ನಿಮ್ಮ ಬರಹ

ರಾಜೇಂದ್ರ ಕುಮಾರರ ಪ್ರತಿಷ್ಟೆಯ ಪ್ರದರ್ಶನಕ್ಕೆ ಮಂಗಳೂರಿಗರನ್ನು  ಸತಾಯಿಸಿದ್ದು ನ್ಯಾಯವೇ…?

ಲೇಖನ: ಇಸ್ಮತ್ ಪಜೀರ್

ವರದಿಗಾರ (ಜ.20): ನಿನ್ನೆ ಬೆಳಗ್ಗಿನಿಂದ ಮಂಗಳೂರನ್ನು ಅಸ್ತವ್ಯಸ್ಥಗೊಳಿಸಲಾಗಿತ್ತು. ಕಾರಣವಿಷ್ಟೆ ಎಂ.ಎನ್.ರಾಜೇಂದ್ರ ಕುಮಾರ್ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಇಪ್ಪತ್ತೈದು ವರ್ಷ ಪೂರೈಸಿದ್ದಕ್ಕೆ ಅವರನ್ನು ವೈಭವೀಕರಿಸಲು ನಿನ್ನೆ ಯಾವುದೇ ಪೂರ್ವ ಮಾಹಿತಿ ನೀಡದೇ ಮಂಗಳೂರು ಮಹಾನಗರವನ್ನೇ ಅಸ್ತವ್ಯಸ್ಥಗೊಳಿಸಲಾಯಿತು.‌ ಇದರಿಂದಾಗಿ ಮಂಗಳೂರಿಗರು ಮತ್ತು ಮಂಗಳೂರಿಗೆ ಬಂದವರೆಲ್ಲಾ ಅತೀವ ತೊಂದರೆಪಡಬೇಕಾಯಿತು.

ಒಂದೆಡೆ ಜಿಲ್ಲೆ ಮತ್ತು ರಾಜ್ಯದ ವಿವಿದೆಡೆಯಿಂದ ಬರುವ ಬಸ್ಸುಗಳನ್ನೆಲ್ಲಾ ಮಂಗಳೂರಿಗೆ ಪ್ರವೇಶಿಸುವ ಪಂಪ್ ವೆಲ್ ನಲ್ಲೇ ತಡೆಯಲಾಯಿತು. ಮತ್ತು ಒಮ್ಮೆ ನಗರ ಪ್ರವೇಶಿಸಿದ ಬಸ್ಸು ನಗರದಿಂದ ಹೊರಹೋಗದಂತೆಯೂ ತಡೆಯಲಾಯಿತು. ಯಾರು ತಡೆದರು ಎಂಬ ಪ್ರಶ್ನೆ ನೀವು ಕೇಳಬಹುದು.ಅಧಿಕೃತವಾಗಿ ಯಾರೂ ತಡೆಯಲಿಲ್ಲ.‌ ಆದರೆ ತಡೆಯಾಗುವಂತೆ ಮಾಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ವ್ಯಾಪಾರಿಗಳು, ಪ್ರವಾಸಿಗಳು, ಹೀಗೆ ಸಮಾಜದ ಎಲ್ಲಾ ವರ್ಗವೂ ಕಷ್ಟ ಅನುಭವಿಸಿದೆ.‌ಎಲ್ಲಿಯವರೆಗೆಂದರೆ‌ ಆಂಬುಲೆನ್ಸ್ ಗಳೂ ಪಂಪ್ ವೆಲ್‌ನಿಂದ ಮುಂದೆ ಹೋಗಲು ಹರಸಾಹಸ ಪಡಬೇಕಾಗಿತ್ತು.

ಮನೆಯಿಂದ ಶಾಲೆ ಕಾಲೇಜಿಗೆಂದು ಹೊರಟ ವಿದ್ಯಾರ್ಥಿಗಳು ಪಂಪ್ ವೆಲ್‌ನಲ್ಲಿ ಇಳಿದು ನಡೆಯಬೇಕಾಯಿತು. ಕೆಲಸಕ್ಕೆ ಹೋಗುವವರು‌ ತಡವಾದುದರಿಂದ ಒಂದಿಡೀ ದಿನದ ಕೆಲಸ ಕಳೆದುಕೊಳ್ಳಬೇಕಾಯಿತು.‌ಕೂಲಿ‌ ಕಾರ್ಮಿಕರಿಗಂತೂ ಅರ್ಧ ಗಂಟೆ ತಡವಾದರೂ ಕೆಲಸವಿರುವುದಿಲ್ಲ. ಸಾಮಾನ್ಯವಾಗಿ ಶನಿವಾರವೆಂದರೆ ಸ್ವಲ್ಪ ಹೆಚ್ಚೆ ಬಿಝಿಯಿರುವ ಮಂಗಳೂರು ನಗರ ಇಂದು  ವ್ಯಾಪಾರವಿಲ್ಲದೇ‌‌‌ ಸೊರಗಬೇಕಾಯಿತು. ವಾರದ ಸಂಬಳದವರಿಗೆ ಕೆಲಸಕ್ಕೆ ತೆರಳಲು ಸಾಧ್ಯವಾಗದೇ ಅವರ ಸಂಬಳ ಒಂದು ವಾರ ತಡವಾಗಿ ಸಿಗಬಹುದಾದ ಪರಿಸ್ಥಿತಿಯೂ ನಿರ್ಮಾಣವಾಯಿತು. ಇದರಿಂದಾಗಿ ಇಡೀ ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ಹೊಡೆತ ಬೀಳುತ್ತದೆ. ವಾರದ ಸಂಬಳ ಪಡೆಯುವವರಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರು. ಅವರು ಸಾಮಾನ್ಯವಾಗಿ ತಮ್ಮ ಊರಿನ ದಿನಸಿ ಅಂಗಡಿಗಳಲ್ಲಿ ಸಾಲ ಮಾಡಿ ದಿನಸಿ ಖರೀದಿಸುತ್ತಾರೆ.‌ಹಾಗೆ ಪಡೆದ ಸಾಲವನ್ನು ಶನಿವಾರ ಸಂಬಳ ಪಡೆದ ಬಳಿಕ ಸಂದಾಯ ಮಾಡುತ್ತಾರೆ. ಅವರ ಸಾಲದ ದುಡ್ಡು ವಾಪಾಸ್ ಬರುವುದನ್ನೇ ನಂಬಿ ದಿನಸಿ ಮತ್ತಿರರ ಸಾಮಾನುಗಳನ್ನು ಖರೀದಿಸುವ ಸಣ್ಣ ವ್ಯಾಪಾರಿಗಳು ಹಳ್ಳಿಗಳಲ್ಲಿರುತ್ತಾರೆ. ಅವರಿಗೆ ಶನಿವಾರ ಬರಬೇಕಾದ ದುಡ್ಡು ಬರದಿದ್ದರೆ ಅವರೂ ತಾಪತ್ರಯ ಅನುಭವಿಸಬೇಕಾಗುತ್ತದೆ.‌

ಒಟ್ಟಿನಲ್ಲಿ ಇದರಿಂದ ಜಿಲ್ಲೆಯ‌ ಅರ್ಥ ವ್ಯವಸ್ಥೆ ಏರು ಪೇರಾಗುತ್ತದೆ. ಇನ್ನು ವಿದ್ಯಾರ್ಥಿಗಳ ಸಮಸ್ಯೆ ಬೇರೆಯೇ ಇದೆ.‌ ಸಾಮಾನ್ಯವಾಗಿ ಬಸ್ ಪಾಸ್ ಮೂಲಕ ಹೋಗುವ ವಿದ್ಯಾರ್ಥಿಗಳು ಸರಕಾರಿ ಬಸ್ಸುಗಳನ್ನು ನಂಬಿ ಬರುತ್ತಾರೆ. ಅನೇಕ ಬಡ ವಿದ್ಯಾರ್ಥಿಗಳ ಕೈಯಲ್ಲಿ ಚಿಕ್ಕಾಸೂ ಇರುವುದಿಲ್ಲ. ಸರಕಾರಿ ಬಸ್ಸುಗಳು ಎಲ್ಲೂ ಹೋಗಲಾಗದೇ ಬ್ಲಾಕ್ ಗಳಲ್ಲಿ ಸಿಕ್ಕಿ ಬಿದ್ದುದರ ಪರಿಣಾಮ ವಿದ್ಯಾರ್ಥಿಗಳು ಪರದಾಡಬೇಕಾಗಿ ಬಂದಿತ್ತು.

ಇಷ್ಟು ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಿಂದ ಸ್ವ ಸಹಾಯ ಸಂಘದ ಸದಸ್ಯರನ್ನು ಕರೆತರಲು ಅನೇಕೆಡೆ ಖಾಸಗಿ ಬಸ್ಸುಗಳನ್ನು ಗೊತ್ತು ಮಾಡಲಾಗಿತ್ತು. ನಿಯಮಿತ ಸಂಖ್ಯೆಯ ಬಸ್ಸುಗಳಿರುವ ಹಳ್ಳಿಗಳ ಜನ ಅವುಗಳನ್ನೇ ನಂಬಿರುತ್ತಾರೆ. ಅವರ ರೂಟ್ ಬಸ್ಸುಗಳನ್ನು ರಾಜೇಂದ್ರ ಕುಮಾರರ ಪಟ್ಟಾಭಿಷೇಕದ ರಜತ ವಿಂಶತಿಗೆ ಬಳಸಲಾಗಿದ್ದರಿಂದ ಅವರೆಲ್ಲಾ ಕೆಲಸ ಕಾರ್ಯಗಳು, ದುಡಿಮೆಗಳಿಗೂ ಪೆಟ್ಟು ಬಿದ್ದಿತ್ತು. ನಗರದಲ್ಲಿ ನಡೆದ ಮದುವೆ ಸಮಾರಂಭಗಳಿಗೆ ಆಹ್ವಾನಿತರಿಗೆ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಹಿಳೆಯರು, ವೃದ್ದರು , ನಗರದಲ್ಲಿ ಅಲ್ಲಲ್ಲಿ ಸಿಲುಕಿಕೊಂಡು ತೊಂದರೆ ಅನುಭವಿಸಬೇಕಾಯಿತು.

ಇದಕ್ಕೆ ಯಾರು ಹೊಣೆ..? ಒಟ್ಟಿನಲ್ಲಿ ಸಾರ್ವಜನಿಕರಿಗಾದ ಈ ಅಡಚಣೆ ನ್ಯಾಯವೇ? ಉಳ್ಳವರ , ಅಧಿಕಾರಸ್ಥರ ಮರ್ಜಿಗಾಗಿ, ಪ್ರತಿಷ್ಟೆಗಾಗಿ ಜನಸಾಮಾನ್ಯರೇಕೆ ತೊಂದರೆ ಅನುಭವಿಸಬೇಕು?

To Top
error: Content is protected !!
WhatsApp chat Join our WhatsApp group