ರಾಷ್ಟ್ರೀಯ ಸುದ್ದಿ

ಕುಮಾರಸ್ವಾಮಿ ಓರ್ವ ‘ಗುಮಾಸ್ತ’ : ಮೋದಿ ಹತಾಶ ಹೇಳಿಕೆಗೆ ವ್ಯಾಪಕ ಟೀಕೆ

ವರದಿಗಾರ ಜ 13 : ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಮಾತನಾಡುವಾಗ, ‘ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಅಲ್ಲಿನ ಮುಖ್ಯಮಂತ್ರಿ ಓರ್ವ ಗುಮಾಸ್ತರಂತೆ ಕೆಲಸ ಮಾಡುತ್ತಿದ್ದಾರೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಚುನಾಯಿತ ಜನಪ್ರತಿನಿಧಿ ಸರ್ಕಾರವೊಂದರ ಮುಖ್ಯಸ್ಥರೊಬ್ಬರ ವಿರುದ್ಧ ಗೌರವಯುತ ಪ್ರಧಾನಮಂತ್ರಿ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರಿಂದ ಈ ರೀತಿಯ ಕೀಳ್ಮಟ್ಟದ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ.

ಈ ಕುರಿತು ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಮುಖ್ಯಮಂತ್ರಿಯವರ ಅಧಿಕೃತ ಟ್ವಿಟ್ಟರ್ ಖಾತೆಯಿಂದಲೇ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ‘ನಾನು ನೀಡದೆ ಇರುವ ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನಮಂತ್ರಿಗಳು ನೀಡಿರುವ ಹೇಳಿಕೆ ಹಾಸ್ಯಾಸ್ಪದ’ ಎಂದಿದ್ದಾರೆ. ಸುಳ್ಳು ಹೇಳಿಕೆಗಳ ಮೇಲೆ ಮೋದಿ ಪ್ರತಿಕ್ರಿಯೆ ನೀಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ರೈತರ ಸಾಲಮನ್ನಾದ ಬಗ್ಗೆಯೂ ಪ್ರಧಾನಮಂತ್ರಿಗಳು ಹೇಳಿಕೆ ನೀಡಿದ್ದು, ಆದರೆ ಇದಾವುದೂ ಸಮ್ಮಿಶ್ರ ಸರಕಾರದ ಅಭಿವೃದ್ಧಿ ಆಡಳಿತಕ್ಕೆ ತೊಡಕಾಗದು’ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದ ಸಮ್ಮಿಶ್ರ ಸರಕಾರದ ಪತನಕ್ಕೆ ಬಕಪಕ್ಷಿಗಳಂತೆ ಕಾಯುತ್ತಿರುವ ಕೆಲ ಮಾಧ್ಯಮಗಳು ಇತ್ತೀಚೆಗೆ ಕುಮಾರಸ್ವಾಮಿಯವರು , ಕಾಂಗ್ರೆಸ್ ಆಡಳಿತ ವಿಷಯಗಳಲ್ಲಿ ಮೂಗು ತೂರಿಸುತ್ತಿರುವುದರಿಂದ ನಾನೊಬ್ಬ ಗುಮಾಸ್ತನಂತೆ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದರೆಂದು ವರದಿ ಮಾಡಿದ್ದವು. ಆದರೆ ಮರುದಿನವೇ ಕುಮಾರಸ್ವಾಮಿಯವರು ನಾನು ಆ ರೀತಿ ಹೇಳಿಯೇ ಇಲ್ಲವೆಂದು ಮಾಧ್ಯಮಗಳ ಹೇಳಿಕೆಗಳನ್ನು ತಳ್ಳಿಹಾಕಿದ್ದರಲ್ಲದೆ, ಅವೆಲ್ಲವೂ “ಕಲ್ಪನೆ ಹಾಗೂ ಊಹೆ”ಗಳಿಂದ ಕೂಡಿದ ಹೇಳಿಕೆಗಳು ಎಂದು ನೇರವಾಗಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಅಂತಹಾ ಮಾಧ್ಯಮಗಳ ನಕಲಿ ಸುದ್ದಿಗಳ ಹೇಳಿಕೆಯನ್ನಾಧರಿಸಿದ ಮೋದಿಯವರ ಕೆಣಕುವಿಕೆ ದೋಸ್ತಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ.

ಒಟ್ಟಿನಲ್ಲಿ ಸಿಕ್ಕ ಅವಕಾಶಗಳಲ್ಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಸಮ್ಮಿಶ್ರ ಸರಕಾರವನ್ನು ಟೀಕಿಸಲು ಉಪಯೋಗಿಸುತ್ತಿರುವುದನ್ನು ನೋಡಿದರೆ ಕರ್ನಾಟಕದಲ್ಲಿ ಅಧಿಕಾರದ ಸಮೀಪವಿದ್ದರೂ ಅಧಿಕಾರ ಕೈಗೆಟುಕದ ನಿರಾಶೆ ಹಾಗೂ ಇತ್ತೀಚೆಗಿನ ಪಂಚರಾಜ್ಯಗಳ ಬಿಜೆಪಿ ಪಕ್ಷದ ಸೋಲು, ಅಧಿಕಾರವಿಲ್ಲದಾಗಿನ ಪಕ್ಷದ ನಾಯಕರ ಹತಾಶೆಯನ್ನು ಎತ್ತಿ ತೋರಿಸುವಂತಿದೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

To Top
error: Content is protected !!
WhatsApp chat Join our WhatsApp group