ರಾಜ್ಯ ಸುದ್ದಿ

ಕರ್ನಾಟಕದ ರಾಜಕೀಯ ಬೆಳವಣಿಗೆಗಳು ರಾಜ್ಯದ ಹಿತಾಸಕ್ತಿಗೆ ಮಾರಕ: ಎಸ್‍ಡಿಪಿಐ

ವರದಿಗಾರ (ಜ.17): ರಾಜ್ಯದಲ್ಲಿ ವಸ್ತುಶಃ ಅಸ್ಥಿರ ಸರಕಾರವಿದ್ದು ಆಡಳಿತ ಪಕ್ಷಗಳ ಮೈತ್ರಿಯ ಬಗ್ಗೆ ಭಾರೀ ಕೋಲಾಹಲದ ಸುದ್ದಿಗಳು ರಾಜ್ಯದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಬಿಜೆಪಿ ತನ್ನೆಲ್ಲಾ ಶಾಸಕರನ್ನು ದೂರದ ಹರಿಯಾಣದ ಗುರುಗ್ರಾಮ್ ರೆಸಾರ್ಟ್‍ನಲ್ಲಿ ಅಡಗಿಸಿಟ್ಟಿರುವುದು ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಕುದುರೆ ವ್ಯಾಪಾರದ ಎಲ್ಲ ಲಕ್ಷಣಗಳನ್ನು ಎತ್ತಿ ತೋರಿಸುತ್ತದೆ. ಈ ಎಲ್ಲ ರಾಜಕೀಯ ಬೆಳವಣಿಗೆಗಳು ರಾಜ್ಯದ ಹಿತಾಸಕ್ತಿಗೆ ಮಾರಕವೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ರಾಜ್ಯದಲ್ಲಿರುವ ಕಾಂಗ್ರೆಸ್-ಜನತಾದಳ(ಎಸ್) ಪಕ್ಷಗಳ ಮೈತ್ರಿ ಸರಕಾರವು ಆರಂಭದಿಂದಲೇ ಮುಸುಕಿನ ಗುದ್ದಾಟದಿಂದ ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದೆ. ಮುಖ್ಯಮಂತ್ರಿಗಳ ಹತಾಶ ಹೇಳಿಕೆಗಳು ಮತ್ತು ಶಾಸಕರ ವ್ಯತಿರಿಕ್ತ ಹೇಳಿಕೆಗಳು ಮೈತ್ರಿ ಸರಕಾರದ ಒಳಗೆ ಕಾಲೆಳೆಯುವ, ಸ್ವಾರ್ಥ-ಸ್ವಪ್ರತಿಷ್ಠೆ ಮೆರೆಯುವ ಹಣಾಹಣಿಗಳ ಮೇಲಾಟ ಪ್ರತಿಬಿಂಬಿಸುತ್ತಿವೆ. ಬಿಜೆಪಿಯು ರಾಜ್ಯದ ಹಿತಕ್ಕಿಂತ ಮುಖ್ಯವಾಗಿ ತನ್ನ ಸ್ವಾರ್ಥ ರಾಜಕೀಯ ಹಾಗೂ ಅಧಿಕಾರದ ದುರಾಸೆಯೊಂದಿಗೆ ಶಾಸಕರ ಖರೀದಿ-ಆಮಿಷಗಳ ಕೀಳು ಮಟ್ಟದ ರಾಜಕೀಯದ ಹಿಂದೆ ಬಿದ್ದಿರುವುದು ಇದೇನು ಹೊಸತಲ್ಲ ಎಂದು ರಾಜ್ಯದ ಜನತೆ ಚೆನ್ನಾಗಿ ಮನಗಂಡಿದೆ. ರಾಜ್ಯದಲ್ಲಿ ನಡೆಯುವ ಈ ಎಲ್ಲ ಯಕಶ್ಚಿತ್ ರಾಜಕೀಯ ಆಟಗಳಿಂದ ಅಭಿವೃದ್ಧಿ ಹಾಗೂ ಆಡಳಿತಕ್ಕೆ ತೀರಾ ಹಾನಿಯಾಗುತ್ತಿದೆ ಎಂದು ಇಲ್ಯಾಸ್ ಮುಹಮ್ಮದ್ ಹೇಳಿದ್ದಾರೆ.

ರಾಜ್ಯದ ಮೈತ್ರಿ ಸರಕಾರ ಹಾಗೂ ಬಿಜೆಪಿಯು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಅರಿತುಕೊಂಡು ಕಾರ್ಯನಿರ್ವಹಿಸಬೇಕೆಂದು, ಕುದುರೆ ವ್ಯಾಪಾರ, ರೆಸಾರ್ಟ್ ರಾಜಕಾರಣ ಹಾಗೂ ಕಾಲೆಳೆಯುವ ಸ್ವಾರ್ಥ ರಾಜಕಾರಣವನ್ನು ತ್ಯಜಿಸಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಬೇಕೆಂದು ಇಲ್ಯಾಸ್ ಮುಹಮ್ಮದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

To Top
error: Content is protected !!
WhatsApp chat Join our WhatsApp group