ವಿದೇಶ ಸುದ್ದಿ

‘ಪ್ರವಾದಿ ನಿಂದಕ ಟಿವಿ ನಿರೂಪಕನನ್ನು ಬಂಧಿಸಿ’ : ದುಬೈ ರಾಹುಲ್ ಗಾಂಧಿ ಸಭೆಯಲ್ಲೂ ಮೊಳಗಿದ ಕೂಗು !

➤ 750 ಕ್ಕೂ ಹೆಚ್ಚು ದೂರುಗಳು ದಾಖಲಾದರೂ ಇನ್ನೂ ಬಂಧನವಾಗಿಲ್ಲ !!

ವರದಿಗಾರ ಜ 13 : ಮುಸ್ಲಿಮರ ಪ್ರವಾದಿ ಮುಹಮ್ಮದರನ್ನು ತನ್ನ ಕಾರ್ಯಕ್ರಮವೊಂದರಲ್ಲಿ ಅನಗತ್ಯವಾಗಿ ಉಲ್ಲೇಖಿಸಿ ನಿಂದನಾತ್ಮಕವಾಗಿ ಹೇಳಿಕೆ ನೀಡಿದ ಸುವರ್ಣ ಚಾನೆಲಿನ ಸುದ್ದಿ ನಿರೂಪಕ ಅಜಿತ್ ಹನುಮಕ್ಕನನ್ನು ಬಂಧಿಸಿ ಎನ್ನುವ ಕೂಗು ರಾಜ್ಯ ಮತ್ತು ದೇಶದ ಗಡಿಯನ್ನು ದಾಟಿ ದೂರದ ದುಬೈಯಲ್ಲೂ ಮೊಳಗಿದೆ. ಕಾಂಗ್ರೆಸ್ ರಾಷ್ಟ್ರೀಯಾಧ್ಯಕ್ಷ ಶ್ರೀ ರಾಹುಲ್ ಗಾಂಧಿಯವರು ‘ಗಾಂಧಿ 150’ ಎಂಬ ಕಾರ್ಯಕ್ರಮದಲ್ಲಿ ದುಬೈನ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡುವ ಸಭೆಯಲ್ಲಿ ಹಲವಾರು ಕನ್ನಡಿಗ ಯುವಕರು ‘ಅಜಿತ್ ನನ್ನು ಬಂಧಿಸಿ, ಸುವರ್ಣ ಚಾನೆಲನ್ನು ಬಹಿಷ್ಕರಿಸಿ’ ಎಂಬ ಭಿತ್ತಿ ಪತ್ರಗಳನ್ನು ಪ್ರದರ್ಶಿಸುತ್ತಾ ತಮ್ಮ ಕೋಪ ಪ್ರದರ್ಶಿಸಿದ್ದಾರೆ.

ಕನ್ನಡ ಸುದ್ದಿ ಮಾಧ್ಯಮ ‘ಸುವರ್ಣ ನ್ಯೂಸ್’ ನ ಸುದ್ದಿ ನಿರೂಪಕ ಅಜಿತ್ ಹನುಮಕ್ಕನವರ್ ಇತ್ತೀಚೆಗಿನ ತನ್ನ ಕಾರ್ಯಕ್ರಮವೊಂದರಲ್ಲಿ ಪ್ರಗತಿಪರ ಚಿಂತಕ ಪ್ರೊಫೆಸರ್ ಭಗವಾನ್ ಅವರು ಶ್ರೀರಾಮನ ಕುರಿತು ಅವಹೇಳನಕಾರಿಯಾಗಿ ತನ್ನ ಪುಸ್ತಕದಲ್ಲಿ ಚಿತ್ರಿಸಿದ್ದಾರೆ ಎನ್ನುವುದರ ಕುರಿತು ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದಾಗ, ಮುಸ್ಲಿಮರು ಗೌರವಿಸುವ ಪ್ರವಾದಿ ಮುಹಮ್ಮದರ ಹೆಸರನ್ನು ಉಲ್ಲೇಖಿಸದೆಯೇ ಅನಗತ್ಯವಾಗಿ ಎಳೆದು ತಂದು ನಿಂದನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿ ರಾಜ್ಯದ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿದ್ದ. ಮರುದಿನವೇ ನಿರೂಪಕ ಅಜಿತ್, ಅದೇ ಚಾನೆಲಿನಲ್ಲಿ ಬಂದು ಕ್ಷಮೆಯನ್ನೂ ಕೇಳಿದ್ದ. ಆದರೆ ರಾಜ್ಯದ ಮುಸ್ಲಿಮರು ಇದರಿಂದ ತೃಪ್ತರಾಗಿರಲಿಲ್ಲ. ರಾಜ್ಯದೆಲ್ಲೆಡೆ ಹಲವಾರು ಪ್ರತಿಭಟನೆಗಳು ನಡೆದು ವಿವಿಧ ಠಾಣೆಗಳಲ್ಲಿ 750 ಕ್ಕೂ ಹೆಚ್ಚಿನ ದೂರುಗಳು ದಾಖಲಾಗಿದ್ದು, ಎರಡು ಎಫ್ ಐ ಆರ್ ಕೂಡಾ ದಾಖಲಾಗಿತ್ತು. ಆದರೆ ರಾಜ್ಯ ಸರ್ಕಾರ ಮಾತ್ರ ಧರ್ಮವೊಂದರ ಅನುಯಾಯಿಗಳ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿದ ಆ ನಿರೂಪಕನ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದು ಮುಸ್ಲಿಮರ ಕೋಪಕ್ಕೆ ಕಾರಣವಾಗಿದೆ.

ಅಜಿತನ ವಿರುದ್ಧ ಇಷ್ಟೊಂದು ದೂರುಗಳು ದಾಖಲಾಗಿದ್ದರೂ ರಾಜ್ಯ ಗೃಹ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತದ್ದು ಹಲವರ ಕಣ್ಣು ಕೆಂಪಗಾಗಿಸಿದೆ. ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಮಾಧ್ಯಮ ಧರ್ಮ ಪಾಲನೆಯಲ್ಲಿ ಎಡವಿರುವ ಮತ್ತು ಸಮಾಜದ ಶಾಂತಿಗೆ ಮಾರಕವಾಗುವಂತಹಾ ಹೇಳಿಕೆ ನೀಡಿರುವ ಓರ್ವನ ವಿರುದ್ಧ ಕ್ರಮ ಜರುಗಿಸಲು ರಾಜ್ಯ ಸರಕಾರ ಹಿಂದೇಟು ಹಾಕಲು ಕಾರಣಗಳನ್ನೂ ರಾಜ್ಯದ ಜನತೆ ಕೇಳುತ್ತಿದ್ದಾರೆ. ಈ ಮಧ್ಯೆ ಅಜಿತ್ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆ ನಡೆಸದಂತೆ ರಾಜ್ಯ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಜನವರಿ 16ಕ್ಕೆ ಮುಂದಿನ ವಿಚಾರಣೆಯನ್ನು ಕಾಯ್ದಿರಿಸಿದೆ

To Top
error: Content is protected !!
WhatsApp chat Join our WhatsApp group