ರಾಷ್ಟ್ರೀಯ ಸುದ್ದಿ

ಮುಂಬೈ : ಬಿಜೆಪಿ ನಾಯಕನ ಅಂಗಡಿಯಲ್ಲಿ ಮಾರಕ ಶಸ್ತ್ರಾಸ್ತ್ರಗಳ ಭಂಡಾರವೇ ಪತ್ತೆ !!

ವರದಿಗಾರ  (ಜ 16) :  ಮಹಾರಾಷ್ಟ್ರದ ದೊಂಬಿವಿಲಿಯ ಬಿಜೆಪಿ ನಾಯಕನ ಅಂಗಡಿಯಲ್ಲಿ ಪಿಸ್ತೂಲುಗಳೂ ಸೇರಿದಂತೆ ಮಾರಕಾಯುಧಗಳ ಭಂಡಾರವೇ ಪತ್ತೆಯಾಗಿದೆ. ಘಟನೆಯ ಕುರಿತಂತೆ ದೊಂಬಿವಿಲಿ ಬಿಜೆಪಿಯ ಉಪಾಧ್ಯಕ್ಷನಾಗಿರುವ ಧನಂಜಯ ಕುಲಕರ್ಣಿ (49) ಎಂಬವನನ್ನು ಬಂಧಿಸಲಾಗಿದೆ. ದೊಂಬಿವಿಲಿಯ ತಿಲಕ್ ನಗರ್ ಪ್ರದೇಶದಲ್ಲಿರುವ ಧನಂಜಯನ ಸೌಂದರ್ಯ ಸಾಧನಗಳ ಅಂಗಡಿಗೆ ದಾಳಿ ಮಾಡಿದ ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 170 ಕ್ಕೂ ಹೆಚ್ಚು ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ಅಂಗಡಿಯಿಂದ ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಮಾರಕ ಶಸ್ತ್ರಾಸ್ತ್ರಗಳು

ವಶಪಡಿಸಿಕೊಂಡ ಶಸ್ತ್ರಗಳಲ್ಲಿ 8 ಪಿಸ್ತೂಲುಗಳು, 10 ತಲವಾರುಗಳು, 38 ಪ್ರೆಸ್ ಬಟನ್ ಚಾಕುಗಳು, 25 ಕತ್ತರಿಸುವ ಆಯುಧಗಳು ( choppers), 9 ಕುಕ್ರಿ ಚಾಕುಗಳು , 9 ಮರದ ಹಿಡಿಕೆಯ ಚಾಕುಗಳು, 9 ಹರಿತ ಆಯುಧಗಳು, 3 ಕೊಡಲಿ ಮತ್ತು ಒಂದು ಕುಡುಗೋಲು ಸೇರಿದೆ. ಧನಂಜಯನ ಅಂಗಡಿ ‘ತಪಸ್ಯಾ ಹೌಸ್ ಆಫ್  ಫ್ಯಾಶನ್’ ಸೌಂದರ್ಯ ವರ್ಧಕ ಸಾಧನಗಳ ಅಂಗಡಿಯಾಗಿದೆ ಎಂದು ಕಲ್ಯಾಣ್ ವಲಯದ ಅಪರಾಧ ಪತ್ತೆ ದಳದ ಹಿರಿಯ ಇನ್ಸ್’ಪೆಕ್ಟರ್ ಸಂಜು ಜಾನ್ ತಿಳಿಸಿದ್ದಾರೆ.

ಆರೋಪಿ ಧನಂಜಯ ಕುಲಕರ್ಣಿ

ದೊಂಬಿವಿಲಿ ಬಿಜೆಪಿ ಅಧ್ಯಕ್ಷರಾಗಿರುವ ಸಂಜಯ್ ಬಿದ್ವಾಡ್ಕರ್ ಅವರು ಬಂಧಿತ ಧನಂಜಯ್ ಬಿಜೆಪಿ ದೊಂಬಿವಿಲಿ ಘಟಕದ ಉಪಾಧ್ಯಕ್ಷ ಎಂಬುವುದನ್ನು ದೃಢೀಕರಿಸಿದ್ದಾರೆ. ಯಾವ ಕಾರಣಕ್ಕಾಗಿ ಅವನನ್ನು ಬಂಧಿಸಲಾಗಿದೆ ಎಂದು ತಿಳಿದಿಲ್ಲ ಎಂದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಷ್ಟೊಂದು ಅಪಾರ ಪ್ರಮಾಣದ ಮಾರಕ ಶಸ್ತಾಸ್ತ್ರಗಳನ್ನು ಬಿಜೆಪಿಯ ನಾಯಕನ ಮನೆಯಿಂದ ವಶಪಡಿಸಿಕೊಂಡಿದ್ದರೂ ಕೂಡಾ ದೇಶದ ಮುಖ್ಯವಾಹಿನಿಯ ಮಾಧ್ಯಮಗಳು ಈ ಕುರಿತು ಮೌನ ವಹಿಸಿದ್ದು, ಎಲ್ಲಾ ಮಾಧ್ಯಮಗಳೂ ಕೂಡಾ ಘಟನೆಯ ಭೀಕರತೆಯನ್ನು ಜನಸಾಮಾನ್ಯರಿಂದ ಮುಚ್ಚಿಡುವ ಪ್ರಯತ್ನ ನಡೆಸುತ್ತಿದೆ. ‘ಎ ಎನ್ ಐ’ ಸುದ್ದಿ ಸಂಸ್ಥೆ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಿದ್ದರೂ ಪೊಲೀಸರು ವಶಪಡಿಸಿಕೊಂಡ 8 ಪಿಸ್ತೂಲುಗಳ ಚಿತ್ರವನ್ನು ಮರೆಮಾಚಿದೆ.  ‘ಇಂಡಿಯನ್ ಎಕ್ಸ್’ಪ್ರೆಸ್’ ಘಟನೆಯ ಕುರಿತು ವರದಿ ಪ್ರಕಟಿಸಿದ್ದರೂ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಚಿತ್ರಗಳನ್ನು ಪ್ರಕಟಿಸದೆ ದಿವ್ಯ ಮೌನ ಪಾಲಿಸಿದೆ. ಉತ್ತರಪ್ರದೇಶದ ಬುಲಂದ್ ಶಹರಿನಲ್ಲಿ ಇತ್ತೀಚೆಗೆ ಗೋ ಹತ್ಯೆಯ ನೆಪವೊಡ್ಡಿ ಅಲ್ಲಿನ ಪೊಲೀಸ್ ಇನ್ಸ್’ಪೆಕ್ಟರ್ ಒಬ್ಬರನ್ನು ಗುಂಡಿಟ್ಟು ಕೊಂಡ ಘಟನೆ ಹಸಿರಾಗಿರುವಾಗಲೇ ಮುಂಬೈ ಬಿಜೆಪಿ ನಾಯಕನ ಅಂಗಡಿಯಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಪೊಲೀಸರು ಇದನ್ನು ಆಳವಾಗಿ ತನಿಖೆ ನಡೆಸಿದರೆ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

 

To Top
error: Content is protected !!
WhatsApp chat Join our WhatsApp group