ಅನಿವಾಸಿ ಕನ್ನಡಿಗರ ವಿಶೇಷ

ಮಾನಸಿಕ ರೋಗಿಯೊಬ್ಬರಿಗೆ ಸಹಾಯ ಹಸ್ತ ಚಾಚಿದ ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ (QISF)

ವರದಿಗಾರ  (ಜ 15) : ದಿನಾಂಕ 22-11-2018 ರಂದು, ಶಬ್ಬೀರುದ್ದೀನ್ ಕಾಟಿಪಾಳ್ಯ ಎಂಬುವರು ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ನ ಸದಸ್ಯರಿಗೆ ಫೋನ್ ಮಾಡಿ ಅವರ ಸಹೋದ್ಯೋಗಿ ಸಜ್ಜು ಎಂಬುವವರ ನೆರೆಮನೆಯವರಾದ, ಕೇರಳದ ಕೊಳ್ಳಂ ಜಿಲ್ಲೆಯ ಪುಟ್ಟಕುಲಂ ಒಣ್ಣಿನಮಡು ನಿವಾಸಿ ೩೫ ವರ್ಷದ ಶ್ಯಾಮದಾಸ್ ಮಾನಸಿಕವಾಗಿ ಅಸ್ವಸ್ಥರಾದ ಕಾರಣ ಪೊಲೀಸರು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದರು. ಅವರನ್ನು ಊರಿಗೆ ಕಳುಹಿಸಿ ಕೊಡಲು ತಮ್ಮಿಂದ ಸಾಧ್ಯವಾಗದ ಕಾರಣ QISF ನ ನೆರವನ್ನು ಕೇಳಿದರು.

ಇದಕ್ಕೆ ಪೂರಕವಾಗಿ, ಪ್ರತಿಕ್ರಯಿಸಿದ QISF ನ ಝಕ್ರಿಯ ಪಾಂಡೇಶ್ವರ, ಲತೀಫ್ ಮಡಕೇರಿ ಮತ್ತು ಫಸೀಉದ್ದೀನ್ ತಂಡವು, ಶ್ಯಾಮದಾಸ್ ಗೆ ನಿಕಟವಾಗಿದ್ದ ಬೈಜು ರಾಬರ್ಟ್ ಎಂಬುವರನ್ನು ಸಂಪರ್ಕಿಸಿ ಅವರಿಂದ ಅಗತ್ಯವಾದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿತು.

ನಂತರ QISF ತಂಡವು ಕತಾರ್ ನ ಹಮದ್ ಆಸ್ಪತ್ರೆಯ ಮನೋರೋಗಿಗಳ ವಿಭಾಗಕ್ಕೆ ಭೇಟಿ ನೀಡಿ, ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶ್ಯಾಮದಾಸ್ ರವರನ್ನು ಭೇಟಿಯಾಗಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕಂಡು ಅವರ ಆರೋಗ್ಯದ ಬಗ್ಗೆ ವಿಚಾರಿಸಿದಾಗ ಶ್ಯಾಮದಾಸ್ ಇದ್ದ ಸ್ಥಿತಿಯಲ್ಲಿ ಅವರು ತಾಯ್ನಾಡಿಗೆ ಪ್ರಯಾಣಿಸಲು ಸಾಧ್ಯವಿಲ್ಲ ಮತ್ತು ಅವರಿಗೆ ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಯಿತು.

ಈ ವಿಷಯವನ್ನು ಶ್ಯಾಮದಾಸ್ ರ ಕುಟುಂಬದವರಿಗೆ ಮತ್ತು ಕತಾರ್ ನಲ್ಲಿರುವ ನಿಕಟವರ್ತಿಗಳಿಗೆ ತಿಳಿಸಿ, ಶ್ಯಾಮದಾಸ್ ಸಂಪೂರ್ಣವಾಗಿ ಗುಣಮುಖರಾಗುವವರೆಗೂ QISF ನ ಸಂಪರ್ಕದಲ್ಲಿರುತ್ತಾರೆ ಮತ್ತು ಅವರ ಬಗ್ಗೆ ಚಿಂತೆ ಮಾಡದೆ ನೆಮ್ಮದಿಯಿಂದ ಇರಬೇಕೆಂದು ಅವರ ಕುಟುಂಬಕ್ಕೆ ಸಮಾಧಾನ ಮತ್ತು ಸಾಂತ್ವನ ನೀಡಿದರು.

QISF ತಂಡ ಪ್ರತಿದಿನ, ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರ ಜೊತೆ ಸಮಾಲೋಚನೆ ನಡೆಸಿ, ಶ್ಯಾಮದಾಸ್ ರ ಆರೋಗ್ಯದ ಬಗ್ಗೆ, ಅವರ ಸುಧಾರಣೆಯ ಬಗ್ಗೆ ಮಾಹಿತಿ ಪಡೆದು, ಶ್ಯಾಮದಾಸ್ ರನ್ನು ಅವರ ಕುಟುಂಬದ ಜೊತೆ ದೂರವಾಣಿಯ ಮೂಲಕ ಮಾತನಾಡಲು ಅವಕಾಶ ಮಾಡಿಕೊಟ್ಟು, ಅವರ ಬಗ್ಗೆ ಗಮನವಿಟ್ಟಿತ್ತು. ದಿನೇ ದಿನೇ ಅವರ ಆರೋಗ್ಯದಲ್ಲಿ ಸುಧಾರಣೆ ಕೂಡ ಕಂಡು ಬಂದಿತ್ತು.

ಶ್ಯಾಮದಾಸ್ ಮಾನಸಿಕ ಅಸ್ವಸ್ಥರಾಗಿದ್ದ ಕಾರಣ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಹಲವು ದೂರುಗಳನ್ನು ಕೂಡ ದಾಖಲಿಸಿದ್ದರಿಂದ, ಅವರನ್ನು ಊರಿಗೆ ಕಳುಹಿಸಲು ತಡವಾಗುತ್ತಿತ್ತು. ಇದನ್ನರಿತ QISF ತಂಡವು, ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಶ್ಯಾಮದಾಸ್ ರ ಮಾನಸಿಕ ಅಸ್ವಸ್ಥತೆಯ ಬಗ್ಗೆ ವಿವರವಾಗಿ ತಿಳಿಸಿ, ಅವರ ಮೇಲೆ ದಾಖಲಾಗಿದ್ದ ದೂರುಗಳನ್ನು ಹಿಂಪಡೆಯುವಲ್ಲಿ ಯಶಸ್ವಿಯಾಯಿತು.

ಸುಮಾರು 18 ದಿನಗಳ ಚಿಕಿತ್ಸೆ ಮತ್ತು ಆರೈಕೆಯ ನಂತರ, ಶ್ಯಾಮದಾಸ್ ರವರ ಆರೋಗ್ಯದಲ್ಲಿ ಸುಧಾರಣೆ ಕಂಡು ವೈದ್ಯರ ಅಪ್ಪಣೆ ಪಡೆದು, ದಿನಾಂಕ 10-01-2019 ರಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ, QISF ನ ಲತೀಫ್ ಮಡಕೇರಿ, ಅಲ್ತಾಫ್ ಮಡಕೇರಿ, ಷರೀಫ್ ವಗ್ಗ ಮತ್ತು ಅಶ್ರಫ್ ಪುತ್ತೂರ್ ರವರು ವಿಮಾನ ನಿಲ್ದಾಣಕ್ಕೆ ಕರೆದು ಕೊಂಡು ಹೋಗಿ ಕತಾರ್ ನಿಂದ ಕೊಚ್ಚಿನ್ ಗೆ ಹೋಗುವ ಕತಾರ್ ಏರ್ವೇಸ್ ವಿಮಾನದಲ್ಲಿ ಕಳುಹಿಸಿಕೊಟ್ಟರು ಮತ್ತು ಅವರ ಕುಟುಂಬದವರಿಗೆ ವಿಷಯ ತಿಳಿಸಿದರು.

ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ನ ನಿಸ್ವಾರ್ಥ ಸೇವೆಯನ್ನು ಬೈಜು ರಾಬರ್ಟ್, ಸಜ್ಜು ಮತ್ತು ಶ್ಯಾಮದಾಸ್ ರ ಕುಟುಂಬದವರು ಮುಕ್ತ ಕಂಠದಿಂದ ಪ್ರಶಂಸಿಸಿದರು.

To Top
error: Content is protected !!
WhatsApp chat Join our WhatsApp group