ರಾಷ್ಟ್ರೀಯ ಸುದ್ದಿ

ಮೀಸಲಾತಿ ನೀಡಲಾಗಿದೆ, ಆದರೆ ಉದ್ಯೋಗಗಳೆಲ್ಲಿ?; ಮೀಸಲಾತಿ ಘೋಷಣೆಯು ಮೋದಿ ಸರಕಾರಕ್ಕೆ ಮುಳುವಾಗಲಿದೆ: ಭವಿಷ್ಯ ನುಡಿದ ಶಿವಸೇನೆ

‘ಯುವಜನತೆಗೆ ಪಕೋಡಾ ಮಾರುವಂತೆ ಹೇಳಿದ ಪ್ರಧಾನಿ ಈಗ ಮೀಸಲಾತಿ ಘೋಷಿಸಿದ್ದಾರೆ’

‘ಉದ್ಯೋಗ ಸೃಷ್ಟಿ, ಬಡತನ ನಿವಾರಣೆಯಲ್ಲಿ ವಿಫಲವಾದಾಗ ಮೀಸಲಾತಿ ಮೂಲಕ ಜನರ ವಿಶ್ವಾಸ ಸಂಪಾದಿಸಲು ಯತ್ನಿಸುತ್ತಾರೆ’

ವರದಿಗಾರ (ಜ.11): ಮೀಸಲಾತಿ ಘೋಷಣೆಯು ಮತಗಳ ಮೇಲೆ ಕಣ್ಣಿರಿಸಿ ತೆಗೆದುಕೊಳ್ಳಲಾಗಿದ್ದರೆ ಅದು ಮೋದಿ ಸರಕಾರಕ್ಕೆ ಮುಳುವಾಗಲಿದೆ ಎಂದು  ಶಿವಸೇನೆ ಭವಿಷ್ಯ ನುಡಿದಿದೆ.

ಮೇಲ್ವರ್ಗದ ಆರ್ಥಿಕ ದುರ್ಬಲರಿಗೆ ಸರಕಾರಿ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಶೇ.10 ಮೀಸಲಾತಿಯೊದಗಿಸಲು ಸಂವಿಧಾನ ತಿದ್ದುಪಡಿಗೆ ಸಂಸತ್ತು ಅನುಮೋದನೆ ನೀಡಿದ ಬಗ್ಗೆ ಶಿವಸೇನೆ  ತನ್ನ ಮುಖವಾಣಿ  ಸಾಮ್ನಾದ ಸಂಪಾದಕೀಯದಲ್ಲಿ ಪ್ರತಿಕ್ರಿಯಿಸಿದೆ.

‘ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೂ ಮೀಸಲಾತಿ ನೀಡಲಾಗಿದೆ. ಆದರೆ ಉದ್ಯೋಗಗಳೆಲ್ಲಿ?’ ಎಂದು ಪ್ರಶನಿಸಿರುವ ಶಿವಸೇನೆ, ‘ಯುವಜನರಿಗೆ ಪಕೋಡಾ ಮಾರುವಂತೆ ಹೇಳಿದ ಪ್ರಧಾನಿ ಅಂತಿಮವಾಗಿ ಆರ್ಥಿಕವಾಗಿ ದುರ್ಬಲರಿಗೆ ಶೇ 10 ಮೀಸಲಾತಿ ನೀಡುವಂತಾಯಿತು’ ಎಂದು ಹೇಳಿದೆ.

‘ಅಧಿಕಾರದಲ್ಲಿರುವವರು  ‘ಉದ್ಯೋಗ ಸೃಷ್ಟಿ, ಬಡತನ ನಿವಾರಣೆಯಲ್ಲಿ ವಿಫಲವಾದಾಗ ಮೀಸಲಾತಿ ಮೂಲಕ ಜನರ ವಿಶ್ವಾಸ ಸಂಪಾದಿಸಲು ಯತ್ನಿಸುತ್ತಾರೆ’ ಎಂದು ಶಿವಸೇನೆ ಆರೋಪಿಸಿದೆ. ಶೇ 10 ಮೀಸಲಾತಿ ನಂತರ ಅರ್ಹ ಯುವಜನತೆಗೆ ಏನಾದರೂ ಲಾಭವಿದೆಯೇ?. ದೇಶದಲ್ಲಿನ ಉದ್ಯೋಗ ಪ್ರಮಾಣದಲ್ಲಿ ಸಮತೋಲನ ಸಾಧಿಸಲು ಪ್ರತಿ ವರ್ಷ ಸುಮಾರು 80ರಿಂದ 90 ಲಕ್ಷ ಹೊಸ ಉದ್ಯೋಗಾವಕಾಶಗಳ ಅಗತ್ಯವಿದೆ. ಕಳೆದ ಎರಡು ವರ್ಷಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುವ ಬದಲು ಕಡಿಮೆಯಾಗಿವೆ. ಅಮಾನ್ಯೀಕರಣ ಮತ್ತು ಜಿಎಸ್‍ಟಿಯಿಂದಾಗಿ 1.5 ಕೋಟಿಯಿಂದ 2 ಕೋಟಿ ತನಕ ಉದ್ಯೋಗ ನಷ್ಟವಾಗಿವೆ. ಯುವಜನತೆಯಲ್ಲಿ ಅಸಹಾಯಕತೆಯ ಭಾವನೆಯಿದೆ” ಎಂದು ಸಂಪಾದಕೀಯ ಹೇಳಿದೆ.

“2018ರಲ್ಲಿ ರೈಲ್ವೆಯಲ್ಲಿ 90 ಲಕ್ಷ ಉದ್ಯೋಗಗಳಿಗೆ 2.8 ಕೋಟಿ ಜನರು ಅರ್ಜಿ ಸಲ್ಲಿಸಿದ್ದರು. ಮುಂಬೈ ಪೊಲೀಸ್ ಇಲಾಖೆಯ 1,137 ಹುದ್ದೆಗಳಿಗೆ  ನಾಲ್ಕು ಲಕ್ಷಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದರೆ ಹಲವಾರು ಮಂದಿಗೆ ಅಗತ್ಯಕ್ಕಿಂತ ಹೆಚ್ಚು ಶೈಕ್ಷಣಿಕ ಅರ್ಹತೆಯಿತ್ತು” ಎಂದೂ ಶಿವಸೇನೆ ಹೇಳಿದೆ.

To Top
error: Content is protected !!
WhatsApp chat Join our WhatsApp group