾರ್ವಿ, ಪ್ರಿನ್ಸ್ ಶಿರೂರು, ರಮೇಶ್ ಕುಲಾಲ್, ಕೃಷ್ಣ ದೇವಾಡಿಗ, ಮೋಹನ ಪೂಜಾರಿ, ಚಂದ್ರಶೇಖರ್, ನಾಗೇಂದ್ರ, ತಾಂತ್ರಿಕ ವಿಭಾಗದ ಶಿವಾನಂದ ಭಾಗವಹಿಸಿ ದ್ದರು.ಈ ತಂಡಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ 10 ಸಾವಿರ ರೂ. ನಗದು ಬಹುಮಾನವನ್ನು ಘೋಷಿಸಿ, ಪೊಲೀಸರನ್ನು ಕಾರ್ಯವನ್ನು ಶ್ಲಾಘಿಸಿ ಗೌರವಿಸಿದ್ದಾರೆ.

