ರಾಷ್ಟ್ರೀಯ ಸುದ್ದಿ

ಕೇರಳ ಬಂದ್ : ಪತ್ತನಂತಿಟ್ಟ ಬಿಜೆಪಿ ನಾಯಕನ ಮನೆಯ ಮೇಲೆ ದಾಳಿ ಮಾಡಿದ ಆರೆಸ್ಸೆಸ್ ಕಾರ್ಯಕರ್ತರಿಬ್ಬರ ಸೆರೆ

➤ ದಾಳಿಯನ್ನು ಕಮ್ಯುನಿಸ್ಟ್ ಕಾರ್ಯಕರ್ತರ ಮೇಲೆ ಹೊರಿಸಲು ಸಂಚು ರೂಪಿಸಿದ್ದ ಸಂಘಪರಿವಾರ !

ವರದಿಗಾರ  (ಜ 8) : ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಬಿಜೆಪಿ ಮತ್ತು ಸಂಘಪರಿವಾರಗಳು ಜನವರಿ ಮೂರರಂದು ಕೇರಳ ಬಂದ್’ಗೆ   ಕರೆ ನೀಡಿದ್ದವು. ಬಂದನ್ನು ಯಶಸ್ವಿಗೊಳಿಸಲು ಪತ್ತನಂತಿಟ್ಟ ಸ್ಥಳೀಯ ನಾಯಕರೊಬ್ಬರ ಮನೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಸಭೆ ಸೇರಿದ್ದರು. ಸಭೆ ನಡೆಯುತ್ತಿದ್ದ ವೇಳೆ ಕಲ್ಲೆಸೆದು ಮನೆಯ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿಗಳು ಮನೆಯ ಕಿಟಕಿ ಬಾಗಿಲುಗಳನ್ನು ಜಖಂಗೊಳಿಸಿದ್ದರು. ತದ ನಂತರ ಈ ದಾಳಿಯನ್ನು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಮಾಡಿದ್ದಾರೆಂದು ಸುದ್ದಿ ಹಬ್ಬಿಸಿದ್ದರು. ಆದರೆ ಸೂಕ್ತವಾಗಿ ತನಿಖೆ ನಡೆಸಿದ ಕೇರಳ ಪೊಲೀಸರು ಸ್ಥಳದಲ್ಲಿ ಲಭ್ಯವಿದ್ದ ದೃಶ್ಯಗಳು ಹಾಗೂ ಸಾಕ್ಷ್ಯಾಧಾರಗಳ ನೆಲೆಯಲ್ಲಿ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಯಿಮಣ್ಣತ್ತ್  ವಿಜಯನ್ ಪಿಳ್ಳೆಯ ಮಕ್ಕಳಾದ ವಿಪಿನ್ ವಿ ಪಿಳ್ಳೆ (21) ಹಾಗೂ 17ರ ಹರೆಯದ ಮತ್ತೋರ್ವನನ್ನು ಆತನ ಸಹೋದರನೆಂದು ಗುರುತಿಸಲಾಗಿದೆ.

ಪತ್ತನಂತಿಟ್ಟದ ಬಿಜೆಪಿಯ ಮುಂಚೂಣಿ ನಾಯಕರೂ, ವೆಳ್ಳಿಕ್ಕೋಟ್ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕಯಿಮಣ್ಣತ್ತ್ ಗೋಪಾಲಕೃಷ್ಣನ್ ನಾಯರ್ ರವರು ಕೇರಳ ಬಂದನ್ನು ಯಶಸ್ವಿಗೊಳಿಸಲು ತನ್ನ ಮನೆಯಲ್ಲಿ ಪಕ್ಷದ ಸಭೆ ಕರೆದಿದ್ದರು. ಆ ವೇಳೆ ವಿಪಿನ್ ನೇತೃತ್ವದ ಗುಂಪು ಬಿಜೆಪಿ ನಾಯಕರ ಮನೆಯ ಮೇಲೆಯೇ ದಾಳಿ ಮಾಡಿತ್ತು. ಪತ್ತನಂತಿಟ್ಟ ಜಿಲ್ಲಾ ಆರೆಸ್ಸೆಸ್ಸಿನ ಮುಖ್ಯ ದೈಹಿಕ್ ಶಿಕ್ಷಕ್ ಆಗಿರುವ ವಿಪಿನ್’ನ ಬಂಧನದೊಂದಿಗೆ ಘಟನೆಯನ್ನು ಕಮ್ಯುನಿಸ್ಟ್ ಪಕ್ಷದ ಮೇಲೆ ಹೊರಿಸುವ ಸಂಘಪರಿವಾರದ ತಂತ್ರ ವಿಫಲಗೊಂಡಿದೆ. ಘಟನೆಯ ಕುರಿತು ಗೋಪಾಲಕೃಷ್ಣನ್ ನಾಯರ್ ಪೊಲೀಸ್ ದೂರು ದಾಖಲಿಸಿದ್ದರು. ಇದರ ಕುರಿತು ತನಿಖೆ ನಡೆಸಿದ ಪೊಲೀಸ್ ಘಟನೆಯಲ್ಲಿ ಪಾಲ್ಗೊಂಡಿದ್ದವರನ್ನು ಬಂಧಿಸಿದ್ದಾರೆ.

To Top
error: Content is protected !!
WhatsApp chat Join our WhatsApp group